
-ರಾಮಕೃಷ್ಣ ದಾಸರಿ
ರಾಯಚೂರು(ಡಿ.1): ಡಿಸೆಂಬರ್ 2ರಿಂದ ಮೂರು ದಿನಗಳ ಕಾಲ ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಯಚೂರು ಸಜ್ಜಾಗಿದೆ.
ನಗರ ಸಿಂಗಾರಗೊಂಡಿದ್ದು, ಎಲ್ಲೆಡೆ ಕನ್ನಡ ಬಾವುಟ, ಬಂಟಿಂಗ್, ಬ್ಯಾನರ್ ರಾರಾಜಿಸುತ್ತಿವೆ. ಗೋಡೆಗಳ ಮೇಲೆ ಜಾನಪದ ವರ್ಲಿ ಕಲೆಯ ಪ್ರಕಾಶಿಸುತ್ತಿದ್ದರೆ, ಬಸವೇಶ್ವರ ವೃತ್ತದಿಂದ ಕೃಷಿ ವಿವಿವರೆಗೆ ಜಾನಪದ ಸಂಸ್ಕೃತಿ ಬಿಂಬಿಸುವ ಛತ್ರಿ, ಸರ್ಕಾರಿ ಕಚೇರಿ, ವಾಣಿಜ್ಯ ಮಳಿಗೆ, ಮುಖ್ಯರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರಗಳು ಆಕರ್ಷಣೆಗೊಳಪಟ್ಟಿವೆ.
ಕನ್ನಡ ಅಕ್ಷರ ಜಾತ್ರೆಯೀಗ ಭಾಷಾ ಸಾಮರಸ್ಯದ ತಾಣ
ಗಡಿನಾಡಲ್ಲಿ ಶುಕ್ರವಾರದಿಂದ ಆರಂಭಗೊಳ್ಳುತ್ತಿರುವ ಮೂರು ದಿನಗಳ ಕನ್ನಡ ಸಾಹಿತ್ಯ ಜಾತ್ರೆಯ ಸಂಭ್ರಮದಲ್ಲಿ ಸಾಮರಸ್ಯದ ಸಂದೇಶವೊಂದು ಸದ್ದಿಲ್ಲದೆ ರವಾನೆಯಾಗುತ್ತಿದೆ. ಇಲ್ಲಿ ದೇಶದ ನಾನಾ ಮೂಲೆಯಿಂದ ವಲಸೆ ಬಂದಿರುವ ತೆಲುಗು, ಹಿಂದಿ, ಬಿಹಾರಿ, ಮರಾಠಿ, ಗುಜರಾತಿ ಭಾಷಿಗರೊಂದಿಗೆ ಮೇಘಾಲಯ, ಹಿಮಾಚಲ ಪ್ರದೇಶದ ಕಾರ್ಮಿಕರೂ ದುಡಿಯುತ್ತಿದ್ದು ಅಕ್ಷರಶಃ ಭಾಷಾ ಸಾಮರಸ್ಯದ ತಾಣವಾಗಿ ಮಾರ್ಪಟ್ಟಿದೆ.
ಯಾರ್ಯಾರದ್ದು ಏನೇನು ಕಾರ್ಯ: ರಾಯಚೂರಿನಲ್ಲಿ ಬಹುತೇಕರು ತೆಲುಗು, ಹಿಂದಿ ಮಾತನಾಡುತ್ತಾರೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಅಕ್ಷರ ಜಾತ್ರೆಗಾಗಿ ನಗರ ಕಂಡರಿಯದ ರೀತಿಯಲ್ಲಿ ಸಿಂಗಾರಗೊಳ್ಳುವುದಕ್ಕೇ ತೆಲುಗು ಭಾಷಿಗರೇ ಕಾರಣವೆಂದು ಹೇಳಬಹುದು. ನಗರಸಭೆಯ ಪೌರಕಾರ್ಮಿಕರು ತೆಲುಗು ಭಾಷಿಕರಾಗಿದ್ದು ನಗರ ಸ್ವಚ್ಛತೆಗೆ ಹಗಲಿರುಳು ದುಡಿದಿದ್ದಾರೆ. ಕೃಷಿ ವಿವಿ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಾತ್ಕಾಲಿಕ ಚರಂಡಿ ನಿರ್ಮಾಣ, ಸಮ್ಮೇಳನ ನಿಮಿತ್ತ ಸಂಗ್ರಹಗೊಂಡ ತ್ಯಾಜ್ಯವನ್ನು ಸಕಾಲಕ್ಕೆ ತೆಗೆದುಕೊಂಡು ಹೋಗುತ್ತಿರುವವರು ಸಹ ಇದೇ ತೆಲುಗು ಭಾಷೆಯನ್ನಾಡುವ ಕಾರ್ಮಿಕರು.
