
ತಿರುವನಂತಪುರಂ: ಕೇರಳ ಬಿಜೆಪಿ ಹಮ್ಮಿಕೊಂಡಿದ್ದ ಜನರಕ್ಷಾ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರನ್ನು ಕೊಲ್ಲಲೆಂದೇ ಪಿಣರಾಯಿ ವಿಜಯನ್ ಅಧಿಕಾರ ಬಂದಿದ್ದಾರೆಯೇ ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.
ಬಿಜೆಪಿ ಸಿದ್ಧಾಂತವನ್ನು ನಿರ್ಮೂಲನ ಮಾಡಲು ಕೇರಳ ಸರ್ಕಾರ ಅದೆಷ್ಟೇ ಪ್ರಯತ್ನಿಸಲಿ, ಬಿಜೆಪಿ ಸಿದ್ಧಾಂತವು ರಾಜ್ಯಾದ್ಯಂತ ತಲುಪುವುದು ಶತಸಿದ್ಧ, ಎಂದು ಅಮಿತ್ ಶಾ ಗುಡುಗಿದ್ದಾರೆ.
ಇಂದು ದೇಶದಲ್ಲಿ ಎಡರಂಗವು ಕಣ್ಮರೆಯಾಗುತ್ತಿರುವುದಕ್ಕೆ ಅದರ ‘ರಾಜಕೀಯ ಹಿಂಸೆ’ಯೇ ಕಾರಣವೆಂದಿರುವ ಅಮಿತ್ ಶಾ, ಪಿಣರಾಯಿ ವಿಜಯನ್ ಎಷ್ಟು ಕೆಸರೆರಚುತ್ತಾರೋ ಅಷ್ಟು ಕಮಲಗಳು ಅರಳುತ್ತವೆ, ಅವರು ಎಷ್ಟು ಹಿಂಸೆಯನ್ನು ನಡೆಸುತ್ತಾರೋ ಅಷ್ಟು ಬಿಜೆಪಿಯು ಬೆಳೆಯುತ್ತದೆ ಎಂದು ಹೇಳಿದ್ದಾರೆ.
ಸಿಪಿಐಎಮ್’ ನಡೆಸುತ್ತಿರುವ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಯ ನೈತಿಕ ಹೊಣೆಯನ್ನು ಪಿಣರಾಯಿ ವಿಜಯನ್ ಹೊರುತ್ತಾರೆಯೇ? ಎಂದು ಪ್ರಶ್ನಿಸಿದ ಶಾ, ಪಿಣರಾಯಿ ಸ್ಪರ್ಧಿಸುವುದಾದರೆ ಅಭಿವೃದ್ಧಿಯ ವಿಚಾರದಲ್ಲಿ ಸ್ಪರ್ಧಿಸಲಿ, ಹಿಂಸೆಯನ್ನು ನಡೆಸುವ ಮೂಲಕ ಅಲ್ಲ, ಎಂದು ಹರಿಹಾಯ್ದಿದ್ದಾರೆ.
ಕಳೆದ ಅ.03ರಂದು ರಾಜ್ಯದ ಉತ್ತರ ಭಾಗದಲ್ಲಿರುವ ಪಯ್ಯನೂರ್’ನಲ್ಲಿ ಆರಂಭವಾದ 15-ದಿನಗಳ ಜನರಕ್ಷಾ ಯಾತ್ರೆಯು ಇಂದು ತಿರುವನಂತಪುರಂನಲ್ಲಿ ಮುಕ್ತಾಯಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.