ಸಾಲದ ಶೂಲಕ್ಕೆ ಸಿಲುಕದಿರಿ; ಪರ್ಸನಲ್ ಲೋನ್ ನಿಭಾಯಿಸುವ ಸಿಂಪಲ್ ಟ್ರಿಕ್ಸ್ ಕಲಿಯಿರಿ

Published : Jul 04, 2017, 10:23 PM ISTUpdated : Apr 11, 2018, 12:53 PM IST
ಸಾಲದ ಶೂಲಕ್ಕೆ ಸಿಲುಕದಿರಿ; ಪರ್ಸನಲ್ ಲೋನ್ ನಿಭಾಯಿಸುವ ಸಿಂಪಲ್ ಟ್ರಿಕ್ಸ್ ಕಲಿಯಿರಿ

ಸಾರಾಂಶ

ಹಣಕಾಸು ಬಿಕ್ಕಟ್ಟು ಅಥವಾ ತುರ್ತು ಸಂದರ್ಭ ಬಂದಾಗ ನಾವು ಹತಾಶರಾಗಿ ಸಿಕ್ಕ ಸಿಕ್ಕ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಅರ್ಜಿ ಹಾಕುವುದುಂಟು. ಯಾವ ಬ್ಯಾಂಕಿಂದಲಾದರೂ ಸಾಲ ಸಿಗಬಹುದು ಎಂಬ ನಂಬಿಕೆ ನಿಮ್ಮದಿರಬಹುದು. ಆದರೆ, ಒಂದಕ್ಕಿಂತ ಹೆಚ್ಚು ಸಾಲಗಳಿಗೆ ಅರ್ಜಿ ಸಲ್ಲಿಸಿದರೆ ನಿಮಗೆ ಸಾಲ ಮಂಜೂರಾಗುವ ಸಾಧ್ಯತೆಯೇ ಕ್ಷೀಣಿಸಬಹುದು.

ವೈದ್ಯಕೀಯ ಖರ್ಚೇ ಇರಬಹುದು ಅಥವಾ ಅಘೋಷಿತ ವೆಚ್ಚವೇ ಇರಬಹುದು, ನಮ್ಮೆಲ್ಲಾ ಜೀವನದಲ್ಲಿ ಒಂದಲ್ಲಾ ಒಂದು ಬಾರಿ ದಿಢೀರ್ ಆರ್ಥಿಕ ಸಂಕಷ್ಟ ಪರಿಸ್ಥಿತಿಗಳು ಎರಗಿಬರುವುದುಂಟು. ಆಗ ನಮ್ಮ ನೆರವಿಗೆ ಬರುವುದು ಬ್ಯಾಂಕ್ ನೀಡುವ ಪರ್ಸನಲ್ ಲೋನ್. ಅನಿರೀಕ್ಷಿತ ಆರ್ಥಿಕ ಸಂಕಷ್ಟದಲ್ಲಿ ಈ ಪರ್ಸನಲ್ ಲೋನ್ ನಿಜಕ್ಕೂ ಆಪದ್ಬಾಂಧವ. ಕಡಿಮೆ ಪ್ರಮಾಣದ ಹಣ ಬೇಕಿದ್ದಾಗ ಇಂತಹ ಸಾಲ ಬಹಳ ಸೂಕ್ತ. ಆದರೆ, ಬಡ್ಡಿದರ ಸ್ವಲ್ಪ ದುಬಾರಿಯಾಗಿರುವುದರಿಂದ ಜಾಗರೂಕತೆಯಿಂದ ಹೆಜ್ಜೆ ಇಡುವುದೂ ಅಗತ್ಯ. ಸರಿಯಾದ ಸಮಯಕ್ಕೆ ಸಾಲ ತೀರಿಸದೇ ಹೋದರೆ ಸಾಲದ ಶೂಲ ನಿಮ್ಮನ್ನು ಮುತ್ತಿಕೊಳ್ಳುವ ಅಪಾಯವುಂಟು ಎಚ್ಚರ..!