ನಗರಾದ್ಯಂತ ಕನ್ನಡದ ಬಾವುಟ, ಬಿತ್ತಿ ಪತ್ರ, ದೀಪಾಲಂಕಾರ ಅಳವಡಿಕೆ ಮುಂತಾದ ಕಾರ್ಯವನ್ನು ಬಿಹಾರ, ಕೋಲ್ಕತ್ತಾ ಮೂಲದ ಕಾರ್ಮಿಕರು ನಡೆಸಿದ್ದಾರೆ. ಕೃಷಿ ವಿವಿ ಆವರಣದಲ್ಲಿ ಜಪಾನ್ ವೈಶಿಷ್ಟ್ಯದ ಪ್ರಧಾನ ವೇದಿಕೆ, ಪುಸ್ತಕ ಮಳಿಗಳು, ಊಟದ ವ್ಯವಸ್ಥೆಗಾಗಿ ಬೃಹತ್ ಪ್ರಮಾಣದಲ್ಲಿ ಸ್ಟಾಲ್‌ಗಳ ನಿರ್ಮಾಣದಲ್ಲಿ ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರದ 500ಕ್ಕೂ ಅಧಿಕ ಕಾರ್ಮಿಕರು ಶ್ರಮಿಸಿದ್ದಾರೆ.
ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಸಾಹಿತ್ಯಾಸಕ್ತರಿಗೆ ರುಚಿಕರ ಭೋಜನವನ್ನು ಉಣಬಡಿಸಲು ಹುಬ್ಬಳ್ಳಿ, ಗದಗ, ವಿಜಯಪುರ, ಬೆಳಗಾವಿಯ ಬಾಣಸಿಗರೊಂದಿಗೆ ಗುಜರಾತಿನ 150 ಕ್ಕು ಹೆಚ್ಚು ಕಾರ್ಮಿಕರು ಸಹಾಯಕರಾಗಿ ದುಡಿಯುತ್ತಿದ್ದಾರೆ.
ಕರ್ನಾಟಕ ಸೇರಿ ದೇಶದಲ್ಲಿ ವಿವಿಧ ರಾಜ್ಯದ ಎಲ್ಲಿಯವರು ಇಲ್ಲಿ, ಇಲ್ಲಿನವರ ಅಲ್ಲಿ ದುಡಿಯುವುದು ಸಹಜ. ಆದರೆ ಬೇರೆ ಭಾಷೆಯನ್ನಾಡುವವರು ಕನ್ನಡದ ಕೆಲಸದಲ್ಲಿ ತೊಡಗಿರುವುದು ಒಳ್ಳೆಯ ವಿಚಾರವಾಗಿದ್ದು, ಸಮ್ಮೇಳನವು ಸಾಮರಸ್ಯಕ್ಕೆ ವೇದಿಕೆ ಕಲ್ಪಿಸಿದಂತಿದೆ.
-ಮನು ಬಳಿಗಾರ, ಕಸಾಪ ರಾಜ್ಯಾಧ್ಯಕ್ಷ
ತೆಲುಗು ಮಾತನಾಡುವ ನಾವುಗಳು ಕನ್ನಡ ಭಾಷೆಯ ದೊಡ್ಡ ಹಬ್ಬದಂತೆ ಆಚರಿಸುವ ಸಾಹಿತ್ಯ ಸಮ್ಮೇಳನದ ತಯಾರಿಯಲ್ಲಿ ನಾವು ಸಹ ಭಾಗಿಯಾಗಿರುವುದಕ್ಕೆ ಸಂತೋಷವಿದೆ. ನಗರದ ಧೂಳು, ಕಸ ವಿಲೇವಾರಿ, ಸ್ವಚ್ಛತೆಯ ಕೆಲಸವನ್ನು ಪ್ರಮಾಣಿವಾಗಿ ಮಾಡಿದ್ದು ಅದರ ಪರಿಣಾಮವೇ ಇಂದು ರಾಯಚೂರು ಕಂಗೊಳಿಸುತ್ತಿದೆ.
