
ಬೆಂಗಳೂರು(ಅ.4): ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮಂಗಳವಾರ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದಾಗಿ ರಾಜ್ಯದ ಕಾವೇರಿ ಜಲಾಶಯಗಳಿಂದ ಒಟ್ಟು 5.45 ಟಿಎಂಸಿ ನೀರು ತಮಿಳುನಾಡು ಪಾಲಾಗಲಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ವರದಿ ಪ್ರಕಾರ ಮಂಗಳವಾರ ರಾಜ್ಯದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಟ್ಟು 33.67 ಟಿಎಂಸಿ ನೀರಿನ ಸಂಗ್ರಹವಿದ್ದು ತಮಿಳುನಾಡು ಬಿಳಿಗುಂಡ್ಲುವಿನ ಮಾಪಕದಲ್ಲಿ ಅ. 18ರೊಳಗಾಗಿ ಒಟ್ಟು ಸುಮಾರು 5.45 ಟಿಎಂಸಿ ನೀರು ರಾಜ್ಯದಿಂದ ಹರಿದು ಹೋಗಿರುವುದು ದಾಖಲಾಗಬೇಕಿದೆ. ಈ ಮೊದಲು ಸೆ.30ರ ಆದೇಶದ ಪ್ರಕಾರ ರಾಜ್ಯ ಪ್ರತಿದಿನ 6 ಸಾವಿರ ಕ್ಯುಸೆಕ್‌ನಂತೆ ಅ. 6ರವರೆಗೆ ಒಟ್ಟು 36 ಸಾವಿರ ಕ್ಯುಸೆಕ್ ನೀರು ಹರಿಸಬೇಕಿತ್ತು. ಈ ಆದೇಶದಂತೆ ಅ. 6ರೊಳಗಾಗಿ ಒಟ್ಟು 3.1 ಟಿಎಂಸಿ ನೀರು ಬಿಡುಗಡೆ ಮಾಡುವುದಾಗಿ ಕರ್ನಾಟಕವು ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ಸಲ್ಲಿಸಿದೆ. ಇದೀಗ ಅ. 7ರಿಂದ 18ರವರೆಗೆ ಒಟ್ಟು 12 ದಿನಗಳ ಕಾಲ ಪ್ರತಿದಿನ 2 ಸಾವಿರ ಕ್ಯುಸೆಕ್‌ನಂತೆ ನೀರು ಹರಿಸಬೇಕಿದ್ದು ಒಟ್ಟು 24 ಸಾವಿರ ಕ್ಯುಸೆಕ್ ನೀರು ಹರಿಸಬೇಕಿದೆ.
ಸುಪ್ರೀಂಕೋರ್ಟ್‌ನ ಸೆ.30ರ ಆದೇಶ ಮತ್ತು ಅ.4ರ ಆದೇಶ ಪಾಲನೆಯಿಂದಾಗಿ ರಾಜ್ಯದ ಕಾವೇರಿ ಜಲಾಶಯಗಳಿಂದ ಒಟ್ಟು ಸುಮಾರು 6 ಟಿಎಂಸಿ ನೀರು ಹರಿಸಬೇಕಾಗಿದ್ದು ಈಗ ಸಂಗ್ರಹವಾಗಿರುವ ಒಟ್ಟು 33.67 ಟಿಎಂಸಿ ಮಟ್ಟವನ್ನು ಪರಿಗಣಿಸಿದರೆ ಸುಮಾರು 28 ಟಿಎಂಸಿಗಳಷ್ಟು ನೀರು ರಾಜ್ಯದ ಪಾಲಿಗೆ ಉಳಿಯಲಿದೆ. ಈ ಪ್ರಮಾಣದಲ್ಲಿ ಸುಮಾರು 23 ಟಿಎಂಸಿ ನೀರು ಕುಡಿಯುವ ನೀರಿನ ಬಳಕೆಗೆ ಮೀಸಲಿಡಬೇಕಿದ್ದು ರಾಜ್ಯದ ಬೆಳೆಗಳಿಗೆ ಇನ್ನು ಮುಂದೆ ನೀರು ಹರಿಸುವುದು ತೀರಾ ಕಷ್ಟ ಸಾಧ್ಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.