
ನವದೆಹಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಪ್ರಬಲ ಮೈತ್ರಿಕೂಟ ರಚಿಸುವ ಆಶಯ ಹೊಂದಿರುವ ವಿಪಕ್ಷಗಳ ಬೃಹತ್ ಸಭೆಯೊಂದು ಸೋಮವಾರ ಇಲ್ಲಿ ನಡೆಯಿತು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 21 ವಿಪಕ್ಷಗಳ ನಾಯಕರು ಭಾಗಿಯಾಗಿದ್ದರು. ಇದೇ ಮೊದಲ ಬಾರಿಗೆ ಮಹಾಮೈತ್ರಿಕೂಟದ ಸಭೆಯಲ್ಲಿ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಭಾಗಿಯಾದರೆ, ಉತ್ತರಪ್ರದೇಶದ ಬಹುದೊಡ್ಡ ಪಕ್ಷಗಳಾದ ಸಮಾಜವಾದಿ ಮತ್ತು ಬಹುಜನ ಸಮಾಜವಾದಿ ಪಕ್ಷದ ನಾಯಕರು ಗೈರಾಗುವ ಮೂಲಕ ಗಮನ ಸೆಳೆದರು.
ಸಂಸತ್ ಆವರಣದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಯಾವುದೇ ನಿರ್ದಿಷ್ಟನಿರ್ಧಾರ ಕೈಗೊಳ್ಳದೇ ಇದ್ದರೂ, ಸಭೆಯಲ್ಲಿ ಭಾಗಿಯಾಗಿದ್ದ ಎಲ್ಲಾ ನಾಯಕರು, ಬಿಜೆಪಿ ವಿರುದ್ಧ ಸಂಘಟಿತ ಹೋರಾಟದ ಇರಾದೆ ವ್ಯಕ್ತಪಡಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ಮಹಾಮೈತ್ರಿಕೂಟವನ್ನು ಹೇಗೆ ಮುನ್ನಡೆಸಿಕೊಂಡು ಹೋಗಬೇಕು, ಈ ದಿಸೆಯಲ್ಲಿ ಮುಂದಿನ ಕಾರ್ಯತಂತ್ರಗಳನ್ನು ಹೇಗೆ ರೂಪಿಸಬೇಕು ಎಂಬ ಬಗ್ಗೆ ನಾಯಕರು ಚರ್ಚಿಸಿದರು. ಜೊತೆಗೆ ಶೀಘ್ರವೇ ಇನ್ನೊಂದು ಸುತ್ತಿನ ಸಭೆ ನಡೆಸುವ ನಿರ್ಧಾರಕ್ಕೂ ನಾಯಕರು ಬಂದರು.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷೆ ಸೋನಿಯಾ, ಜೆಡಿಎಸ್ ನಾಯಕ ಎಚ್.ಡಿ.ದೇವೇಗೌಡ, ಎನ್‌ಸಿಪಿ ನಾಯಕ ಶರದ್ ಪವಾರ್, ಡಿಎಂಕೆ ನಾಯಕ ಸ್ಟಾಲಿನ್, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಆಪ್ ಸಂಚಾಲಕ ಕೇಜ್ರಿವಾಲ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಎನ್‌ಸಿ ನಾಯಕ ಫಾರುಖ್ ಅಬ್ದುಲ್ಲಾ, ಆರ್‌ಜೆಡಿಯ ತೇಜಸ್ವಿ ಯಾದವ್, ಸಿಪಿಎಂನ ಸೀತಾರಾಂ ಯೆಚೂರಿ, ಸಿಪಿಐನ ಸುಧಾಕರ್ ರೆಡ್ಡಿ, ಎಲ್‌ಜೆಡಿಯ ಶರದ್ ಯಾದವ್, ಜೆವಿಎಂನ ಬಾಬುಲಾಲ್ ಮುರಾಂಡಿ ಮೊದಲಾದವರು ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.