ಪಂಚರಾಜ್ಯ ಚುನಾವಣೋತ್ತರ ಭವಿಷ್ಯ : ಯಾರಿಗೆ ಗೆಲುವು..?

By Web DeskFirst Published Dec 8, 2018, 7:27 AM IST
Highlights

ದೇಶದ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದೆ. ಇದೇ ವೇಳೆ ಚುನಾವಣೋತ್ತರ ಸಮೀಕ್ಷೆ ನಡೆದಿದ್ದು ಕೆಲ ರಾಜ್ಯಗಳಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗಲಿದೆ ಎನ್ನುವ  ವಿಚಾರ ತಿಳಿದು ಬಂದಿದೆ. 

ನವದೆಹಲಿ :  ಲೋಕಸಭೆ ಚುನಾವಣೆಗೆ ಮುನ್ನ ‘ಸೆಮಿಫೈನಲ್‌’ ಎಂದೇ ಬಿಂಬಿಸಲಾಗುತ್ತಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆ ಶುಕ್ರವಾರ ಸಂಜೆ ಮುಕ್ತಾಯವಾಗಿದ್ದು, ಮತದಾನೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ. ಆದರೆ ಸಮೀಕ್ಷೆಗಳು ರಾಜಸ್ಥಾನ ಹಾಗೂ ತೆಲಂಗಾಣ ಹೊರತುಪಡಿಸಿದಂತೆ ಮಿಕ್ಕೆಲ್ಲ ಕಡೆ ಇಂಥದ್ದೇ ಪಕ್ಷ ನಿರ್ದಿಷ್ಟವಾಗಿ ಅಧಿಕಾರಕ್ಕೆ ಬರಲಿದೆ ಎಂಬುದನ್ನು ‘ಏಕಸ್ವರ’ದಲ್ಲಿ ಹೇಳಲು ವಿಫಲವಾಗಿದ್ದು, ಡಿಸೆಂಬರ್‌ 11ರಂದು ಪ್ರಕಟಗೊಳ್ಳಲಿರುವ ಫಲಿತಾಂಶದತ್ತ ಬಿಜೆಪಿ, ಕಾಂಗ್ರೆಸ್‌, ಅನ್ಯಪಕ್ಷಗಳು ಹಾಗೂ ದೇಶದ ಜನರು ದೃಷ್ಟಿಹರಿಸುವಂತೆ ಮಾಡಿವೆ.

ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಈವರೆಗೆ ಬಿಜೆಪಿ ಅಧಿಕಾರದಲ್ಲಿದ್ದರೆ, ತೆಲಂಗಾಣದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹಾಗೂ ಮಿಜೋರಾಂನಲ್ಲಿ ಕಾಂಗ್ರೆಸ್‌ ಆಳ್ವಿಕೆ ಇದೆ. ಲೋಕಸಭೆ ಚುನಾವಣೆಗೂ ಮುನ್ನ ತನ್ನ ವಶದಲ್ಲಿದ್ದ ಮೂರು ರಾಜ್ಯಗಳನ್ನು ಉಳಿಸಿಕೊಳ್ಳುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು. ಮೋದಿ ಪ್ರಧಾನಿಯಾದ ನಂತರ ಬಹುತೇಕ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಪ್ರತಿಪಕ್ಷಗಳ ವಶದಲ್ಲಿದ್ದ ರಾಜ್ಯಗಳನ್ನು ಕೇಸರಿ ಪಕ್ಷ ಕಸಿದಿತ್ತು. ಆದರೆ ಈ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ‘ಹೂವಿನ ಹಾದಿ’ ಇಲ್ಲ ಎಂಬುದಂತೂ ಸ್ಪಷ್ಟವಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಈ ಸಮರವು ಚೇತೋಹಾರಿಯಾಗಬಹುದು ಎಂಬ ಲಕ್ಷಣಗಳು ಸಮೀಕ್ಷೆಯಿಂದ ಹೊರಹೊಮ್ಮುತ್ತಿರುವುದಂತೂ ಸ್ಪಷ್ಟ.

