
ನವದೆಹಲಿ (ಸೆ.16): ಭಾರತೀಯ ವಾಯುಸೇನಾ ಮಾರ್ಷಲ್ ಅರ್ಜನ್ ಸಿಂಗ್(98) ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ.
1965 ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಅರ್ಜನ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಐದು ಸ್ಟಾರ್’ಗಳನ್ನು ಪಡೆದ ಮೊದಲ ವಾಯುಸೇನಾ ಅಧಿಕಾರಿಯಾಗಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಇವರನ್ನು ನವದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಹಲವರು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
1938ರಲ್ಲಿ ವಾಯುಪಡೆಗೆ ಸೇರ್ಪಡೆಯಾಗಿದ್ದ ಅರ್ಜನ್ ಸಿಂಗ್ ಅವರು, 1964ರಿಂದ 1966ರವರೆಗೆ ವಾಯುಪಡೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಭಾರತೀಯ ಸೇನಾ ಇತಿಹಾಸದ ಧ್ರುವತಾರೆಗಳಲ್ಲಿ ಒಬ್ಬರೆನಿಸಿಕೊಂಡಿದ್ದ ಅರ್ಜನ್ ಸಿಂಗ್ ಅವರು 1965ರ ಭಾರತ- ಪಾಕಿಸ್ತಾನ ಸಮರದ ಸಂದರ್ಭದಲ್ಲಿ ಯುವ ವಾಯುಪಡೆ ತಂಡವನ್ನು ಮುನ್ನಡೆಸಿದ್ದರು. ಆಗ ಅವರಿಗೆ 44 ವರ್ಷ. ಅವರ ಸೇವೆಯನ್ನು ಪರಿಗಣಿಸಿ ಮಾರ್ಷಲ್ ಸ್ಥಾನ ನೀಡಲಾಗಿತ್ತು. 60 ವಿವಿಧ ಬಗೆಯ ವಿಮಾನಗಳನ್ನು ತಮ್ಮ ಸೇವಾವಧಿಯಲ್ಲಿ ಚಾಲನೆ ಮಾಡಿದ ಕೀರ್ತಿ ಅರ್ಜನ್ ಸಿಂಗ್ ಅವರದ್ದಾಗಿತ್ತು.
ನಿವೃತ್ತಿ ನಂತರ 1971ರಲ್ಲಿ ಸ್ವಿಜರ್ಲೆಂಡ್ ಹಾಗೂ ವ್ಯಾಟಿಕನ್ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಿದ್ದರು. 2002ರಲ್ಲಿ ವಾಯುಪಡೆಯ ಫೈವ್‌ಸ್ಟಾರ್ ಜನರಲ್ ಹುದ್ದೆಯನ್ನು ಅವರಿಗೆ ನೀಡಲಾಗಿತ್ತು.
2016ರಲ್ಲಿ ಪಶ್ಚಿಮ ಬಂಗಾಳದ ಪಾನಾಗಢ ವಾಯುನೆಲೆಗೆ ಅರ್ಜನ್ ಸಿಂಗ್ ಹೆಸರನ್ನು ಅವರ 97ನೇ ಜನ್ಮದಿನ ಸ್ಮರಣಾರ್ಥ ನಾಮಕರಣ ಮಾಡಲಾಗಿತ್ತು. ಬದುಕಿರುವ ವ್ಯಕ್ತಿಯೊಬ್ಬರ ಹೆಸರನ್ನು ವಾಯುನೆಲೆಯೊಂದಕ್ಕೆ ನಾಮಕರಣ ಮಾಡಿದ್ದು ದೇಶದ ಇತಿಹಾಸದಲ್ಲೇ ಮೊದಲು.
ನಿವೃತ್ತ ವಾಯುಪಡೆ ಸಿಬ್ಬಂದಿಯ ಕಲ್ಯಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ದೆಹಲಿ ಸಮೀಪ ತಾವು ಹೊಂದಿದ್ದ ಕೃಷಿ ಜಮೀನನ್ನು ಮಾರಾಟ ಮಾಡಿ 2 ಕೋಟಿ ರು. ನೀಡಿದ್ದರು. ಸೇನಾ ಸಿಬ್ಬಂದಿಗಳಿಗೆ ಪ್ರೇರಣೆಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.