ಮೂವರು ಕಾಂಗ್ರೆಸ್ ಮುಖಂಡರಿಂದ ರಾಜೀನಾಮೆ

By Web DeskFirst Published May 28, 2019, 10:39 AM IST
Highlights

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು ಮೂವರು ನಾಯಕರು ರಾಜೀನಾಮೆ ನೀಡಿದ್ದಾರೆ. 

ನವದೆಹಲಿ: ಲೋಕಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಮೂವರು ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಹುದ್ದೆ ತ್ಯಜಿಸಿದ ಕಾಂಗ್ರೆಸ್‌ ಅಧ್ಯಕ್ಷರ ಸಂಖ್ಯೆ 6ಕ್ಕೇರಿಕೆಯಾಗಿದೆ.

ಜಾರ್ಖಂಡ್‌ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಮೂಲದ ಮಾಜಿ ಐಪಿಎಸ್‌ ಅಧಿಕಾರಿ ಅಜಯ್‌ ಕುಮಾರ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಜಾರ್ಖಂಡ್‌ನ 14 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಕೇವಲ ಒಂದರಲ್ಲಿ ಗೆದ್ದಿತ್ತು. ಈ ಕಾರಣ ಅವರು ಹುದ್ದೆ ತ್ಯಜಿಸಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ ಅಧ್ಯಕ್ಷ ಸುನಿಲ್‌ ಜಾಖಡ್‌ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಇ-ಮೇಲ್‌ ಮಾಡಿದ್ದಾರೆ. ಪಂಜಾಬ್‌ನ 13 ಸೀಟುಗಳ ಪೈಕಿ 9ರಲ್ಲಿ ಕಾಂಗ್ರೆಸ್‌ ಗೆದ್ದಿದೆ. ಕಳೆದ ಬಾರಿ 3 ಕ್ಷೇತ್ರ ಮಾತ್ರ ಗೆದ್ದಿದ್ದ ಆ ಪಕ್ಷ ಈ ಬಾರಿ ಇನ್ನೂ 6 ಕ್ಷೇತ್ರಗಳನ್ನು ವಶಪಡಿಸಿಕೊಂಡಿದೆಯಾದರೂ ಜಾಖಡ್‌ ಅವರು ಗುರುದಾಸ್‌ಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್‌ ಎದುರು ಪರಾಭವಗೊಂಡಿದ್ದರು. ಆ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದೇ ವೇಳೆ ಅಸ್ಸಾಂ ಕಾಂಗ್ರೆಸ್‌ ಅಧ್ಯಕ್ಷ ರಿಪುನ್‌ ಬೊರಾ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಅಸ್ಸಾಂನ 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಕೇವಲ 2ರಲ್ಲಿ ಮಾತ್ರವೇ ಜಯಭೇರಿ ಬಾರಿಸಿದ್ದು ಇದಕ್ಕೆ ಕಾರಣ.

ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಉತ್ತರಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರಾಜ್‌ ಬಬ್ಬರ್‌, ಒಡಿಶಾದ ನಿರಂಜನ್‌ ಪಟ್ನಾಯಕ್‌ ಹಾಗೂ ಮಹಾರಾಷ್ಟ್ರದ ಅಶೋಕ್‌ ಚವಾಣ್‌ ಅವರು ರಾಜೀನಾಮೆ ನೀಡಿದ್ದರು.

click me!