
ಬೆಂಗಳೂರು : ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳು ನಟರಿಬ್ಬರು ನೀಡುತ್ತಿರುವ ಪ್ರಚೋದನಕಾರಿ ಹೇಳಿಕೆಗೆ ಹಿರಿಯ ನಟ ಅನಂತನಾಗ್ ಕಿಡಿಕಾರಿದ್ದು, ನಾಡಿನ ನೆಲ, ಜಲ, ಭಾಷೆ ಕಾಪಾಡುವ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜತೆ ನಾನಿದ್ದೇನೆ ಎಂದು ಘೋಷಿಸಿದ್ದಾರೆ.
ಈ ಕುರಿತು ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿರುವ ಅವರು, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ಮೊದಲಿನಿಂದಲೂ ಅಸಹನೆ, ಅಸಹಕಾರ ಮತ್ತು ಘರ್ಷಣೆ ನಿಲುವನ್ನೇ ತೋರಿಸುತ್ತಾ ಬಂದಿದೆ. ಈಗ ಮತ್ತೊಮ್ಮೆ ತಮಿಳುನಾಡಿನ ಮುಖಂಡರು ತಮಿಳುನಾಡು ಬಂದ್ ಆಚರಿಸಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡಿರುವುದು ಖಂಡನೀಯ ಎಂದಿದ್ದಾರೆ.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮುಂದಿರುವುದರಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೆಚ್ಚು ಅನುಕೂಲ ಮಾಡಿಕೊಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿಜವೆಂದರೆ ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ, ನೀರು ಹಂಚಿಕೆಗೆ ಯಾವ ಸೂಕ್ತ ಸೂತ್ರದ ಪರಿಹಾರ ಸೂಚಿಸಿದರೂ ತಮಿಳುನಾಡು ಅಪಸ್ವರ ಎತ್ತುವುದು ವಾಡಿಕೆ. ಕೇಂದ್ರದಲ್ಲಿ ಯಾವುದೇ ಸರ್ಕಾರವಿರಲಿ, ಸುಪ್ರೀಂಕೋರ್ಟ್ ಕೂಡ ಯಾವುದೇ ಪರಿಹಾರ ನೀಡಲು ಮುಂದಾದರೂ ಅಲ್ಲಿನ ರಾಜಕಾರಣಿಗಳು ಒಪ್ಪುವುದಿಲ್ಲ.
ಈಗ ಸದ್ಯ ತಮಿಳುನಾಡಿನಲ್ಲಿ ಯಾವುದೇ ಚುನಾವಣೆ ಇಲ್ಲದಿದ್ದರೂ ಅಲ್ಲಿನ ನಟರಿಬ್ಬರು ರಾಜಕೀಯ ಪ್ರವೇಶ ಮಾಡುವ ಆತುರದಲ್ಲಿ ಹಿಂದಿನ ಪೀಳಿಗೆಯವರಂತೆಯೇ ಅನೇಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ರಜನಿಕಾಂತ್ ಮತ್ತು ಕಮಲಹಾಸನ್ ಅವರ ಹೆಸರು ಹೇಳದೆ ಕಿಡಿಕಾರಿದರು.
ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ಕರ್ನಾಟಕ ರಾಜ್ಯದ ನೆಲ, ಜಲ, ಭಾಷೆಯನ್ನು ಕಾಪಾಡಿಕೊಳ್ಳುವ ಉದಾತ್ತ ಕರ್ತವ್ಯದಲ್ಲಿ ಸಮಸ್ತ ಕನ್ನಡಿಗರ ಜತೆ ನಾನು ಕೂಡ ಟೊಂಕಕಟ್ಟಿನಿಂತಿದ್ದೇನೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.