Tax Experts: ಸ್ಯಾಲರಿ ಸ್ಲಿಪ್‌ನಲ್ಲಿ ಈ 3 ವಿಷಯ ಗಮನಿಸಿದ್ದೀರಾ? ತೆರಿಗೆ ತಜ್ಞರು ಹೇಳುವ ಸೂತ್ರ ಬಳಸಿ ಹಣ ಉಳಿಸಿ!

Published : Jul 08, 2026, 09:09 PM IST
save money from salary

ಸಾರಾಂಶ

ಉದ್ಯೋಗಿಗಳು  ಸ್ಯಾಲರಿ ಸ್ಲಿಪ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕಾರಣ ಅಗತ್ಯಕ್ಕಿಂತ ಹೆಚ್ಚು ತೆರಿಗೆ ಪಾವತಿಸುತ್ತಾರೆ. ಕೆಲ ಅಂಶಗಳನ್ನು ತಿಳಿದುಕೊಳ್ಳುವ ಮೂಲಕ, ಯಾವುದೇ ಹೆಚ್ಚುವರಿ ಹೂಡಿಕೆ ಇಲ್ಲದೆ ಕಾನೂನುಬದ್ಧವಾಗಿ ಆದಾಯ ತೆರಿಗೆಯನ್ನು ಕಡಿಮೆ ಮಾಡಬಹುದು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ. 

ಬಹುತೇಕ ಉದ್ಯೋಗಿಗಳು ತಮ್ಮ ಸಂಬಳದ ಮೊತ್ತ ಮತ್ತು ಬ್ಯಾಂಕ್ ಖಾತೆಗೆ ಜಮೆಯಾಗುವ ಹಣವನ್ನು ಮಾತ್ರ ಗಮನಿಸುತ್ತಾರೆ. ಆದರೆ ಸ್ಯಾಲರಿ ಸ್ಲಿಪ್‌ ಅಲ್ಲಿರುವ ಮಾಹಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ, ಹೆಚ್ಚುವರಿ ಹೂಡಿಕೆ ಮಾಡದೇ ಕೂಡ ಕಾನೂನುಬದ್ಧವಾಗಿ ಆದಾಯ ತೆರಿಗೆ ಕಡಿಮೆ ಮಾಡಬಹುದು. ತೆರಿಗೆ ತಜ್ಞರ ಪ್ರಕಾರ, ಸಂಬಳದ ರಚನೆ ತಿಳಿಯದ ಕಾರಣ ಅನೇಕರು ಅಗತ್ಯಕ್ಕಿಂತ ಹೆಚ್ಚು ತೆರಿಗೆ ಪಾವತಿಸುತ್ತಿದ್ದಾರೆ ಎನ್ನುವ ದತ್ತಾಂಶ ಹೊರಗಡೆ ಬಂದಿದೆ. ಹಾಗಾದಾರೆ, ನಾವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶವನ್ನು ನೋಡುತ್ತ ಹೋಗೋಣ ಬನ್ನಿ.

ನೋಡಬೇಕಾದದ್ದು ಏನು?

ಸ್ಯಾಲರಿ ಸ್ಲಿಪ್‌ ಅಲ್ಲಿ ಮುಖ್ಯವಾಗಿ ಗಳಿಕೆ, ಕಡಿತಗಳು ಎಂಬ ಎರಡು ಭಾಗಗಳಿರುತ್ತವೆ. ಗಳಿಕೆಯಲ್ಲಿ ಮೂಲ ಸಂಬಳ, ವಿವಿಧ ಭತ್ಯೆ ಸೇರಿರುತ್ತವೆ. ಕಡಿತಗಳಲ್ಲಿ ಇಪಿಎಫ್ (EPF), ವೃತ್ತಿಪರ ತೆರಿಗೆ, ಟಿಡಿಎಸ್ (TDS) ಮುಂತಾದವು ಸೇರಿವೆ. ಸಂಬಳದ ಪ್ರತಿಯೊಂದು ಅಂಶಕ್ಕೂ ಒಂದೇ ರೀತಿಯಲ್ಲಿ ತೆರಿಗೆ ವಿಧಿಸಲಾಗುವುದಿಲ್ಲ. ಕೆಲವು ಭತ್ಯೆಗಳಿಗೆ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.