ನೀವು ತೆಗೆದುಕೊಳ್ಳುವ ಪರ್ಸನಲ್ ಲೋನು ನಿಮ್ಮ ಹಣಕಾಸು ಪರಿಸ್ಥಿತಿಗೆ ಮುಳುವಾಗಬಾರದು ಎಂಬ ಉದ್ದೇಶವಿದ್ದರೆ ಈ ಐದು ವಿಚಾರಗಳನ್ನು ತಪ್ಪದೇ ಗಮನಿಸಿ:

1) ಒಂದಕ್ಕಿಂತ ಹೆಚ್ಚು ಸಾಲ ಬೇಡ:
ಹಣಕಾಸು ಬಿಕ್ಕಟ್ಟು ಅಥವಾ ತುರ್ತು ಸಂದರ್ಭ ಬಂದಾಗ ನಾವು ಹತಾಶರಾಗಿ ಸಿಕ್ಕ ಸಿಕ್ಕ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಅರ್ಜಿ ಹಾಕುವುದುಂಟು. ಯಾವ ಬ್ಯಾಂಕಿಂದಲಾದರೂ ಸಾಲ ಸಿಗಬಹುದು ಎಂಬ ನಂಬಿಕೆ ನಿಮ್ಮದಿರಬಹುದು. ಆದರೆ, ಒಂದಕ್ಕಿಂತ ಹೆಚ್ಚು ಸಾಲಗಳಿಗೆ ಅರ್ಜಿ ಸಲ್ಲಿಸಿದರೆ ನಿಮಗೆ ಸಾಲ ಮಂಜೂರಾಗುವ ಸಾಧ್ಯತೆಯೇ ಕ್ಷೀಣಿಸಬಹುದು. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಆ ಬ್ಯಾಂಕು ನಿಮ್ಮ ಕ್ರೆಡಿಟ್ ಸ್ಕೋರು ಮತ್ತು ಸಾಲದ ಇತಿಹಾಸವನ್ನು ಪರಿಶೀಲಿಸುತ್ತವೆ. ಒಂದಕ್ಕಿಂತ ಹೆಚ್ಚು ಸಾಲಗಳು ಚಾಲ್ತಿಯಲ್ಲಿದ್ದರೆ ನಿಮ್ಮ ಕ್ರೆಡಿಟ್ ಸ್ಕೋರು ಕಡಿಮೆಯಾಗುತ್ತದೆ. ಇದು ನಿಮ್ಮ ಸಾಲದ ಮೇಲೆ ಪರಿಣಾಮ ಬೀರುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದವರಿಗೆ ಸಾಲ ಸಿಗುತ್ತದಾದರೂ ಅವರಿಗೆ ತುಸು ಹೆಚ್ಚು ಬಡ್ಡಿ ಹಾಕುತ್ತಾರೆ.

2) ತೀರಿಸಲು ಸಾಧ್ಯವಿರುವಷ್ಟೇ ಸಾಲ ಪಡೆಯಿರಿ:
ಕೆಲ ಬ್ಯಾಂಕುಗಳ ಬಹಳ ಸುಲಭವಾಗಿ ಸಾಲ ನೀಡುತ್ತವೆ. ಒಂದೇ ಮೌಸ್ ಕ್ಲಿಕ್’ನಲ್ಲಿ ನಿಮಗೆ ಪ್ರೀ-ಅಪ್ರೂವ್ಡ್ ಇನ್ಸ್’ಟೆಂಟ್ ಲೋನ್’ಗಳು ಸಿಗುತ್ತವೆ. ನೀವು ಆಸೆಯಲ್ಲಿ ಹಿಂದೆ ಮುಂದೆ ನೋಡದೇ ಸಾಲ ಪಡೆದುಬಿಡುತ್ತಿರಿ. ಆದರೆ, ಈ ಸಾಲಗಳ ಮರುಪಾವತಿಗೆ ಪ್ರತೀ ತಿಂಗಳು ಇಎಂಐ ಕಟ್ಟಬೇಕು. ಇದರ ಪ್ರಮಾಣವು ನಿಮ್ಮ ಕೈಮೀರಿದರೆ, ಆ ಇಎಂಐ ಕಟ್ಟಲು ನೀವು ನಿಮ್ಮ ಬೇರೆ ಉಳಿತಾಯ ಹಣವನ್ನು ಉಪಯೋಗಿಸಬೇಕಾಗುತ್ತದೆ. ಅಥವಾ ಅದಕ್ಕೆಂದೇ ಹೊಸ ಸಾಲವನ್ನ ಮಾಡಬೇಕಾಗುತ್ತದೆ. ಆಗ ಸಾಲಗಳ ಶೂಲಕ್ಕೆ ನೀವು ಸಿಲುಕಬೇಕಾಗುತ್ತದೆ. ಇದಕ್ಕೆ ಸಿಂಪಲ್ ಸೂತ್ರವೆಂದರೆ, ನೀವು ಪ್ರತಿ ತಿಂಗಳು ಸಾಲಕ್ಕಾಗಿ ಕಟ್ಟುವ ಕಂತುಗಳ ಮೊತ್ತವು ನಿಮ್ಮ ಮಾಸಿಕ ಆದಾಯದ 40% ಪ್ರಮಾಣವನ್ನು ಮೀರದಂತೆ ಎಚ್ಚರ ವಹಿಸಿ.

