ಸ್ಫೋಟಗೊಂಡ ಟಯರ್; ಆಂಬುಲೆನ್ಸ್'ನೊಳಗೇ ಪ್ರಸವ

By Suvarna Web DeskFirst Published Dec 25, 2016, 12:37 PM IST
Highlights

ಸಕಾಲದಲ್ಲಿ ಹೆರಿಗೆ ಮಾಡಿಸಿ ತಾಯಿ ಮಗುವಿನ ಜೀವ ಉಳಿಸಿದ 108 ವಾಹನದ ಸಿಬ್ಬಂದಿ ಕಾರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗಿದೆ.

ಬಳ್ಳಾರಿ(ಡಿ. 25): ಆ್ಯಂಬುಲೆನ್ಸ್ ವಾಹನದ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ತುಂಬು ಗರ್ಭಿಣಿ ಸೇರಿದಂತೆ ಅನೇಕ ಜೀವಗಳು ಉಳಿದುಕೊಂಡ ಘಟನೆ ಇಲ್ಲಿ ನಡೆದಿದೆ. 108 ಆಂಬುಲೆನ್ಸ್ ವಾಹನದ ಟೈರ್ ಸ್ಫೋಟಗೊಂಡು ತುಂಬು ಗರ್ಭಿಣಿಯ ಜೀವ ಅಪಾಯದಲ್ಲಿದ್ದ ಸಂದರ್ಭದಲ್ಲಿ ವಾಹನದ ಸಿಬ್ಬಂದಿ ಸಹಾಯಕ್ಕೆ ಬಂದು ಆ ಹೆಂಗಸಿಗೆ ಹೆರಿಗೆ ಮಾಡಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.

ಬಳ್ಳಾರಿ ತಾಲೂಕಿನ ಬೆಣಕಲ್ಲು ಗ್ರಾಮದಿಂದ ಬೆಳಗಿನ ಜಾವ ಪ್ರಸವ ವೇದನೆಯಲ್ಲಿದ್ದ ತುಂಬು ಗರ್ಭಿಣಿಯನ್ನು 108 ಆಂಬುಲೆನ್ಸ್ ವಾಹನದ ಮೂಲಕ 22 ಕಿಲೋ ಮೀಟರ್ ದೂರದ ಮೋಕಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿರುತ್ತದೆ. ಮಾರ್ಗಮಧ್ಯೆ ಎರ್ರಗುಡಿ ಗ್ರಾಮದ ಬಳಿ ಬಂದಾಗ 108 ವಾಹನದ ಎರಡು ಟೈರ್‌'ಗಳು ಸ್ಫೋಟಗೊಂಡಿವೆ. ಈ ವೇಳೆ ವಾಹನದ ಟೈರ್‌'ಗಳು ಸ್ಫೋಟಗೊಂಡಾಗ ಸಿಬ್ಬಂದಿ ಬಸವರಾಜ್ ಮತ್ತು ಹುಸೇನ್ ವಾಹನವನ್ನು ಸಕಾಲದಲ್ಲಿ ನಿಯಂತ್ರಣ ಮಾಡಿದ್ದಾರೆ. ಸ್ವಲ್ಪ ಯಾಮಾರಿದ್ದರೂ ಎಲ್ಲರ ಜೀವಕ್ಕೆ ಕುತ್ತಾಗುತ್ತಿತ್ತು. ಅದೇ ಸಂದರ್ಭದಲ್ಲಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಆಗ ಸಿಬ್ಬಂದಿಯೇ ಸಮಯಪ್ರಜ್ಞೆ ಮೆರೆದು ಹೆರಿಗೆ ಮಾಡಿಸುತ್ತಾರೆ. ಗಂಡು ಮಗು ಜನಿಸಿದ್ದು, ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ. ಸಕಾಲದಲ್ಲಿ ಹೆರಿಗೆ ಮಾಡಿಸಿ ತಾಯಿ ಮಗುವಿನ ಜೀವ ಉಳಿಸಿದ 108 ವಾಹನದ ಸಿಬ್ಬಂದಿ ಕಾರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗಿದೆ.

ಟೈರ್‌'ಗಳು ಸವೆದಿರುವುದೇ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ. ಈ ವಾಹನ  ಒಂದು ಲಕ್ಷ ಕಿಲೋ ಮೀಟರ್ ಸಂಚರಿಸಿದರೂ ಅವುಗಳ ಟೈರ್ ಬದಲಾಣೆ ಮಾಡದಿರುವುದು ಈ ಅವಘಡಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಇದೇ ರೀತಿ ಜಿಲ್ಲೆಯಲ್ಲಿರುವ ಬಹುತೇಕ 108 ವಾಹನಗಳು ದುಸ್ಥಿತಿಯಲ್ಲಿದ್ದು. ನಿರ್ವಹಣೆ ಮಾಡದಿದ್ದರೆ ಆರೋಗ್ಯ ರಕ್ಷಿಸಬೇಕಾದ ವಾಹನಗಳೇ ಜೀವ ಹೋಗಲು ಕಾರಣವಾದರೆ ಆಶ್ಚರ್ಯವಿಲ್ಲ.

click me!