ಮೂಲ ಸಂಬಳ !

ಮೂಲ ಸಂಬಳವು, ಸಂಬಳದ ಪ್ರಮುಖ ಭಾಗವಾಗಿದೆ. ಇದು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಜತೆಗೆ ಪಿಎಫ್, ಗ್ರಾಚ್ಯುಟಿ, ಎಚ್‌ಆರ್‌ಎ ಮತ್ತು ಇತರ ಸೌಲಭ್ಯಗಳ ಲೆಕ್ಕಾಚಾರವೂ ಇದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಕಂಪನಿಗಳು ಹೊಂದಿಕೊಳ್ಳುವ ಸಂಬಳ ರಚನೆ (FBP) ನೀಡುತ್ತವೆ. ಇಂತಹ ಸಂದರ್ಭದಲ್ಲಿ ಮಾನವ ಸಂಪನ್ಮೂಲ ವಿಭಾಗದೊಂದಿಗೆ ಚರ್ಚಿಸಿ, ತೆರಿಗೆ ಉಳಿತಾಯ ಹಾಗೂ ನಿವೃತ್ತಿ ಸೌಲಭ್ಯಗಳ ನಡುವೆ ಸಮತೋಲನ ಸಾಧಿಸುವಂತೆ ಸಂಬಳ ರೂಪಿಸಬಹುದು.

ಎಚ್‌ಆರ್‌ಎ ಎಂಬ ಉಪಯುಕ್ತ ಸೌಲಭ್ಯ!

ಮನೆ ಬಾಡಿಗೆ ಭತ್ಯೆ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಅತ್ಯಂತ ಉಪಯುಕ್ತ ಸೌಲಭ್ಯವಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುವ ಉದ್ಯೋಗಿಗಳು ನಿಗದಿತ ನಿಯಮಗಳ ಪ್ರಕಾರ ತೆರಿಗೆ ವಿನಾಯಿತಿ ಪಡೆಯಬಹುದು. ಇದಕ್ಕಾಗಿ ಬಾಡಿಗೆ ರಶೀದಿ, ಬಾಡಿಗೆ ಒಪ್ಪಂದ ಹಾಗೂ ಅಗತ್ಯವಿದ್ದರೆ ಮನೆ ಮಾಲೀಕರ ಪ್ಯಾನ್ ವಿವರವನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಬೇಕು. ದಾಖಲೆ ಸಲ್ಲಿಸದಿದ್ದರೆ ಈ ಪ್ರಯೋಜನ ಸಿಗುವುದಿಲ್ಲ. ರಜೆ ಪ್ರಯಾಣ ಭತ್ಯೆಮೂಲಕ ಭಾರತದೊಳಗಿನ ಪ್ರವಾಸದ ಪ್ರಯಾಣ ವೆಚ್ಚಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ಪ್ರಯಾಣದ ಟಿಕೆಟ್‌ಗಳು ಮತ್ತು ಬಿಲ್‌ಗಳನ್ನು ಸಲ್ಲಿಸಬೇಕು. ಹೋಟೆಲ್ ಅಥವಾ ಊಟದ ವೆಚ್ಚಗಳಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ. ಇದರ ಜೊತೆಗೆ, ಆಹಾರ ಕೂಪನ್, ಮೊಬೈಲ್ ಮತ್ತು ಇಂಟರ್ನೆಟ್ ಬಿಲ್ ಮರುಪಾವತಿ, ಸಮವಸ್ತ್ರ ಭತ್ಯೆ, ಮಕ್ಕಳ ಶಿಕ್ಷಣ ಭತ್ಯೆ ಮುಂತಾದ ಕೆಲವು ಸೌಲಭ್ಯಗಳಿಗೂ ನಿಯಮಾನುಸಾರ ತೆರಿಗೆ ವಿನಾಯಿತಿ ದೊರೆಯಬಹುದು. ಅಧಿಕೃತ ವೆಚ್ಚಗಳ ಬಿಲ್‌ಗಳನ್ನು ಸಲ್ಲಿಸಿದರೆ ಈ ಪ್ರಯೋಜನಗಳನ್ನು ಪಡೆಯಲು ಸಾಧ್ಯ.