3) ಸಾಲ ಮರುಪಾವತಿ ಅವಧಿ:
ಪರ್ಸನಲ್ ಲೋನ್ ಮರುಪಾವತಿಗೆ ಸರಿಯಾದ ಕಾಲಾವಧಿ ನಿಗದಿ ಮಾಡಿಕೊಳ್ಳುವುದು ಬಹಳ ಮುಖ್ಯ. ಕಡಿಮೆ ಇಎಂಐ ಮೊತ್ತದ ಮೇಲೆ ಎಲ್ಲರ ಚಿತ್ತ ಮೊದಲು ನೆಟ್ಟಿಬಿಡುತ್ತದೆ. ಆದರೆ, ಕಂತಿನ ಮೊತ್ತ ಕಡಿಮೆ ಇದ್ದರೆ ಸ್ವಾಭಾವಿಕವಾಗಿ ಕಂತುಗಳ ಪ್ರಮಾಣ ಹೆಚ್ಚೇ ಇರುತ್ತದೆ. ಹೀಗಾದರೆ, ನೀವು ಮರುಪಾವತಿ ಮಾಡುವ ಒಟ್ಟಾರೆ ಮೊತ್ತದ ಪ್ರಮಾಣ ಹೆಚ್ಚಾಗಿಬಿಡುತ್ತದೆ. ಆದ್ದರಿಂದ, ನಿಮಗೆ ಪ್ರತೀ ತಿಂಗಳು ಹೆಚ್ಚು ಹಣ ಕಟ್ಟಲು ಸಾಧ್ಯವಿದ್ದರೆ ಕಡಿಮೆ ಕಂತುಗಳ ಆಯ್ಕೆ ನಿಮ್ಮದಾಗಲಿ. ಒಟ್ಟಿನಲ್ಲಿ ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಇಎಂಐ ಇರಲಿ.

