ಅ.1ರಿಂದ ಅಮೆರಿಕದಿಂದ ಇವರಿಗೆಲ್ಲಾ ಗೇಟ್‌ಪಾಸ್‌!

By Web DeskFirst Published Sep 28, 2018, 11:15 AM IST
Highlights

ದೇಶದಲ್ಲಿ ವಾಸ ಮಾಡುವ ಕಾನೂನಾತ್ಮಕ ಅವಧಿ ಮುಕ್ತಾಯವಾದ ಹಾಗೂ ವೀಸಾ ವಿಸ್ತರಣೆ ನಿರಾಕರಣೆಗೊಂಡ ವ್ಯಕ್ತಿಗಳನ್ನು ಗಡೀಪಾರು ಮಾಡಲು ಅವಕಾಶ ನೀಡುವ ಹೊಸ ನಿಯಮವನ್ನು ಅಮೆರಿಕ ಸೋಮವಾರದಿಂದ ಜಾರಿ ಮಾಡಲಿದೆ. 

ವಾಷಿಂಗ್ಟನ್‌: ಅಧಿಕಾರಕ್ಕೆ ಬಂದ ಆರಂಭದಲ್ಲಿ ಅಕ್ರಮ ವಲಸಿಗರನ್ನು ದೇಶದಿಂದ ಓಡಿಸುವುದಾಗಿ ಗುಡುಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ಇಳಿಸಿದ್ದಾರೆ. ದೇಶದಲ್ಲಿ ವಾಸ ಮಾಡುವ ಕಾನೂನಾತ್ಮಕ ಅವಧಿ ಮುಕ್ತಾಯವಾದ ಹಾಗೂ ವೀಸಾ ವಿಸ್ತರಣೆ ನಿರಾಕರಣೆಗೊಂಡ ವ್ಯಕ್ತಿಗಳನ್ನು ಗಡೀಪಾರು ಮಾಡಲು ಅವಕಾಶ ನೀಡುವ ಹೊಸ ನಿಯಮವನ್ನು ಅಮೆರಿಕ ಸೋಮವಾರದಿಂದ ಜಾರಿ ಮಾಡಲಿದೆ. 

ಹೀಗಾಗಿ ಸೂಕ್ತ ದಾಖಲೆಗಳಿಲ್ಲದೇ ಅಮೆರಿಕದಲ್ಲಿ ನೆಲೆಸಿರುವವರು ತಮ್ಮ ದೇಶಕ್ಕೆ ತೆರಳವುದು ಅನಿವಾರ್ಯವಾಗಿದೆ. ಆದರೆ, ಎಚ್‌-1ಬಿ ವೀಸಾ ಹೊಂದಿರುವವರಿಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಉದ್ಯೋಗ ಆಧಾರಿತ ಅರ್ಜಿಗಳು ಮತ್ತು ಮಾನವೀಯ ನಲೆಯಲ್ಲಿ ಕೆಲ ದಿನಗಳ ಮಟ್ಟಿಗೆ ಈ ನಿಯಮವನ್ನು ಜಾರಿಮಾಡುತ್ತಿಲ್ಲ. ಹೊಸ ನಿಯಮದ ಪ್ರಕಾರ, ವಿಸಾ ಅವಧಿ ವಿಸ್ತರಣೆ ನಿರಾಕರಿಸಲ್ಪಟ್ಟಿರುವ ವ್ಯಕ್ತಿಗಳಿಗೆ ‘ಹಾಜರಾಗುವ ನೋಟಿಸ್‌’ (ಎನ್‌ಟಿಎ) ಅನ್ನು ಜಾರಿ ಮಾಡಲಾತ್ತದೆ. ಅ.1ರಿಂದ ಹೊಸ ನಿಯಮವನ್ನು ಜಾರಿ ಮಾಡಲಾಗುವುದು ಎಂದು ಅಮೆರಿಕ ನಾಗರಿಕತ್ವ ಮತ್ತು ವಲಸೆ ಸೇವೆಗಳ ಸಂಸ್ಥೆ ತಿಳಿಸಿದೆ.

ಸೂಕ್ತ ದಾಖಲೆಗಳಿಲ್ಲದೇ ಕಾನೂನಾತ್ಮಕವಾಗಿ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳನ್ನು ದೇಶದಿಂದ ಹೊರಗಟ್ಟುವ ವಲಸೆ ಕಾನೂನಿನ ರೂಪಾಂತರವಾಗಿ ಹಾಜರಾಗುವ ನೋಟಿಸ್‌ ಅನ್ನು ಪರಿಗಣಿಸಲಾಗುತ್ತಿದೆ. ವಲಸೆ ನ್ಯಾಯಾಧೀಶರೊಬ್ಬರ ಮುಂದೆ ಇಂತಹ ವ್ಯಕ್ತಿಗಳು ಹಾಜಾರಾಗಿ ತಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ದಾಖಲೆಗಳನ್ನು ನೀಡುವಲ್ಲಿ ವಿಫಲವಾದಲ್ಲಿ ಅವರನ್ನು ಅಮೆರಿಕದಿಂದ ಗಡೀಪಾರು ಮಾಡಲಾಗುತ್ತದೆ.

click me!