UPI: ಗೂಗಲ್ ಪೇ, ಫೋನ್ ಪೇ ಯೂಸರ್ಸ್ ಗಮನಕ್ಕೆ! 2,000 ಕ್ಕಿಂತ ಹೆಚ್ಚು ಟ್ರಾನ್ಸ್‌ಫರ್ ಮಾಡಿದ್ರೆ ಬೀಳುತ್ತಾ ಎಕ್ಸ್‌ಟ್ರಾ ಚಾರ್ಜ್? ಆರ್‌ಬಿಐ ನಿಯಮ ಏನು ಹೇಳುತ್ತೆ!

Published : Aug 09, 2026, 10:40 PM IST
UPI MDR Charges

ಸಾರಾಂಶ

ಗೂಗಲ್ ಪೇ, ಫೋನ್ ಪೇ ಮೂಲಕ ₹2,000 ಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂಬ ವದಂತಿ ಹರಡಿದೆ. ಆದರೆ, ಆರ್‌ಬಿಐ ನಿಯಮ ಏನು ಹೇಳುತ್ತೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ಡಿಜಿಟಲ್ ಯುಗದಲ್ಲಿ ಇಂದು ಪ್ರತಿಯೊಬ್ಬರೂ ಜೇಬಿನಲ್ಲಿ ನಗದು ಹಣ ಇಟ್ಟುಕೊಳ್ಳುವುದನ್ನೇ ಮರೆತುಬಿಟ್ಟಿದ್ದಾರೆ. ಸಣ್ಣ ತರಕಾರಿ ಅಂಗಡಿಯಿಂದ ಹಿಡಿದು ದೊಡ್ಡ ಶಾಪಿಂಗ್ ಮಾಲ್‌ಗಳವರೆಗೆ ಎಲ್ಲರೂ ಗೂಗಲ್ ಪೇ (Google Pay), ಫೋನ್ ಪೇ (PhonePe) ನಂತಹ ಯುಪಿಐ (UPI) ಆ್ಯಪ್‌ಗಳನ್ನೇ ನೆಚ್ಚಿಕೊಂಡಿದ್ದಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಒಂದು ಸುದ್ದಿ ಭಾರಿ ಸದ್ದು ಮಾಡುತ್ತಿದ್ದು, ನಿಯಮಿತ ಮೊತ್ತಕ್ಕಿಂತ ಹೆಚ್ಚು ಹಣ ವರ್ಗಾವಣೆ ಮಾಡಿದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ವದಂತಿ ಹಬ್ಬಿದೆ. ಆದರೆ, ಕೇಂದ್ರ ಹಣಕಾಸು ಸಚಿವಾಲಯ ಏನು ಹೇಳುತ್ತದೆ ಎನ್ನುವುದನ್ನು ನೋಡೋಣ ಬನ್ನಿ.

ಏನಿದು ಎಂಡಿಆರ್‌ ಶುಲ್ಕ!

ವಾಸ್ತವವಾಗಿ, ಕೇಂದ್ರ ಹಣಕಾಸು ಸಚಿವಾಲಯವು ಸಂಸತ್ತಿನಲ್ಲಿ 'ಪಾವತಿ ಮತ್ತು ವಸಾಹತು ವ್ಯವಸ್ಥೆಗಳ (ತಿದ್ದುಪಡಿ) ಮಸೂದೆ, 2027' ಅನ್ನು ಪರಿಚಯಿಸಿದೆ. ಈ ಮಸೂದೆಯಲ್ಲಿ 'ವ್ಯಾಪಾರಿ ರಿಯಾಯಿತಿ ದರ' ಅಂದರೆ ಎಂಡಿಆರ್ ಅನ್ನು ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆಯ ಪ್ರಕಾರ, 2,000 ರೂಪಾಯಿಗಿಂತ ಹೆಚ್ಚಿನ ವ್ಯವಹಾರಿಕ ವಹಿವಾಟುಗಳಿಗೆ ಮಾತ್ರ ಎಂಡಿಆರ್ ಶುಲ್ಕ ಅನ್ವಯಿಸುವ ಸಾಧ್ಯತೆಯಿದೆ. ಆದರೆ ಈ ಹೊಸ ಪ್ರಸ್ತಾವನೆಯು ಸಾಮಾನ್ಯ ಗ್ರಾಹಕರಿಗೆ ಯಾವುದೇ ರೀತಿಯಲ್ಲೂ ಅನ್ವಯಿಸುವುದಿಲ್ಲ.

ಸೋಶಿಯಲ್‌ ಮೀಡಿಯಾ ನೋಡಿ ಆತಂಕ ಪಡುವ ಅಗತ್ಯವಿಲ್ಲ!