4) ಸರಿಯಾದ ಸಮಯಕ್ಕೆ ಪಾವತಿಸಿ:
ಪರ್ಸನಲ್ ಲೋನ್ ವಿಚಾರದಲ್ಲಿ ಬಹಳ ಮುಖ್ಯವಾದ ವಿಷಯವು ಮರುಪಾವತಿ ದಿನಾಂಕದ್ದು. ಆ ದಿನದೊಳಗೆ ನೀವು ತಪ್ಪದೇ ಕಂತು ಕಟ್ಟಲೇಬೇಕಾಗುತ್ತದೆ. ಇಲ್ಲದಿದ್ದರೆ ಲೇಟ್ ಪೇಮೆಂಟ್ ಶುಲ್ಕ ತೆರಬೇಕಾಗುತ್ತದೆ. ನೀವು ಈ ರೀತಿ ಆಗಾಗ ತಡವಾಗಿ ಪಾವತಿ ಮಾಡಿದರೆ ನಿಮ್ಮ ಕ್ರೆಡಿಟ್ ರೇಟಿಂಗ್ ಕುಸಿಯುತ್ತದೆ. ಮುಂದೆ ನೀವು ಬೇರೆ ಸಾಲ ಪಡೆಯುವಾಗ ಕಷ್ಟವಾಗುತ್ತದೆ. ಲೋನ್ ಕಟ್ಟುವ ವಿಚಾರದಲ್ಲಿ ನಿಮಗೆ ಮರೆವಿನ ಸಮಸ್ಯೆ ಇದ್ದಿರಬಹುದು. ಹಾಗಾದಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್'ನಲ್ಲಿ ಲೋನ್'ಗೆ ಆಟೋಮ್ಯಾಟಿಕ್ ಆಗಿ ಹಣ ಮುರಿದುಕೊಳ್ಳುವ ಅವಕಾಶ ಇದ್ದರೆ ಆಯ್ದುಕೊಳ್ಳಿ. ಆಗ ನೀವು ನಿಶ್ಚಿಂತೆಯಿಂದಿರಬಹುದು.

5) ಸಾಲದ ನಿಬಂಧನೆಗಳನ್ನು ಓದಿ ಅರಿಯಿರಿ:
ಲೀಗಲ್ ಡಾಕ್ಯುಮೆಂಟ್'ಗಳನ್ನು ಓದುವುದು ಅಷ್ಟು ಸುಲಭವಲ್ಲವೆಂದು ನನಗೆ ಗೊತ್ತು. ಆದರೆ, ಪರ್ಸನಲ್ ಲೋನ್ ತೆಗೆದುಕೊಳ್ಳುವಾಗ ಬ್ಯಾಂಕ್'ನವರು ತಿಳಿಸುವ ಟರ್ಮ್ಸ್ ಅಂಡ್ ಕಂಡೀಷನ್ಸ್ ಅಥವಾ ನಿಬಂಧನೆಗಳನ್ನು ಗಮನವಿಟ್ಟು ಓದಿರಿ. ಮುಂದೊಂದು ದಿನ ಸಾಲದ ವಿಚಾರದಲ್ಲಿ ಬ್ಯಾಂಕಿನೊಂದಿಗೆ ತಕರಾರು ಎದ್ದ ಪಕ್ಷದಲ್ಲಿ ಈ ಲೀಗಲ್ ಡಾಕ್ಯುಮೆಂಟ್'ಗಳು ನಿಮಗೆ ನೆರವಿಗೆ ಬರಬಹುದು.

ಸಾಲಗಳ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕು. ಇವು ನಿಮ್ಮ ಸಂಪತ್ತನ್ನು ಹೆಚ್ಚಿಸಲು ಸಹಾಯವಾಗಬಹುದು. ಅಥವಾ ನಿಮಗೆ ಆರ್ಥಿಕ ಸಂಕಷ್ಟ ತಂದೊಡ್ಡಬಹುದು. ಸಾಲಗಳನ್ನು ಯಾವ ರೀತಿಯಲ್ಲಿ ಚೆನ್ನಾಗಿ ಉಪಯೋಗಿಸಿಕೊಳ್ಳಬೇಕೆಂಬ ಕಲೆಯನ್ನು ನೀವು ಅನುಭವದಿಂದ ಕಲಿತುಕೊಳ್ಳಿರಿ.

ಲೇಖಕರು: ಅಧಿಲ್ ಶೆಟ್ಟಿ, ಸಿಇಒ, ಬ್ಯಾಂಕ್'ಬಜಾರ್ ಡಾಟ್ ಕಾಂ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಮಾನದಲ್ಲೇ CPR ನೀಡಿ ಅಮೆರಿಕ ಯುವತಿಯ ಪ್ರಾಣ ಉಳಿಸಿದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್
ಪ್ರಧಾನಿ ಮಾಡಿದ್ದೆಲ್ಲಾ ತಪ್ಪು ಅನ್ನೋದು ತಪ್ಪು: ಕೈಗೆ ಮಾಜಿ ಕಾಂಗ್ರೆಸ್ಸಿಗನ ಸಲಹೆ