ಏನಿದು ಎಫ್‌ಬಿಪಿ?

ಇತ್ತೀಚೆಗೆ ಅನೇಕ ಖಾಸಗಿ ಕಂಪನಿಗಳು ಫ್ಲೇಕ್ಸಿಬಲ್ ಬೆನಿಫಿಟ್ ಪ್ಲ್ಯಾನ್ (FBP) ನೀಡುತ್ತಿವೆ. ಇದರಲ್ಲಿ ಉದ್ಯೋಗಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಕೆಲವು ಭತ್ಯೆ ಆಯ್ಕೆ ಮಾಡಬಹುದು. ಹೀಗೆ ಮಾಡಿದರೆ ಹೆಚ್ಚುವರಿ ಹೂಡಿಕೆ ಇಲ್ಲದೇ ವಾರ್ಷಿಕ ತೆರಿಗೆ ಹೊರೆ ಕಡಿಮೆಯಾಗುವ ಸಾಧ್ಯತೆ ಇದೆ.

ಸೌಲಭ್ಯದ ಬಳಕೆ ಸಮಪರ್ಕವಾಗಿರಲಿ!

ಸ್ಯಾಲರಿ ಸ್ಲಿಪ್, ಕೇವಲ ವೇತನದ ದಾಖಲೆ ಮಾತ್ರವಲ್ಲ, ಅದು ಉತ್ತಮ ತೆರಿಗೆ ಯೋಜನೆಗೆ ಸಹಾಯಕವಾಗುವ ಪ್ರಮುಖ ದಾಖಲೆ. ಸಂಬಳದ ಪ್ರತಿಯೊಂದು ಅಂಶ ಅರ್ಥಮಾಡಿಕೊಂಡು, ಅಗತ್ಯ ದಾಖಲೆಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಿದರೆ, ಕಾನೂನುಬದ್ಧವಾಗಿ ಸಾವಿರಾರು ರೂಪಾಯಿ ತೆರಿಗೆ ಉಳಿಸಬಹುದು. ಆದ್ದರಿಂದ ಹಣಕಾಸು ವರ್ಷದ ಕೊನೆಯಲ್ಲಿ ಅಲ್ಲ, ವರ್ಷದ ಆರಂಭದಲ್ಲೇ ನಿಮ್ಮ ಸಂಬಳದ ರಚನೆ ಪರಿಶೀಲಿಸಿ, ಲಭ್ಯವಿರುವ ಎಲ್ಲ ತೆರಿಗೆ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಉತ್ತಮ.

PREV
Read more Articles on
click me!

Recommended Stories

Investment: ಮಗಳ ಭವಿಷ್ಯಕ್ಕೆ ಸೂಪರ್ ಪ್ಲಾನ್; ಹೂಡಿಕೆ ಮಾಡುವ ಮುನ್ನ ಈ ಲೆಕ್ಕ ತಿಳಿಯಿರಿ! ಬಂಪರ್‌ ರಿಟರ್ನ್ಸ್‌ ಪಡೆಯಿರಿ!
ರಾಹುಲ್ ಗಾಂಧಿ ಹೂಡಿಕೆಯ ‘ಲಕ್ಕಿ 7’ ಮ್ಯೂಚುವಲ್ ಫಂಡ್ಸ್; ಕೇವಲ 1 ವರ್ಷದಲ್ಲೇ ಕೋಟಿ ಕೋಟಿ ಕಮಾಯಿ!