ರಾಷ್ಟ್ರಪತಿ ರಮನಾಥ್‌ಕೋವಿಂದ್ ಶುಕ್ರವಾರ ನಂಜನಗೂಡು, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಕಾಲಿಗೆ ಬೀಳು ಬಂದ ಶಾಸಕನನ್ನು ರಾಷ್ಟ್ರಪತಿ ತಡೆದಿದ್ದಾರೆ. ಶ್ರೀಕಂಠೇಶ್ವರನಿಗೆ ವಿಶೇಷ ಅರ್ಚನೆ, ಪೂಜೆ ಸಲ್ಲಿಸಿದ ನಂತರ ದೇವರ ದರ್ಶನ ಪಡೆದ ಅವರು, 10 ನಿಮಿಷಗಳ ಕಾಲ ಗರ್ಭಗುಡಿಯ ಮುಂಭಾಗ ಧ್ಯಾನಾಸಕ್ತರಾದರು.
ಮೈಸೂರು(ಅ.12): ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇಗುಲಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶುಕ್ರವಾರ ಪತ್ನಿ ಸಮೇತ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದಿದ್ದಾರೆ.
ಮೈಸೂರಿನಿಂದ ರಸ್ತೆ ಮಾರ್ಗವಾಗಿ ಬೆಳಗ್ಗೆ 9.30ಕ್ಕೆ ಆಗಮಿಸಿದ ರಾಷ್ಟ್ರಪತಿಯವರನ್ನು ಶಾಸಕ ಬಿ. ಹರ್ಷವರ್ಧನ್, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಎಸ್ಪಿ ರಿಷ್ವಂತ್, ತಹಸೀಲ್ದಾರ್ ಕೆ.ಎಂ. ಮಹೇಶ್ ಕುಮಾರ್, ದೇಗುಲದ ಇಒ ರವೀಂದ್ರ, ಎಇಒ ಗಂಗಯ್ಯ ನೇತೃತ್ವದಲ್ಲಿ ಪೂರ್ಣಕುಂಭ, ನಾದಸ್ವರದೊಂದಿಗೆ ಬರಮಾಡಿಕೊಳ್ಳಲಾಗಿತ್ತು.
ಫಲತಾಂಬೂಲ ನೀಡಿ ಗೌರವ:
ಶ್ರೀಕಂಠೇಶ್ವರನಿಗೆ ವಿಶೇಷ ಅರ್ಚನೆ, ಪೂಜೆ ಸಲ್ಲಿಸಿದ ನಂತರ ದೇವರ ದರ್ಶನ ಪಡೆದ ಅವರು, 10 ನಿಮಿಷಗಳ ಕಾಲ ಗರ್ಭಗುಡಿಯ ಮುಂಭಾಗ ಧ್ಯಾನಾಸಕ್ತರಾದರು. ನಂತರ ಸುಬ್ರಹ್ಮಣೇಶ್ವರ, ಉತ್ಸವ ಮೂರ್ತಿ, ಸರಸ್ವತಿ, ಪಾರ್ವತಿ ದೇವಿ, ಚಂಡಿಕೇಶ್ವರ, ಸತ್ಯನಾರಾಯಣ, ತಾಂಡವೇಶ್ವರನ ದರ್ಶನ ಪಡೆದು, ದೇವಾಲಯದ ಒಳಗಿರುವ ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿದರು. ದೇವಾಲಯದ ವತಿಯಿಂದ ಅವರನ್ನು ಫಲತಾಂಬೂಲ, ಶ್ವೇತ ವಸ್ತ್ರ, ನೀಡಿ ಗೌರವಿಸಲಾಯಿತು.
ಒಡೆಯರ ತತ್ವಾದರ್ಶ ಪಾಲಿಸುವುದೇ ಗೌರವ: ರಾಷ್ಟ್ರಪತಿ ಕರೆ
ಶಾಸಕ ಕಾಲಿಗೆ ಬೀಳುವುದನ್ನು ತಡೆದ ರಾಷ್ಟ್ರಪತಿ!
ನಂತರ ಶಾಸಕ ಬಿ. ಹರ್ಷವರ್ಧನ್ ರಾಷ್ಟ್ರಪತಿಗಳ ಜೊತೆ ಪರಿಚಯ ಮಾಡಿಕೊಂಡು ಅವರ ಕಾಲಿಗೆ ನಮಸ್ಕರಿಸಲು ಮುಂದಾದಾಗ ಅವರನ್ನು ತಡೆದ ರಾಷ್ಟ್ರಪತಿಗಳು ನಮಸ್ಕಾರವನ್ನು ಶ್ರೀಕಂಠೇಶ್ವರನಿಗೆ ಮಾಡಿ ಎಂದರು. ಶಾಸಕರು ದಿ ರಾಡಿಕಲ್ ಇನ್ ಅಂಬೇಡ್ಕರ್ ಕ್ರಿಟಿಕಲ್ ರಿಫ್ಲೆಕ್ಷನ್ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.
ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ:
ದೇವಾಲಯಕ್ಕೆ ರಾಷ್ಟ್ರಪತಿ ಆಗಮನದ ಹಿನ್ನೆಲೆ ದೇವಾಲಯಕ್ಕೆ ಬೆಳಗ್ಗಿನಿಂದಲೇ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ದೇವಾಲಯದ ಆವರಣದ ಸುತ್ತಮುತ್ತಲೂ ಕೂಡ ಬಿಗಿ ಪೊಲೀಸ್ ಬಂದೋಬಸ್‌್ತ ನಿಯೋಜಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮೈಸೂರು ಮಾರ್ಗದಲ್ಲಿ ರಸ್ತೆ ಸಂಚಾರವನ್ನು ನಿರ್ಭಂದಿಸಲಾಗಿತ್ತು. ಇದರಿಂದ ಸಾರ್ವಜನಿಕರಿಗೆ ಸಂಚಾರ ಅಸ್ತವ್ಯಸ್ತಗೊಂಡು ಹೈರಾಣಾದರು. ಅಲ್ಲದೆ ಶುಕ್ರವಾರ ನಡೆಯಬೇಕಿದ್ದ ದನಗಳ ಸಂತೆಯನ್ನೂ ರದ್ದುಪಡಿಸಲಾಗಿತ್ತು.
400 ಮಂದಿ ಪೊಲೀಸ್ ಭದ್ರತೆ:
ಮುಂಜಾಗ್ರತಾ ಕ್ರಮವಾಗಿ ಐವರು ಡಿವೈಎಸ್ಪಿ, 10 ಸರ್ಕಲ್ ಇನ್‌ಸ್ಪೆಕ್ಟರ್, 25 ಮಂದಿ ಎಸ್‌ಐ, 400 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಂಡು ಬಿಗಿ ಪೊಲೀಸ್ ಬಂದೋಬಸ್‌್ತ ನಿಯೋಜಿಸಲಾಗಿತ್ತು. ರಾಷ್ಟ್ರಪತಿಗಳನ್ನು ಅದ್ದೂರಿಯಾಗಿ ಯಾವುದೇ ಅಡೆ ತಡೆಯಿಲ್ಲದೆ ಪಟ್ಟಣಕ್ಕೆ ಬರಮಾಡಿಕೊಂಡು ವರುಣಕ್ಕೆ ರಸ್ತೆ ಮಾರ್ಗವಾಗಿ ಸುರಕ್ಷಿತವಾಗಿ ಕಳುಹಿಸಿಕೊಡಲಾಯಿತು.