ಯಾವ ರಾಜ್ಯದ ಮಿಡಿತ ಏನು?:

ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಬಹುತೇಕ ಸಮೀಕ್ಷೆಗಳು ಕ್ರಮವಾಗಿ ಈವರೆಗೆ ವಿಪಕ್ಷದಲ್ಲಿದ್ದ ಕಾಂಗ್ರೆಸ್‌ ಹಾಗೂ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಜಯಭೇರಿ ಬಾರಿಸಲಿವೆ ಎಂದು ಒಂದೇ ಧಾಟಿಯಲ್ಲಿ ಹೇಳಿವೆ. ರಾಜಸ್ಥಾನದಲ್ಲಿ ವಸುಂಧರಾ ರಾಜೇ ನೇತೃತ್ವದ ಬಿಜೆಪಿ ಆಳ್ವಿಕೆ ಅಂತ್ಯಗೊಳ್ಳಲಿದ್ದು, ಹೊಸದಾಗಿ ಅಸ್ವಿತ್ವಕ್ಕೆ ಬಂದ ತೆಲಂಗಾಣದಲ್ಲಿ ಮೊದಲ ಬಾರಿ ಅಧಿಕಾರಕ್ಕೇರುವ ಕಾಂಗ್ರೆಸ್‌-ಟಿಡಿಪಿ ಮೈತ್ರಿಕೂಟದ ಪ್ರಯತ್ನ ಯಶ ಕಾಣಲಿಕ್ಕಿಲ್ಲ ಎಂದು ಸಮೀಕ್ಷೆಗಳು ನುಡಿದಿವೆ.

ಆದರೆ, ಬಿಜೆಪಿ ಆಳ್ವಿಕೆಯಲ್ಲಿದ್ದ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್‌ ಪಕ್ಷ ಅಡ್ಡಿಯಾಗಿರುವುದು ಸಮೀಕ್ಷೆಗಳಿಂದ ಸ್ಪಷ್ಟವಾಗಿವೆ. ಇಲ್ಲಿ ಮಾಧ್ಯಮ ಸಮೀಕ್ಷೆಗಳಲ್ಲಿ ಏಕಾಭಿಪ್ರಾಯ ಹೊರಹೊಮ್ಮಿಲ್ಲ. ಛತ್ತೀಸ್‌ಗಢದಲ್ಲಿ 4 ಸಮೀಕ್ಷೆಗಳು ಬಿಜೆಪಿ ಪರವಾಗಿದ್ದರೆ, 2 ಸಮೀಕ್ಷೆಗಳು ಕಾಂಗ್ರೆಸ್‌ ಪರ ಇವೆ. 1 ಸಮೀಕ್ಷೆ ಅತಂತ್ರವಾಗಿದ್ದರೂ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹೇಳಿದೆ.

ಮಧ್ಯಪ್ರದೇಶದಲ್ಲೂ ಇದೇ ಸ್ಥಿತಿ ಇದ್ದು, 4 ಸಮೀಕ್ಷೆಗಳು ಕಾಂಗ್ರೆಸ್‌ ಪರ, 1 ಸಮೀಕ್ಷೆ ಬಿಜೆಪಿ ಪರ ಬಹುಮತದ ಭವಿಷ್ಯ ಹೇಳಿವೆ. ಇನ್ನೆರಡು ಸಮೀಕ್ಷೆಗಳು ಅತಂತ್ರ ಸ್ಥಿತಿಯನ್ನು ಸೂಚಿಸುತ್ತಿದ್ದರೂ ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಲಿದೆ ಎಂದು ಹೇಳಿವೆ. ಆದರೆ, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವಿನ ಸೀಟುಗಳ ಅಂತರ ತುಂಬಾ ಕಡಿಮೆ ಇರುವುದು ಸಮೀಕ್ಷೆಯಿಂದ ವ್ಯಕ್ತವಾಗಿದ್ದು, ಇಲ್ಲಿ ಯಾರ ಅಲೆಯೂ ಕೆಲಸ ಮಾಡುತ್ತಿಲ್ಲ ಎಂಬ ಮತದಾರರ ಮನದಿಂಗಿತವನ್ನು ತೋರ್ಪಡಿಸಿವೆ. ಹೀಗಾಗಿ ಡಿಸೆಂಬರ್‌ 11ರ ಮತ ಎಣಿಕೆಯತ್ತ ಜನರು ದೃಷ್ಟಿನೆಡುವಂತೆ ಮಾಡಿವೆ.

