
ಪರಿಷತ್ : ಗೃಹ ಇಲಾಖೆ ಅಡಿ ಬರುವ ಪೊಲೀಸ್ ಮತ್ತು ಕಾರಾಗೃಹ ಸೇರಿದಂತೆ ವಿವಿಧ ಇಲಾಖೆಯಲ್ಲಿ 31,694 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಪ್ರಶ್ನೋತ್ತರ ವೇಳೆ ಬಿಜೆಪಿಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2008-2013ರ ಅವಧಿಯಲ್ಲಿ ಯಾವುದೇ ಹುದ್ದೆಗಳು ಭರ್ತಿ ಆಗದ ಕಾರಣ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿದ್ದವು. ಹೀಗಾಗಿ ಕಳೆದ ಐದು ವರ್ಷಗಳಲ್ಲಿ 26,188 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈಗ ಹೊಸದಾಗಿ 12,139 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ 1,12,975 ಹುದ್ದೆಗಳು ಮಂಜೂರಾಗಿದ್ದು, 26,105 ಹುದ್ದೆಗಳು ಖಾಲಿ ಇದೆ, ಕಾರಾಗೃಹ ಇಲಾಖೆಯಲ್ಲಿ ಮಂಜೂರಾದ 3459 ಹುದ್ದೆಗಳ ಪೈಕಿ 1763 ಖಾಲಿ ಹುದ್ದೆಗಳು ಖಾಲಿ ಇವೆ. ಪ್ರತಿ ವರ್ಷ ನಾಲ್ಕೈದು ಜನರು ನಿವೃತ್ತರಾಗುತ್ತಾರೆ. ಇವುಗಳನ್ನು ತಕ್ಷಣ ಭರ್ತಿ ಮಾಡಲಿಲ್ಲ, ಜೊತೆಗೆ ಈ ಹಿಂದಿನ ಆಡಳಿತ ಅವಧಿಯಲ್ಲಿ ಹುದ್ದೆ ಭರ್ತಿ ಮಾಡದ ಕಾರಣ ದೊಡ್ಡ ಪ್ರಮಾಣದಲ್ಲಿ ಹುದ್ದೆ ಖಾಲಿ ಉಳಿದಿವೆ. ಈಗ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಹುದ್ದೆಗಳನ್ನು ಕೆಪಿಎಸ್‌ಸಿ ಹಾಗೂ ಮುಂಬಡ್ತಿ ಮೂಲಕ ಮತ್ತು ನೇರ ನೇಮಕದ ಮೂಲಕ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು.
ಆರ್ಡರ್ಲಿ ಪದ್ಧತಿ ರದ್ದತಿಗೆ ಬದ್ಧ : ಗೃಹ ಇಲಾಖೆಯಲ್ಲಿ ಆರ್ಡರ್ಲಿ ಪದ್ದತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸರ್ಕಾರ ಬದ್ಧವಾಗಿದೆ. ಸುಮಾರು ಮೂರು ಸಾವಿರ ತರಬೇತಿ ಪಡೆದ ಪೊಲೀಸರು ಅರ್ಡರ್ಲಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಈಗ ಆ ಪದ್ಧತಿಯನ್ನು ಹಂತ ಹಂತವಾಗಿ ತೆಗೆಯಲಾಗುವುದು. ಆರ್ಡರ್ಲಿ ಬದಲಾಗಿ ಫಾಲೋಯರ್ಸ್ ನೇಮಕ ಮಾಡುತ್ತಿದ್ದೇವೆ ಎಂದು ಡಾ.ಪರಮೇಶ್ವರ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.