2019 ರಲ್ಲಿ 100 ಕೋಟಿ ಜನರನ್ನು ಒದ್ದೋಡಿಸ್ತಿವಿ: ಶಾ!

By Web DeskFirst Published Sep 24, 2018, 1:54 PM IST
Highlights

ಗೊಂದಲ ಮೂಡಿಸಿದ ಅಮಿತ್ ಶಾ ಹೇಳಿಕೆ! ದೇಶದಲ್ಲಿ 100  ಕೋಟಿ ಅಕ್ರಮ ವಲಸಿಗರು! ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗರು ಗಡಿಪಾರು! ಕೇಜ್ರಿವಾಲ್, ರಾಹುಲ್ ಮೇಲೆ ಹರಿಹಾಯ್ದ ಬಿಜೆಪಿ ರಾಷ್ಟ್ರಾಧ್ಯಕ್ಷ
 

ನವದೆಹಲಿ(ಸೆ.24): 2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ಇರುವ ಅಕ್ರಮ ವಲಸಿಗರನ್ನು ಪತ್ತೆ ಮಾಡಿ ಗಡಿಪಾರು ಮಾಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಹೇಳಿದ್ದಾರೆ. 

ದೆಹಲಿ ಬಿಜೆಪಿಯಿಂದ ಆಯೋಜಿಸಲಾಗಿದ್ದ ಪೂರ್ವಾಂಚಲ ಮಹಾಕುಂಭದಲ್ಲಿ ಭಾಗವಹಿಸಿ ಮಾತನಾಡಿರುವ ಅಮಿತ್ ಶಾ, ರಾಹುಲ್ ಗಾಂಧಿ, ಕೇಜ್ರಿವಾಲ್ ಅಕ್ರಮ ವಲಸಿಗರನ್ನು ರಕ್ಷಿಸಿ,  ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಅಕ್ರಮ ವಲಸಿಗರನ್ನು ಗೆದ್ದಲು ಹುಳಗಳಿಗೆ ಹೋಲಿಕೆ ಮಾಡಿರುವ ಅಮಿತ್ ಶಾ, ದೆಹಲಿ ಸೇರಿದಂತೆ ಇಡೀ ದೇಶದಲ್ಲಿ ಸುಮಾರು ೧೦೦ ಕೋಟಿ ಅಕ್ರಮ ವಲಸಿಗರಿದ್ದಾರೆ ಎಂದು ಹೇಳಿದ್ದಾರೆ. ಶಾ ಅವರ ಈ ಹೇಳಿಕೆ ತುಸು ಗೊಂದಲ ಮೂಡಿಸಿರುವುದೂ ನಿಜ. 100 ಕೋಟಿ ಅಕ್ರಮ ವಲಸಿಗರಿದ್ದಾರೆ ಎಂಬ ಶಾ ಹೇಳಿಕೆ ವಿವಾದ ಸೃಷ್ಟಿಸುವ ಸಾಧ್ಯತೆಯೂ ಇದೆ.

2019 ರಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚಿಸಿದ ನಂತರ ರಾಷ್ಟ್ರಾದ್ಯಂತ ಅಕ್ರಮ ವಲಸಿಗರನ್ನು ಪತ್ತೆ ಮಾಡುತ್ತೇವೆ ಎಂದು ಶಾ ಭರವಸೆ ನೀಡಿದ್ದಾರೆ. ದೇಶಕ್ಕೆ ಸಮಸ್ಯೆ ಉಂಟುಮಾಡುತ್ತಿರುವ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಂಡರೆ ದೇಶಪ್ರೇಮಿಗಳಿಗೆ ಆತಂತ ಉಂಟಾಗುವುದಿಲ್ಲ, ಆದರೆ ಅಕ್ರಮ ವಲಸಿಗರ ವಿರುದ್ಧ ನಾವು ಯಾವುದೇ ಕ್ರಮ ಕೈಗೊಂಡರೂ ರಾಹುಲ್ ಗಾಂಧಿ, ಕೇಜ್ರಿವಾಲ್ ನಮ್ಮ ಸರ್ಕಾರವನ್ನು ದೂರಲು ಪ್ರಾರಂಭಿಸುತ್ತಾರೆ ಎಂದು ಶಾ ಹರಿಹಾಯ್ದಿದ್ದಾರೆ.

ಇನ್ನು ಅಮಿತ್ ಶಾ ಹೇಳಿಕೆಯನ್ನು ಬಾಂಗ್ಲಾದೇಶ ಕೂಡ ಖಂಡಿಸಿದ್ದು, ಇದೊಂದು ಅನಗತ್ಯ ಹೇಳಿಕೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಬಾಂಗ್ಲಾದೇಶಿಯರನ್ನು ಗೆದ್ದಲು ಹುಳಕ್ಕೆ ಹೋಲಿಸಿದ ಶಾ ನಡೆಯಿಂದ ನೋವಾಗಿರುವುದಾಗಿ ಬಾಂಗ್ಲಾ ಹೇಳಿದೆ.

click me!