ಈಶಾನ್ಯ ರಾಜ್ಯ ಮಿಜೋರಂನಲ್ಲಿ ಕಾಂಗ್ರೆಸ್‌ ಮತ್ತು ಮಿಜೋ ರಾಷ್ಟ್ರೀಯ ರಂಗ (ಎಂಎನ್‌ಎಫ್‌) ಮಧ್ಯೆ ತುರುಸಿನ ಕಾದಾಟ ಏರ್ಪಟ್ಟಿದ್ದು, ಯಾವ ಪಕ್ಷವೂ ಬಹುಮತ ಪಡೆಯಲಿಕ್ಕಿಲ್ಲ ಎಂಬ ಅತಂತ್ರ ಸ್ಥಿತಿಯ ಭವಿಷ್ಯವನ್ನು ಎರಡು ಸಮೀಕ್ಷೆಗಳು ಹೇಳಿವೆ.

ಯಾವ ಪಕ್ಷದ ಪರ ಎಷ್ಟುಸಮೀಕ್ಷೆಗಳು?

ಮಧ್ಯಪ್ರದೇಶ

ಪಕ್ಷ    ಸಮೀಕ್ಷೆ

ಕಾಂಗ್ರೆಸ್‌    4 (ಇಂಡಿಯಾ ಟುಡೇ, ಎಬಿಪಿ, ರಿಪಬ್ಲಿಕ್‌-ಸಿವೋಟರ್‌, ಚಾಣಕ್ಯ)

ಬಿಜೆಪಿ    1 (ಟೈಮ್ಸ್‌ ನೌ)

ಅತಂತ್ರ    2 (ರಿಪಬ್ಲಿಕ್‌-ಜನ್‌ ಕೀ ಬಾತ್‌, ಇಂಡಿಯಾ ನ್ಯೂಸ್‌)

ಛತ್ತೀಸ್‌ಗಢ

ಬಿಜೆಪಿ    4 (ಟೈಮ್ಸ್‌ ನೌ, ಇಂಡಿಯಾ ಟೀವಿ, ಎಬಿಪಿ, ರಿಪಬ್ಲಿಕ್‌-ಜನ್‌ಕೀಬಾತ್‌)

ಕಾಂಗ್ರೆಸ್‌ 2 (ರಿಪಬ್ಲಿಕ್‌-ಸಿವೋಟರ್‌, ಚಾಣಕ್ಯ)

ಅತಂತ್ರ    1 (ನ್ಯೂಸ್‌ ನೇಶನ್‌)

ತೆಲಂಗಾಣ

ಟಿಆರ್‌ಎಸ್‌    6 (ರಿಪಬ್ಲಿಕ್‌-ಜನ್‌ ಕೀ ಬಾತ್‌, ಇಂಡಿಯಾ ಟುಡೇ, ಟೈಮ್ಸ್‌ ನೌ, ರಿಪಬ್ಲಿಕ್‌ ಸಿವೋಟರ್‌, ಟಿವಿ9 ತೆಲುಗು, ಟಿ-ನ್ಯೂಸ್‌)

ಅತಂತ್ರ    1 (ನ್ಯೂಸ್‌ಎಕ್ಸ್‌)

ರಾಜಸ್ಥಾನ

ಕಾಂಗ್ರೆಸ್‌    6 (ಇಂಡಿಯಾ ಟುಡೇ, ರಿಪಬ್ಲಿಕ್‌ ಟೀವಿ-ಸಿವೋಟರ್‌, ಝೀ, ಟೈಮ್ಸ್‌ ನೌ, ಎಬಿಪಿ, ಇಂಡಿಯಾ ಟೀವಿ)

ಬಿಜೆಪಿ 1 (ರಿಪಬ್ಲಿಕ್‌ ಟೀವಿ-ಜನ್‌ಕೀ ಬಾತ್‌)

ಮಿಜೋರಂ

ಅತಂತ್ರ 2 (ರಿಪಬ್ಲಿಕ್‌ ಸಿವೋಟರ್‌, ಟೈಮ್ಸ್‌ ನೌ)

click me!