
ನವದೆಹಲಿ[ಮಾ.04]: ಭೂ, ವಾಯು ಹಾಗೂ ನೌಕಾಸೇನೆಯ ಯೋಧರಿಗೆ ಅತ್ಯಾಧುನಿಕ ಎಕೆ-203 ರೈಫಲ್ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಈ ಸಂಬಂಧ ರಷ್ಯಾ ಕಂಪನಿಯೊಂದರ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಎಕೆ-47 ರೈಫಲ್‌ಗಳ ಅತ್ಯಾಧುನಿಕ ಆವೃತ್ತಿಯೇ ಎಕೆ-203. ಎಕೆ-47 ಉತ್ಪಾದಿಸುವ ರಷ್ಯಾದ ಕಲಾಶ್ನಿಕೋವ್ ಕಂಪನಿಯೇ ಈ ರೈಫಲ್‌ಗಳನ್ನೂ ಉತ್ಪಾದಿಸುತ್ತದೆ. ಇದೀಗ ಆ ಕಂಪನಿಯಿಂದ ಬರೋಬ್ಬರಿ 7.50 ಲಕ್ಷ ರೈಫಲ್‌ಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಈ ರೈಫಲ್‌ಗಳು ಉತ್ತರಪ್ರದೇಶದ ಅಮೇಠಿಯಲ್ಲೇ ಉತ್ಪಾದನೆಯಾಗಲಿವೆ. ಸದ್ಯ ಯೋಧರು ಸ್ವದೇಶಿ ನಿರ್ಮಿತ ಇನ್ಸಾಸ್ ರೈಫಲ್‌ಗಳನ್ನು ಬಳಸುತ್ತಿದ್ದಾರೆ. ಅದರ ಬದಲಿಗೆ ಎಕೆ-203 ನೀಡಿ, ಸಶಸ್ತ್ರ ಪಡೆಗಳ ಬಲವರ್ಧನೆಗೊಳಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ಪಡೆಗಳಿಗೆ ಈ ರೈಫಲ್ ಸರಬರಾಜು ಮಾಡಿದ ಬಳಿಕ ಅರೆಸೇನಾ ಹಾಗೂ ರಾಜ್ಯ ಪೊಲೀಸ್ ಪಡೆಗಳಿಗೂ ಇದೇ ರೈಫಲ್ ಒದಗಿಸುವ ಗುರಿ ಇದೆ. ಒಟ್ಟಾರೆ ಮುಂದಿನ 10ರಿಂದ 15 ವರ್ಷಗಳಲ್ಲಿ ದೇಶಾದ್ಯಂತ ಎಲ್ಲೆಡೆ ಎಕೆ-203 ಬಳಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಇತ್ತೀಚೆಗಷ್ಟೇ ಅಮೆರಿಕದ ಸಿಗ್ ಸೌಯರ್ ರೈಫಲ್‌ಗಳನ್ನು ಖರೀದಿಸುವ ಸಂಬಂಧ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಅದರ ಜತೆಗೇ ಎಕೆ-203 ರೈಫಲ್ ಖರೀದಿಗೆ ಮುಂದಾಗಿರುವುದು ಮಹತ್ವ ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.