ಈ ಇನ್ಸ್‌ಪೆಕ್ಟರ್‌ ಬಳಿ ಇದ್ದ ಅಕ್ರಮ ಸಂಪತ್ತು ಎಷ್ಟು..?

First Published Jun 23, 2018, 8:26 AM IST
Highlights

ಬರೋಬ್ಬರಿ 100 ಕೋಟಿ ರು. ಅಕ್ರಮ ಆಸ್ತಿ ಹೊಂದಿದ್ದ ಅಟೆಂಡರ್‌ವೊಬ್ಬನನ್ನು ಕಳೆದ ತಿಂಗಳು ಯಶಸ್ವಿಯಾಗಿ ಬಲೆಗೆ ಕೆಡವಿದ್ದ ಎಸಿಬಿ, ಅಷ್ಟೇ ಆಸ್ತಿ ಹೊಂದಿದ್ದ ಸರ್ಕಾರಿ ನೌಕರನೊಬ್ಬನ ಮೇಲೆ ಇದೀಗ ದಾಳಿ ನಡೆಸಿದೆ.
 

ನೆಲ್ಲೂರು: ಬರೋಬ್ಬರಿ 100 ಕೋಟಿ ರು. ಅಕ್ರಮ ಆಸ್ತಿ ಹೊಂದಿದ್ದ ಅಟೆಂಡರ್‌ವೊಬ್ಬನನ್ನು ಕಳೆದ ತಿಂಗಳು ಯಶಸ್ವಿಯಾಗಿ ಬಲೆಗೆ ಕೆಡವಿದ್ದ ಎಸಿಬಿ, ಅಷ್ಟೇ ಆಸ್ತಿ ಹೊಂದಿದ್ದ ಸರ್ಕಾರಿ ನೌಕರನೊಬ್ಬನ ಮೇಲೆ ಇದೀಗ ದಾಳಿ ನಡೆಸಿದೆ.

ಆಂಧ್ರಪ್ರದೇಶದ ವಿದ್ಯುತ್‌ ಪ್ರಸರಣ ಕಂಪನಿ ಎಪಿ ಟ್ರಾನ್ಸ್‌ಕೋದಲ್ಲಿ ಲೈನ್‌ಮ್ಯಾನ್‌ ಆಗಿದ್ದ, ನಾಲ್ಕು ವರ್ಷಗಳ ಹಿಂದೆ ಲೈನ್‌ ಇನ್ಸ್‌ಪೆಕ್ಟರ್‌ ಹುದ್ದೆಗೆ ಬಡ್ತಿ ಪಡೆದಿದ್ದ 56 ವರ್ಷದ ಎಸ್‌. ಲಕ್ಷ್ಮೇ ರೆಡ್ಡಿ ಎಂಬಾತನ ಮೇಲೆ ಎಸಿಬಿ ದಾಳಿ ನಡೆಸಿದೆ. ಕೃಷಿ ಜಮೀನು, ಐಷಾರಾಮಿ ಬಂಗಲೆಗಳು ಸೇರಿದಂತೆ ಈತನ ಬಳಿ ಸದ್ಯಕ್ಕೆ 100 ಕೋಟಿ ರು. ಅಕ್ರಮ ಆಸ್ತಿ ಪತ್ತೆಯಾಗಿದೆ. ಇದು ಪ್ರಾಥಮಿಕ ಅಂದಾಜಾಗಿದ್ದು, ತನಿಖೆ ಪ್ರಗತಿಯಾದರೆ ಈ ಮೊತ್ತ ಮತ್ತಷ್ಟುಹೆಚ್ಚುವ ಸಂಭವವಿದೆ.

1993ರಲ್ಲಿ ಕವಲಿ ಎಂಬ ವಿದ್ಯುತ್‌ ಉಪಕೇಂದ್ರದಲ್ಲಿ ಹೆಲ್ಪರ್‌ ಆಗಿ ಸೇವೆಗೆ ಸೇರಿದ್ದ ಲಕ್ಷ್ಮಿ ರೆಡ್ಡಿ, 1996ರಲ್ಲಿ ಸಹಾಯಕ ಲೈನ್‌ಮ್ಯಾನ್‌ ಹಾಗೂ 1997ರಲ್ಲಿ ಲೈನ್‌ಮ್ಯಾನ್‌ ಸ್ಥಾನಕ್ಕೆ ಬಡ್ತಿ ಹೊಂದಿದ್ದ. 2014ರಿಂದ ಲೈನ್‌ ಇನ್ಸ್‌ಪೆಕ್ಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಅಕ್ರಮ ಆಸ್ತಿ ಕುರಿತ ಖಚಿತ ಮಾಹಿತಿ ಮೇರೆಗೆ ಗುರುವಾರ ಬೆಳಗ್ಗೆ 6.30ರಿಂದ ನೆಲ್ಲೂರು ಹಾಗೂ ಪ್ರಕಾಶಂ ಜಿಲ್ಲೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮ ಸಂಪತ್ತನ್ನು ಪತ್ತೆ ಮಾಡಿದ್ದಾರೆ.

click me!