
ಬೆಂಗಳೂರು(ಜು.14): ತಾವು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮಹಿಳಾ ಬ್ಯಾರೆಕ್'ಗೆ ಭೇಟಿ ನೀಡದೆ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಜೆ ಬಂಧಿಯಾಗಿರುವ ತಮಿಳುನಾಡು ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಿ.ನಟರಾಜನ್ ಅವರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂದು ಡಿಐಜಿ ಡಿ.ರೂಪಾ ವರದಿ ಸಲ್ಲಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಕಾರಾಗೃಹದ ಡಿಐಜಿ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಜೂ.23 ಮತ್ತು ಜು.೧೦ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಡಿಐಜಿ ಡಿ.ರೂಪಾ ಭೇಟಿ ನೀಡಿದ್ದರು. ಈ ವೇಳೆ ಅಡುಗೆ ಕೋಣೆ, ಆಸ್ಪತ್ರೆ ಹಾಗೂ ವಿಚಾರಣಾಧೀನ ಕೈದಿಗಳ (ಪುರುಷ) ಬ್ಯಾರೆಕ್‌ಗೆ ತೆರಳಿ ಪರಿಶೀಲಿಸಿದ್ದರು. ಆದರೆ ಈ ಎರಡು ಭೇಟಿ ಸಂದರ್ಭದಲ್ಲಿ ಶಶಿಕಲಾ ಅವರ ಸೆಲ್‌ಗೆ ಡಿಐಜಿ ಹೋಗಿರಲಿಲ್ಲ. ಹೀಗಾಗಿ ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಿದ್ದಾರೆ ಎಂಬ ಡಿಐಜಿ ಆರೋಪಕ್ಕೆ ಹುರುಳಿಲ್ಲ ಎಂದು ಕಾರಾಗೃಹದ ಉನ್ನತಾಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಶಶಿಕಲಾ ಅವರಿಗೆ ‘ಎ’ ದರ್ಜೆ ಕೈದಿ ಸೌಕರ್ಯ ಒದಗಿಸುವುದು ಕಾರಾಗೃಹದ ಮೇಲ್ವಿಚಾರಕರ ವಿವೇಚನೆಗೆ ನೀಡಲಾಗಿದೆ ಎಂದು ನ್ಯಾಯಾಲಯದ ಆದೇಶವಿದೆ. ಆದರೆ ಈವರೆಗೆ ಅವರಿಗೆ ಯಾವುದೇ ‘ಎ’ ದರ್ಜೆ ಸೌಲಭ್ಯ ನೀಡಿಲ್ಲ. ಮಹಿಳಾ ಬ್ಯಾರೆಕ್‌ನ 10/15 ಅಡಿ ಅಳತೆಯ ಕೊಠಡಿಯಲ್ಲೇ ಅವರನ್ನು ಇಡಲಾಗಿದೆ. ಇನ್ನು ತಮಿಳುನಾಡಿನಲ್ಲಿ ಅವರ ವಿರುದ್ಧ ಸುಮಾರು 30ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಈ ಪ್ರಕರಣಗಳ ಕಾನೂನು ಹೋರಾಟ ವಿಚಾರವಾಗಿ ಆಗಾಗ್ಗೆ ಅವರ ವಕೀಲರು ಜೈಲಿಗೆ ಭೇಟಿ ನೀಡುತ್ತಾರೆ. ಇನ್ನು ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಷಪ್ರಾಶನ ಮಾಡಿ ಕೊಂದಿದ್ದಾರೆ ಎಂಬ ಆರೋಪ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಶಶಿಕಲಾ ಅವರ ರಕ್ಷಣೆಗೆ ಹೆಚ್ಚಿನ ನಿಗಾವಹಿಸಲಾಗಿದ್ದು, ಅವರ ಭದ್ರತೆಗೆ ಮಹಿಳಾ ಅಧಿಕಾರಿ ನೇತೃತ್ವದಲ್ಲಿ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಹಾರದಲ್ಲಿ ಯಾರಾದರೂ ವಿಷ ಮಿಶ್ರಣ ಮಾಡಬಹುದು ಎಂಬ ಭಯದಿಂದ ಶಶಿಕಲಾ ಅವರಿಗೆ ಎಲ್ಲ ಕೈದಿಗಳಿಗೆ ತಯಾರಿಸಲಾದ ಆಹಾರವನ್ನು ಕ್ಯಾರಿಯರ್‌ನಲ್ಲಿ ಸೆಲ್‌ಗೆ ಕಳುಹಿಸಲಾಗುತ್ತದೆ. ಈ ಸೌಲಭ್ಯಗಳ ಹೊರತು ಯಾವುದೇ ವಿಶೇಷ ಆದತ್ಯೆ ನೀಡಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮರಣಶಯ್ಯೆಯಲ್ಲಿ ತೆಲಗಿ:
ಬಹು ಅಂಗಾಂಗ ಕಾಯಿಲೆ ವೈಫಲ್ಯದಿಂದ ಬಳಲುತ್ತಿರುವ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಕರೀಂ ಲಾಲ್ ತೆಲಗಿ ದೇಹಾರೋಗ್ಯ ಪರಿಸ್ಥಿತಿ ಶೋಚನೆಯ ವಾಗಿದ್ದು, ಆತ ಅಕ್ಷರಶಃ ಮರಣಶೆಯ್ಯೆಯಲ್ಲಿ ಮಲಗಿದ್ದಾನೆ. ನ್ಯಾಯಾಲಯದ ಆದೇಶದನ್ವಯ ಅವನಿಗೆ ಸಹಾಯಕರನ್ನು ನೇಮಿಸಲಾಗಿದೆ ಎಂದು ಕಾರಾಗೃಹದ ಉನ್ನತ ಮೂಲಗಳು ತಿಳಿಸಿವೆ. ಕಿಡ್ನಿ ಸಮಸ್ಯೆಯಿಂದಾಗಿ ಅವನಿಗೆ ನಿಯಮಿತವಾಗಿ ಡಯಾಲಿಸಿಸ್ ಮಾಡಿಸಬೇಕಾಗಿದೆ. ಹಾಸಿಗೆಯಿಂದ ಮೇಲೇಳಲಾಗದ ಪರಿಸ್ಥಿತಿಯಲ್ಲಿರುವ ತೆಲಗಿ ಆರೈಕೆಗೆ ವಿಚಾರಣಾಧೀನ ಕೈದಿಗಳನ್ನು ಕಾನೂನು ಪ್ರಕಾರವೇ ನಿಯೋಜಿಸಲಾಗಿದೆ. ಈ ಹಿಂದೆ ತೆಲಗಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂಬ ದೂರು ಬಂದಿತು. ಆಗ ಖುದ್ದು ಡಿಜಿಪಿ ಅವರೇ ತೆಲಗಿ ಕೊಠಡಿಗೆ ತೆರಳಿ ವಿಚಾರಣೆ ನಡೆಸಿ ಹೋಗಿದ್ದರು. ಆದರೆ ತೆಲಗಿಗೆ ಕೊಠಡಿಗೆ ಹೋಗದೆ ಈಗ ಡಿಐಜಿ ಆರೋಪ ಮಾಡುತ್ತಿರುವುದು ಸಮಂಜಸವಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೈದಿಯ ಮೂಳೆಗೆ ಚುಚ್ಚುಮದ್ದು:
ಮೂಳೆಗೆ ಚುಚ್ಚು ಮದ್ದು ಕೊಟ್ಟಿದ್ದರಿಂದ ನೋವು ತಡೆಯಲಾರದೆ ವಿಚಾರಣಾಧೀನ ಕೈದಿಯು ಶ್ರುಶೂಷಕಿ ಕೈ ಹಿಡಿದು ಕೊಂಡಿದ್ದ. ಇದನ್ನು ತಪ್ಪಾಗಿ ಭಾವಿಸಿದ ಆಸ್ಪತ್ರೆ ಸಿಬ್ಬಂದಿಯು, ಆ ವಿಚಾರಣಾಧೀನ ಕೈದಿಗೆ ಮನಬಂದಂತೆ ಥಳಿಸಿದ್ದರು. ಈ ಘಟನೆ ಸತ್ಯಾಸತ್ಯೆ ತಿಳಿಯದೆ ಡಿಐಜಿ ತಮ್ಮ ವರದಿಯಲ್ಲಿ ತಪ್ಪಾಗಿ ಉಲ್ಲೇಖಿಸಿದ್ದಾರೆ ಎಂದು ಕಾರಾಗೃಹದ ಅಧಿಕಾರಿಗಳು ಹೇಳುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.