-ನರಸಿಂಹಲು, ಶ್ರೀನಿವಾಸ, ಪೌರಕಾರ್ಮಿಕರು
ಡಿಸಿ ಸೆಂಥಿಲ್ ಸೇವೆ ಮಹತ್ವದ್ದು
ತಮಿಳುನಾಡು ಮೂಲದ ರಾಯಚೂರು ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಕನ್ನಡ ಹಬ್ಬಕ್ಕಾಗಿ ನಿರ್ವಹಿಸಿದ ಜವಾಬ್ದಾರಿ ಮಹತ್ತರವಾದದ್ದು. ತಿಂಗಳ ಹಿಂದೆ ಸೆಂಥಿಲ್ ಅವರ ವರ್ಗಾವಣೆ ಆದೇಶ (ಸದ್ಯಕ್ಕೆ ತಾತ್ಕಾಲಿಕವಾಗಿ ಹಿಂದೆ ಪಡೆಯಲಾಗಿದೆ)ದ ನಡುವೆಯೂ ಎಲ್ಲಾ 33 ಉಪಸಮಿತಿಗಳಿಗೆ ಇಲಾಖೆಯ ಅಧಿಕಾರಿಗಳನ್ನು, ಎಲ್ಲಾ ಕಾರ್ಯಕ್ರಮಗಳ ನಿರ್ವಹಣೆಗೆ ವಿಶೇಷ ತಂಡವನ್ನು ರಚನೆ, ನಿರಂತರ ಪರಿಶೀಲನೆ ಸಭೆಗಳು, ಎದುರಾದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ಸಾಹಿತ್ಯ ಸಮ್ಮೇಳನದ ಪ್ರಮುಖ ವರದಿಗಳು
60 ವರ್ಷಗಳ ಬಳಿಕ ಬಿಸಿಲ ನಾಡಿನಲ್ಲಿ ಸಮ್ಮೇಳನದ ಕಂಪು
101 ವರ್ಷಗಳ ಕಸಾಪ ಇತಿಹಾಸದಲ್ಲಿ ಎರಡನೇ ಬಾರಿ ರಾಯಚೂರಿನಲ್ಲಿ ಸಮ್ಮೇಳನ
ಮುಖ್ಯ ವೇದಿಕೆಗೆ ಶಾಂತರಸ ಹೆಸರು, 40್ಡ80 ಸುತ್ತಳತೆಯ ವೇದಿಕೆಯಲ್ಲಿ 100ರಿಂದ 125 ಮಂದಿ ಕೂರಲು ಅವಕಾಶ
17 ಸಾವಿರ ಮಂದಿಗೆ ಆಸನ ವ್ಯವಸ್ಥೆ
ಊಟೋಪಹಾರಕ್ಕೆ 480 ಕೌಂಟರ್‌ಗಳು, 35 ಸಾವಿರ ಮಂದಿ ಏಕಕಾಲದಲ್ಲಿ ಭೋಜನ ಸವಿಯಲು ವ್ಯವಸ್ಥೆ
ಅಸಮಾನತೆ ನೀಗಿಸುವ ಹೊಣೆಗಾರಿಕೆ ಸಮ್ಮೇಳನದ ಮೇಲೆ
ಶತಮಾನಗಳಿಂದ ಅಸಮಾನತೆಯಿಂದ ಬೆಂದಿರುವ ಹೈದರಾಬಾದ್ ಕರ್ನಾಟಕದ ಜನತೆ ಪರಿಹಾರೋಪಾಯದ ಆಶಯದಿಂದೊಂದಿಗೆ ಸಮ್ಮೇಳನ ಎದುರು ನೋಡುತ್ತಿದ್ದಾರೆ.
ರಾಜ್ಯದ ಅರ್ಧದಷ್ಟು ವಿದ್ಯುತ್ ಬೇಡಿಕೆಯನ್ನು ಈ ಭಾಗ ಒದಗಿಸುತ್ತಿದೆ. ಹಟ್ಟಿ ಚಿನ್ನದ ಗಣಿ ಈ ನಾಡಿನ ಕೊಡುಗೆ.ಸೋನಾ ಮಸೂರಿ ಬತ್ತ ಬೆಳೆವ ನಾಡು, ತುಂಗಭಧಾ, ಕೃಷ್ಣೆ ಎಡತೊರೆ ಹರಿಯುವ ನೆಲ, ಇಷ್ಟಿದ್ದರೂ ಅಭಿವೃದ್ಧಿ ನಾಸ್ತಿ.
ಮುಖ್ಯಮಂತ್ರಿ ಭಾಗವಹಿಸುತ್ತಿರುವುದರಿಂದ ಹೆಚ್ಚಿದ ನಿರೀಕ್ಷೆಗಳು
ನೀರಾವರಿ ಹೊಂದಿರುವ ಲವತ್ತಾದ ನೆಲ ತೆಲುಗು ಶ್ರೀಮಂತರ ಪಾಲು, ಇಲ್ಲಿನ ನೆಲದ ಮಕ್ಕಳು ಕೆಲಸಕ್ಕಾಗಿ ಗುಳೆ ಹೋಗಬೇಕಾದ ಸ್ಥಿತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.