
ನವದೆಹಲಿ[ಜು.21]: ದೇಶದ 130 ಕೋಟಿ ಜನಸಂಖ್ಯೆ ಪೈಕಿ 5.6 ಕೋಟಿಗಿಂತ ಹೆಚ್ಚು ಮಂದಿ ತಾವು ಹುಟ್ಟಿದ ರಾಜ್ಯ ಬಿಟ್ಟು ಇತರೆ ರಾಜ್ಯಗಳಿಗೆ ವಲಸೆ ಹೋಗಿ ಜೀವನೋಪಾಯ ಕಂಡುಕೊಂಡಿದ್ದಾರೆ ಎಂಬ ಕುತೂಹಲಕಾರಿ ಸಂಗತಿ 2011ರ ಜನಗಣತಿಯಿಂದ ಗೊತ್ತಾಗಿದೆ.
ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಿಂದ ಸಾರ್ವಜನಿಕರು ತಮ್ಮ ಜೀವನೋಪಾಯಕ್ಕಾಗಿ ಇತರೆ ರಾಜ್ಯಗಳಿಗೆ ಹೆಚ್ಚು ಮಂದಿ ಗುಳೆ ಹೋಗಿದ್ದರೆ, ಮಹಾರಾಷ್ಟ್ರ, ದೆಹಲಿ ಹಾಗೂ ಗುಜರಾತ್ ರಾಜ್ಯಗಳು ಇತರ ರಾಜ್ಯದ ಹೆಚ್ಚು ಮಂದಿಯನ್ನು ತಮ್ಮತ್ತ ಸೆಳೆದಿವೆ ಎಂದು 2011ರ ಜನಗಣತಿಯಲ್ಲಿ ಉಲ್ಲೇಖಿಸಲಾಗಿದೆ. ಬಿಹಾರ ಅತಿದೊಡ್ಡ ರಾಜ್ಯಗಳಲ್ಲಿ ಒಂದಾಗಿದ್ದರೂ, ಈ ರಾಜ್ಯಕ್ಕೆ ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಿಂದ 40 ಲಕ್ಷ ಮಂದಿ ವಲಸೆ ಬಂದರೆ, ಬಿಹಾರದಿಂದ 1.30 ಕೋಟಿ ಮಂದಿ ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ಇತರೆ ಪ್ರದೇಶಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಾರೆ.
ಅತಿಹೆಚ್ಚು ಅಭಿವೃದ್ಧಿಗೆ ತೆರೆದುಕೊಂಡಿರುವ ರಾಜ್ಯಗಳಲ್ಲಿ ಹೊರ ಹೋಗುವ ವಲಸಿಗರ ಸಂಖ್ಯೆ ಕಡಿಮೆಯಿದ್ದು, ಇತರೆ ರಾಜ್ಯಗಳ ವಲಸಿಗರ ಆಗಮನ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂಬುದು ಅಘೋಷಿತ ನಿಯಮವಾಗಿದೆ. ಈ ಪ್ರಕಾರ ದಕ್ಷಿಣದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳಲ್ಲಿ ಹೊರ ರಾಜ್ಯಗಳಿಗೆ ಹೋಗುವ ವಲಸಿಗರ ಸಂಖ್ಯೆ ಹೆಚ್ಚಿದ್ದು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಹೊರ ಹೋಗುವ ವಲಸಿಗರ ಪ್ರಮಾಣ ಕಡಿಮೆಯಿದೆ.
ಇನ್ನು ಉತ್ತರಾಖಂಡ್, ಛತ್ತೀಸ್‌ಗಢ ಹಾಗೂ ಜಾರ್ಖಂಡ್‌ನಲ್ಲಿ ಹೊರಹೋಗುವ ವಲಸಿಗರ ಪ್ರಮಾಣಕ್ಕಿಂತ ಹೊರ ರಾಜ್ಯದ ವಲಸಿಗರ ಆಗಮನ ಪ್ರಮಾಣ ಹೆಚ್ಚಿದೆ.
ಹಾಗೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಹೊರ ರಾಜ್ಯಗಳ ವಲಸಿಗರ ಪೈಕಿ ಉತ್ತರ ಪ್ರದೇಶದ ಮೂಲದ ಶೇ.45, ಮಧ್ಯಪ್ರದೇಶದ ಶೇ.41, ಮಹಾರಾಷ್ಟ್ರದ ಶೇ.31, ಗುಜರಾತ್‌ನ ಶೇ.24ರಷ್ಟಿದೆ ಎಂದು ಹೇಳಲಾಗಿದೆ.
| ರಾಜ್ಯ | ಹೊರ ವಲಸಿಗರು | ಒಳ ವಲಸಿಗರು |
| ಉತ್ತರ ಪ್ರದೇಶ | 1.30 ಕೋಟಿ | 40 ಲಕ್ಷ |
| ಬಿಹಾರ | 79 ಲಕ್ಷ | 11 ಲಕ್ಷ |
| ರಾಜಸ್ಥಾನ | 39 ಲಕ್ಷ | 26 ಲಕ್ಷ |
| ಮಧ್ಯಪ್ರದೇಶ | 28 ಲಕ್ಷ | |
| ಮಹಾರಾಷ್ಟ್ರ | 30 ಲಕ್ಷ | 98 ಲಕ್ಷ |
| ದೆಹಲಿ | 12 ಲಕ್ಷ | 64 ಲಕ್ಷ |
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.