
ನವದೆಹಲಿ(ಆ. 14): ಉತ್ತರಪ್ರದೇಶದ ಗೋರಖ್'ಪುರದಲ್ಲಿ ಸಂಭವಿಸಿದ 60ಕ್ಕೂ ಹೆಚ್ಚು ಮಕ್ಕಳ ಸಾವಿನ ದುರಂತ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜಪಾನೀಸ್ ಎನ್ಸೆಫಾಲಿಟಿಸ್ (ಮಿದುಳಿನ ಉರಿಯೂತ) ಕಾಯಿಲೆಯು ಈ ದುರಂತಕ್ಕೆ ಕಾರಣವೆನ್ನಲಾಗಿದೆ. ನಿಜವಾದ ದುರಂತದ ವಿಚಾರವೆಂದರೆ ಈ ಕಾಯಿಲೆಯು ದಿಢೀರ್ ಕಾಣಿಸಿಕೊಂಡದ್ದಲ್ಲ. ವರ್ಷಗಳಿಂದ ಮಾರಕವಾಗಿ ಕಾಡುತ್ತಿರುವ ಕಾಯಿಲೆಯಾಗಿದೆ. ಗೋರಖ್'ಪುರ ಸೇರಿದಂತೆ ಉತ್ತರಪ್ರದೇಶ ಪೂರ್ವ ಭಾಗದಲ್ಲಿ ಮಿದುಳಿನ ಉರಿಯೂತದಿಂದ ನೂರಾರು ಮಕ್ಕಳು ಈ ಮುಂಚೆಯೇ ಸಾವನ್ನಪ್ಪಿದ್ದರು. 2013ರಲ್ಲಿ ಪಿಟಿಐ ವರದಿ ಪ್ರಕಾರ ಗೋರಖ್'ಪುರದಲ್ಲಿ ಎನ್ಸೆಫಾಲಿಟಿಸ್'ಗೆ ಬಲಿಯಾದ ಮಕ್ಕಳ ಸಂಖ್ಯೆ 650ಕ್ಕೂ ಹೆಚ್ಚು. 2014ರಲ್ಲಿ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ಅವರು ಈ ವಿಚಾರವನ್ನು ಲೋಕಸಭೆಯಲ್ಲಿ ಪ್ರಸ್ತಾಪ ಮಾಡುವ ಪ್ರಯತ್ನವನ್ನೂ ಮಾಡಿದ್ದರು. ಆದರೆ, ಕಾಂಗ್ರೆಸ್ ಪಕ್ಷದವರು ಈ ಬಗ್ಗೆ ಚರ್ಚೆಗೆ ಆಸ್ಪದ ಕೊಡದೆಯೇ ಸಭೆಯಿಂದ ಹೊರನಡೆದಿದ್ದರಂತೆ.
ಏನಿದು ಎನ್ಸೆಫಾಲಿಟಿಸ್?
ಇವು ಸಾಮಾನ್ಯವಾಗಿ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ನೊಣ, ತಿಗಣೆ ಮೊದಲಾದವೂ ಈ ಕಾಯಿಲೆಯನ್ನು ಹರಡಬಲ್ಲುವು. ಡೆಂಗ್ಯೂ, ಚಿಕೂನ್'ಗುನ್ಯಾ, ಹಳದಿ ಜ್ವರ, ಝೀಕಾ ವೈರಸ್, ಮಲೇರಿಯಾ, ಎನ್ಸೆಫಾಲಿಟಿಸ್, ಫಿಲಾರಿಯಾಸಿಸ್, ರಿಕೆಟ್'ಸಿಯಾಲ್ ಇತ್ಯಾದಿ ಕಾಯಿಲೆಗಳು ಈ ವರ್ಗಕ್ಕೆ ಸೇರಿದವು.
ಉ.ಪ್ರ.ದಲ್ಲಿ ಮಾತ್ರವಲ್ಲ....
ಜಪಾನೀಸ್ ಎನ್ಸೆಫಾಲಿಟಿಸ್ ಕಾಯಿಲೆಗೆ ದೇಶಾದ್ಯಂತ ಮಕ್ಕಳು ಬಲಿಯಾಗಿದ್ದಾರೆ. ವಿಶ್ವಾದ್ಯಂತ 100ಕ್ಕೂ ಹೆಚ್ಚು ದೇಶಗಳಲ್ಲಿ ಜನರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಪ್ರತೀ ವರ್ಷ 10 ಲಕ್ಷ ಜನರು ಈ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಕೇರಳದಲ್ಲಿ 420 ಜನರು ತೀವ್ರ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ಅಲ್ಲಿಯ ಸರಕಾರವೇ ವರದಿ ನೀಡಿದೆ.
ರಾಜೀವ್ ಆಗ್ರಹ:
ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಸಾಂಕ್ರಾಮಿಕ ಕಾಯಿಲೆಗಳಿಗೆ ಜನರು ಬಲಿಯಾಗುತ್ತಿರು ಸಂಗತಿ ಬಗ್ಗೆ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಕಿಡಿಕಾರಿದ್ದಾರೆ. ಸರಕಾರಗಳ ವೈಫಲ್ಯಗಳು ಈ ದುರಂತಕ್ಕೆ ಕಾರಣ ಎಂದವರು ಆರೋಪಿಸಿದ್ದಾರೆ. ದುರಂತ ಸಂಭವಿಸಿದ ಬಳಿಕ 2-3 ದಿನ ಆಕ್ರೋಶ ವ್ಯಕ್ತಪಡಿಸಿದಾಕ್ಷಣ ಏನೂ ಉಪಯೋಗವಿಲ್ಲ. ನಮ್ಮ ಆರೋಗ್ಯ ದುರವಸ್ಥೆಯನ್ನು ಸರಿಪಡಿಸುವಂತೆ ಆಡಳಿತದ ಮೇಲೆ ನಿರಂತರವಾಗಿ ಒತ್ತಡ ಹೇರಬೇಕು. ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆಯಾಗಬೇಕು ಎಂದು ರಾಜೀವ್ ಚಂದ್ರಶೇಖರ್ ಸಲಹೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.