
ಬೆಂಗಳೂರು (ಮೇ.04): ಲೋಕಸಭೆ ಚುನಾವಣೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಲು ಮುಂದಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈಗ 95 ದಿನಗಳ ದೇಶಯಾತ್ರೆ ಆರಂಭಿಸಿದ್ದಾರೆ. ಆದರೆ ಇವರ ಯಾತ್ರೆ ಈಗ ಮೂರು ತಿಂಗಳಿಂದ 5 ತಿಂಗಳಿಗೆ ವಿಸ್ತರಣೆ ಆಗಲಿದ್ದು, ಸುಮಾರು 1 ಲಕ್ಷ ಕಿ.ಮೀ.ನಷ್ಟುಅವರು ಈ ಸಂದರ್ಭದಲ್ಲಿ ಸಂಚರಿಸಲಿದ್ದಾರೆ.
ಏ.25ರಿಂದ ಯಾತ್ರೆ ಆರಂಭಿಸಿರುವ ಅಮಿತ್ ಶಾ, ಸೆ.25ರವರೆಗೆ ದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಅವಧಿಯಲ್ಲಿ ಅವರು ಪ್ರತಿ ತಿಂಗಳಿಗೆ ಅಂದಾಜು 20 ಸಾವಿರ ಕಿ.ಮೀ. ಯಾತ್ರೆ ನಡೆಸಲಿದ್ದಾರೆ.
ಯಾತ್ರೆಯ ಅಂಗವಾಗಿ ಕರ್ನಾಟಕಕ್ಕೆ ಅವರು ಆಗಸ್ಟ್ 3, 4, 5ಕ್ಕೆ ಆಗಮಿಸಲಿದ್ದಾರೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ. ಕರ್ನಾಟಕ ಭೇಟಿ ವೇಳೆ ಅಮಿತ್ ಶಾ ಸಭೆ-ಸಮಾರಂಭಗಳಲ್ಲಿ ಮಾತನಾಡಲಿದ್ದು, ಬೆಂಗಳೂರಿನಲ್ಲೇ ತಂಗಲಿದ್ದಾರೆ. ಜೊತೆಗೆ ರಾಜ್ಯದ ಮುಖಂಡರೊಂದಿಗೆ ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಲಿದ್ದಾರೆ.
ಕರ್ನಾಟಕ ಬಿಜೆಪಿಯಲ್ಲಿ ಬಣಜಗಳ ವ್ಯಾಪಕವಾಗಿರುವ ಕಾರಣ ಶಾ ಭೇಟಿ ಮಹತ್ವ ಪಡೆಯಲಿದೆ.
ಈಗ ನಿಗದಿ ಮಾಡಿರುವ ದಿನಾಂಕ ಬಹುತೇಕ ಖಚಿತ. ಇನ್ನು ಕೆಲ ರಾಜ್ಯಗಳಲ್ಲಿ ಉದ್ಭವಿಸಬಹುದಾದ ರಾಜಕೀಯ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟು ಕೊಂಡು ಕೆಲವೊಂದು ದಿನಾಂಕ ಕಡೆಯ ಹಂತದಲ್ಲಿ ಬದಲಾವಣೆ ಆದರೂ ಆಗಬಹುದು ಎಂದು ಮೂಲಗಳು ತಿಳಿಸಿವೆ. ಶಾ ಅವರು ವಿವಿಧ ರಾಜ್ಯಗಳ ಭೇಟಿಯನ್ನು ಎ, ಬಿ, ಸಿ ಎಂದು ವರ್ಗೀಕರಿಸಿದ್ದಾರೆ.
ಕರ್ನಾಟಕ ಸೇರಿದಂತೆ 19 ಮಹತ್ವದ ರಾಜ್ಯಗಳು ಎ ವಿಭಾಗದಲ್ಲಿ ಬರಲಿದ್ದು, ಅಲ್ಲಿ 3 ದಿನ ತಂಗಲಿದ್ದಾರೆ. ಮಧ್ಯಮ ಗಾತ್ರದ 7 ರಾಜ್ಯಗಳಲ್ಲಿ 2 ದಿನ ಹಾಗೂ 9 ಸಣ್ಣಪುಟ್ಟರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1 ದಿನ ಪ್ರವಾಸ ಮಾಡಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.