ಪ್ರವಾಹ ಸಮೀಕ್ಷೆಗೆ ಇಳಿಯಲಿದೆ ಬಿಜೆಪಿಯ 4 ತಂಡ

By Web DeskFirst Published Aug 9, 2019, 7:59 AM IST
Highlights

ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಈ ನಿಟ್ಟಿನಲ್ಲಿ ರಾಜ್ಯದ ಪ್ರವಾಹ ಪೀಡಿತ ಪ್ರದೇಶದಲ್ಲಿ  ಬಿಜೆಪಿಯ ನಾಲ್ಕು ತಂಡಗಳು ಸಮೀಕ್ಷೆ ನಡೆಸಲಿವೆ. 

ಬೆಂಗಳೂರು[ಆ.09]:  ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸುವ ಸಂಬಂಧ ಆಡಳಿತಾರೂಢ ಬಿಜೆಪಿಯ ಸಂಸದರು ಹಾಗೂ ಶಾಸಕರನ್ನು ಒಳಗೊಂಡ ಸಮೀಕ್ಷಾ ತಂಡಗಳನ್ನು ರಚಿಸಲಾಗಿದೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಒಟ್ಟು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ತಮಗೆ ನಿಗದಿಪಡಿಸಿದ ಜಿಲ್ಲೆಗಳಲ್ಲಿ ಗುರುವಾರದಿಂದಲೇ ಪ್ರವಾಸ ಆರಂಭಿಸಿದ್ದು, ಶನಿವಾರದವರೆಗೆ ಪ್ರವಾಸ ನಡೆಸಲಿವೆ. ಭಾರಿ ಮಳೆ ಮತ್ತು ಪ್ರವಾಹದಿಂದ ಬಳಲುತ್ತಿರುವ 12 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಒಂದೊಂದು ತಂಡಕ್ಕೆ ಮೂರು ಜಿಲ್ಲೆಗಳನ್ನು ನಿಗದಿಪಡಿಸಲಾಗಿದೆ.

ಸರ್ಕಾರದಲ್ಲಿ ಸಚಿವರು ಇಲ್ಲದಿರುವುದರಿಂದ ವಿವಿಧ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಬಗ್ಗೆ ನಿಗಾ ಇಡುವ ಸಂಬಂಧ ಈ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಸಮೀಕ್ಷೆ ನಡೆಸಿದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ವಿವರ ಸಲ್ಲಿಸಿ ಮುಂದೆ ಆಗಬೇಕಾಗಿರುವ ಪರಿಹಾರ ಕಾರ್ಯಗಳ ಬಗ್ಗೆ ಸಲಹೆ ನೀಡಲಿವೆ.

ಯಡಿಯೂರಪ್ಪ ನೇತೃತ್ವದ ತಂಡ ಬೆಳಗಾವಿ, ಚಿಕ್ಕೋಡಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ, ಜಗದೀಶ್‌ ಶೆಟ್ಟರ್‌ ನೇತೃತ್ವದ ತಂಡ ಧಾರವಾಡ, ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ, ಈಶ್ವರಪ್ಪ ನೇತೃತ್ವದ ತಂಡ ಶಿವಮೊಗ್ಗ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ, ಶೋಭಾ ಕರಂದ್ಲಾಜೆ ನೇತೃತ್ವದ ತಂಡ ದಕ್ಷಿಣ ಕನ್ನಡ, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿವೆ.

ಯಡಿಯೂರಪ್ಪ ನೇತೃತ್ವದ ತಂಡ:  ರೇಲ್ವೆ ಸಚಿವ ಸುರೇಶ್‌ ಅಂಗಡಿ, ಸಂಸದರಾದ ಅಣ್ಣಾ ಸಾಹೇಬ್‌ ಜೊಲ್ಲೆ, ಪಿ.ಸಿ.ಗದ್ದಿಗೌಡರ್‌, ಶಾಸಕರಾದ ಉಮೇಶ್‌ ಕತ್ತಿ, ಗೋವಿಂದ ಕಾರಜೋಳ ಮತ್ತು ಎನ್‌.ರವಿಕುಮಾರ್‌.

ಜಗದೀಶ್‌ ಶೆಟ್ಟರ್‌ ನೇತೃತ್ವದ ತಂಡ:  ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ಅನಂತಕುಮಾರ್‌ ಹೆಗಡೆ, ಶಿವಕುಮಾರ್‌ ಉದಾಸಿ, ಶಾಸಕರಾದ ಬಸವರಾಜ ಬೊಮ್ಮಾಯಿ ಹಾಗೂ ದಿನಕರ ಶೆಟ್ಟಿ.

ಕೆ.ಎಸ್‌.ಈಶ್ವರಪ್ಪ ನೇತೃತ್ವದ ತಂಡ:  ಸಂಸದರಾದ ಬಿ.ವೈ.ರಾಘವೇಂದ್ರ, ಪ್ರತಾಪ್‌ ಸಿಂಹ, ಶಾಸಕರಾದ ಸಿ.ಟಿ.ರವಿ, ವಿ.ಸೋಮಣ್ಣ, ಕೆ.ಜಿ.ಬೋಪಯ್ಯ ಮತ್ತು ಪ್ರೀತಂ ಗೌಡ.

ಶೋಭಾ ಕರಂದ್ಲಾಜೆ ನೇತೃತ್ವದ ತಂಡ:  ಸಂಸದ ನಳಿನ್‌ಕುಮಾರ್‌ ಕಟೀಲು, ಶಾಸಕರಾದ ಕೋಟ ಶ್ರೀನಿವಾಸ ಪೂಜಾರಿ, ಸಂಜೀವ ಮಟಂದೂರು, ಮಾಜಿ ಶಾಸಕ ಡಿ.ಎನ್‌.ಜೀವರಾಜ್‌ ಹಾಗೂ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ.

click me!