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳನ್ನು ನೋಡಿ ಕಂಗಾಲಾಗುವ ಅಗತ್ಯವಿಲ್ಲ. ನೀವು ದಿನನಿತ್ಯ ಮನೆಗೆ ಬೇಕಾದ ಹಾಲು, ತರಕಾರಿಗಳು, ದಿನಸಿ ವಸ್ತುಗಳನ್ನು ಖರೀದಿಸುವುದು ಅಥವಾ ಆಟೋ ಮತ್ತು ಟ್ಯಾಕ್ಸಿ ದರಗಳನ್ನು ಪಾವತಿಸುವಂತಹ ಸಾಮಾನ್ಯ UPI ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಟೈಮ್ಸ್ ಆಫ್ ಇಂಡಿಯಾ ಮೂಲಗಳ ಪ್ರಕಾರ, ಈ ಶಿಫಾರಸು ಮುಖ್ಯವಾಗಿ 2,000 ರೂಪಾಯಿಗಿಂತ ಹೆಚ್ಚಿನ ವಾಣಿಜ್ಯ ವ್ಯವಹಾರಗಳನ್ನು ಮಾಡುವ ದೊಡ್ಡ ಸಂಸ್ಥೆಗಳನ್ನು ಮಾತ್ರ ಗುರಿಯಾಗಿರಿಸಿಕೊಂಡಿದೆ.

ಎಂಡಿಆರ್ ಶುಲ್ಕ ಯಾರಿಗೆ ಅನ್ವಯ!

ಸರಳವಾಗಿ ಹೇಳಬೇಕೆಂದರೆ, ಇಲ್ಲಿ ಉಲ್ಲೇಖಿಸಲಾದ MDR ಶುಲ್ಕ ಎನ್ನುವುದು ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಿದ್ದಕ್ಕಾಗಿ ಬ್ಯಾಂಕುಗಳಿಗೆ ಪಾವತಿಸುವ ಶುಲ್ಕವಾಗಿದೆ. ಇದು ಸಂಪೂರ್ಣವಾಗಿ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆಯೇ ಹೊರತು, ಹಣ ಪಾವತಿಸುವ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅಂದಹಾಗೆ, ಸರ್ಕಾರವು ಜನವರಿ 2020 ರಿಂದಲೇ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ UPI ಮತ್ತು RuPay ಡೆಬಿಟ್ ಕಾರ್ಡ್‌ಗಳ ಮೇಲಿದ್ದ ಎಂಡಿಆರ್ ಶುಲ್ಕ ರದ್ದುಗೊಳಿಸಿತ್ತು.

ವಹಿವಾಟಿನ ಮಿತಿ ಏನು?

ಇನ್ನು ವಹಿವಾಟಿನ ಮಿತಿಯ ಬಗ್ಗೆ ನೋಡುವುದಾದರೆ, ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಒಬ್ಬ ಸಾಮಾನ್ಯ ಬಳಕೆದಾರ ದಿನಕ್ಕೆ 1 ಲಕ್ಷ ರೂಪಾಯಿಯವರೆಗೆ ಯಾವುದೇ ಅಡೆತಡೆಯಿಲ್ಲದೆ ಯುಪಿಐ ವಹಿವಾಟು ಮಾಡಬಹುದು. ಇನ್ನು ಆಸ್ಪತ್ರೆಗಳ ಬಿಲ್ ಪಾವತಿ, ಶಿಕ್ಷಣ ಸಂಸ್ಥೆಗಳ ಶುಲ್ಕ ಹಾಗೂ ಸರ್ಕಾರಿ ತೆರಿಗೆ ಪಾವತಿಗಳಂತಹ ಕೆಲವು ವಿಶೇಷ ಸಂದರ್ಭಗಳಲ್ಲಿ ಈ ಮಿತಿಯು ಇನ್ನಷ್ಟು ಹೆಚ್ಚಿರುತ್ತದೆ. ಆದ್ದರಿಂದ, 2,000 ರೂಪಾಯಿಗಿಂತ ಹೆಚ್ಚು ಹಣ ವರ್ಗಾವಣೆ ಮಾಡಿದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.

PREV
Read more Articles on
click me!

Recommended Stories

LPG: ಗ್ಯಾಸ್ ಸಬ್ಸಿಡಿ ತಕ್ಷಣವೇ ಬಂದ್: ಸರ್ಕಾರದಿಂದ ಹೊಸ ರೂಲ್ಸ್‌, ಮಾಡಬೇಕಾಗಿದ್ದಿಷ್ಟೇ!
ಬೆಕ್ಕಿನ ಜೊತೆ ಆಟವಾಡ್ತಿದ್ದ ಬಾಲಕ ICU ಪಾಲು.. ಪೋಷಕರೇ ನಿಮ್ಮ ಮಗು ಜೋಪಾನ