ಎನ್‌ಟಿಎಂಸ್ ಶಾಲೆ ಹಸ್ತಾಂತರವಿಲ್ಲ, ಯಥಾಸ್ಥಿತಿಯಲ್ಲಿ ನಡೆಸಲು ಸೂಚನೆ

By Kannadaprabha NewsFirst Published Oct 15, 2019, 9:57 AM IST
Highlights

ಎನ್‌ಟಿಎಂಸ್ ಶಾಲೆ ಯಥಾಸ್ಥಿತಿಯಂತೆ ನಡೆಸಲು ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಕೆ. ಜ್ಯೋತಿ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಕಳೆದ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಕನ್ನಡಪರ ಸಂಘಟನೆಗಳು, ಪ್ರಗತಿಪರ ಚಿಂತಕರು ಮತ್ತು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಕ್ಷಣ ಧರಣಿ ಕೈಬಿಟ್ಟು ಸಿಹಿ ಹಂಚಿ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು.

ಮೈಸೂರು(ಅ.15): ಎನ್‌ಟಿಎಂಸ್ ಶಾಲೆ ಉಳಿವಿಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೀಡಿದ ಆದೇಶದ ಹಿನ್ನೆಲೆಯಲ್ಲಿ ಪ್ರಭಾರ ಜಿಲ್ಲಾಧಿಕಾರಿ, ಜಿಪಂ ಸಿಇಒ ಕೆ. ಜ್ಯೋತಿ ಸ್ಥಳಕ್ಕೆ ಆಗಮಿಸಿ ಶಾಲೆಯನ್ನು ಯಥಾಸ್ಥಿತಿಯಂತೆ ನಡೆಸಲು ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಕನ್ನಡಪರ ಸಂಘಟನೆಗಳು, ಪ್ರಗತಿಪರ ಚಿಂತಕರು ಮತ್ತು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಕ್ಷಣ ಧರಣಿ ಕೈಬಿಟ್ಟು ಸಿಹಿ ಹಂಚಿ ಪರಸ್ಪರ ಶುಭಾಶಯ ಕೋರಿ ಸಂಭ್ರಮಿಸಿದರು. ಶಾಲೆಗೆ ನಿಯೋಜಿಸಿದ್ದ ಬಿಗಿ ಪೊಲೀಸ್‌ ಬಂದೋಬಸ್ತ್ ಅನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದು, ದಸರಾ ರಜೆ ಕಳೆದ ನಂತರ ಅ. 17 ರಿಂದ ಶಾಲೆ ಎಂದಿನಂತೆ ಆರಂಭವಾಗಲಿದೆ ಎಂದು ಶಿಕ್ಷಣಾಧಿಕಾರಿಗಳು ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ.

ಶಾಲೆ ಜೀವಂತಿಕೆಗೊಳಿಸಲು ನಿರ್ಣಯ:

ಇದೇ ವೇಳೆ ಎನ್‌ಟಿಎಂ ಶಾಲೆಯನ್ನು ಶ್ರೀರಾಮಕೃಷ್ಣ ಆಶ್ರಮದಿಂದ ಶಾಶ್ವತವಾಗಿ ದೂರ ಉಳಿಸಿಕೊಳ್ಳಲು ಕ್ರಿಯಾತ್ಮಕ ಚಟುವಟಿಕೆ ನಡೆಸುವ ಸಲುವಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಶಾಲೆಯಲ್ಲಿ ವಾರಕ್ಕೊಮ್ಮೆ ಸಭೆ ಸೇರುವುದು, ಶಾಲೆಗೆ ಹೆಚ್ಚು ಮಕ್ಕಳನ್ನು ಸೇರಿಸುವುದು ಇತ್ಯಾದಿ ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಸಮಿತಿಯೊಂದನ್ನು ರಚಿಸಿ ಮಾಜಿ ಸಚಿವ ಸಾ.ರಾ. ಮಹೇಶ್‌, ಕನ್ನಡ ಕ್ರಿಯಾ ಸಮಿತಿಯ ಪ. ಮಲ್ಲೇಶ್‌, ಸ.ರ. ಸುದರ್ಶನ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌, ಸಂಪಾದಕ ರವಿಕೋಟಿ, ಇತಿಹಾಸಜ್ಞ ಪ್ರೊ.ಪಿ.ವಿ. ನಂಜರಾಜ ಅರಸು ಅವರನ್ನೊಳಗೊಂಡ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಸಾಕಷ್ಟುಹೋರಾಟ:

ಇದೇ ವೇಳೆ ಇತಿಹಾಸಜ್ಞ ಪ್ರೊ.ಪಿ.ವಿ. ನಂಜರಾಜ ಅರಸು ಮಾತನಾಡಿ, ಎನ್‌ಟಿಎಂ ಶಾಲೆ ಉಳಿವಿಗೆ ಕಳೆದ ಎರಡು ದಿನಗಳಿಂದ ಸಾಕಷ್ಟುಮಂದಿ ಹೋರಾಟ ನಡೆಸಿದ್ದಾರೆ. ಜತೆಗೆ ನಾವು ಶಾಲಾ ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳಿ ಹೈಕೋರ್ಟ್‌ ನ್ಯಾಯಮೂರ್ತಿ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ನಮ್ಮ ಹೋರಾಟಕ್ಕೆ ಅರ್ಧ ಫಲ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆದೇಶ ಆಗುವವರೆಗೂ ಹೋರಾಟ ನಡೆಸಬೇಕಾಗಿದೆ. ಈಗ ಸಿಕ್ಕಿರುವುದು ಶಾಶ್ವತ ಪರಿಹಾರವಲ್ಲ ಎಂಬುದನ್ನು ಹೋರಾಟಗಾರರು ಮನಗಾಣಬೇಕು ಎಂದು ತಿಳಿಸಿದ್ದಾರೆ.

ಮೈಸೂರು: ವಾಲ್ಮೀಕಿ ಜಯಂತಿಯಲ್ಲಿ ಕಲ್ಲು ತೂರಾಟ, 32 ಜನರಿಗೆ ನ್ಯಾಯಾಂಗ ಬಂಧನ

ಸಭೆಯಲ್ಲಿ ವಿಮರ್ಶಕ ಡಾ.ಜಿ.ಎಚ್‌. ನಾಯಕ್‌, ಮಹಿಳಾವಾದಿ ಮೀರಾ ನಾಯಕ್‌, ಮಾಜಿ ಸಚಿವ ಸಾ.ರಾ. ಮಹೇಶ್‌, ಶಾಸಕ ಅನಿಲ್‌ ಚಿಕ್ಕಮಾದು, ಚಿಂತಕ ಪ್ರೊ.ಕೆ.ಎಸ್‌. ಭಗವಾನ್‌, ಪ್ರೊ.ಬಿ.ಪಿ. ಮಹೇಶ್‌ಚಂದ್ರ ಗುರು, ಮಾಜಿ ಮೇಯರ್‌ ಪುರುಷೋತ್ತಮ್‌, ಜ್ಞಾನ ಪ್ರಕಾಶ ಸ್ವಾಮೀಜಿ, ಬಸವ ಹರಳಯ್ಯ ಸ್ವಾಮೀಜಿ, ಸಮಾಜವಾದಿ ಪ. ಮಲ್ಲೇಶ್‌, ಕನ್ನಡ ಕ್ರಿಯಾ ಸಮಿತಿಯ ಸ.ರ. ಸುದರ್ಶನ್‌, ಎಂ.ಬಿ. ವಿಶ್ವನಾಥ್‌, ಸಂಸ್ಕೃತಿ ಸುಬ್ರಹ್ಮಣ್ಯ, ಕೊ.ಸು. ನರಸಿಂಹಮೂರ್ತಿ, ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್‌. ಶಿವರಾಮು, ಮೂಗೂರು ನಂಜುಂಡಸ್ವಾಮಿ, ದಸಂಸ ಸಂಚಾಲಕ ಬೆಟ್ಟಯ್ಯ ಕೋಟೆ, ರತ್ನಪುರಿ ಪುಟ್ಟಸ್ವಾಮಿ, ಚೋರನಹಳ್ಳಿ ಶಿವಣ್ಣ, ಸಂಪಾದಕ ರವಿಕೋಟಿ, ಉಪಸಂಪಾದಕಿ ರಶ್ಮೀ ಕೌಜಲಗಿ, ರಮ್ಯ ಪಾಟೀಲ್‌, ಮಾಜಿ ಶಾಸಕ ಕೆ.ಸಿ. ಪುಟ್ಟಸಿದ್ದಶೆಟ್ಟಿ, ಅರಸು ಸಂಘದ ನಂದೀಶ್‌ ಅರಸ್‌, ಪಿಯುಸಿಎಲ್‌ನ ಡಾ.ವಿ. ಲಕ್ಷ್ಮೇನಾರಾಯಣ, ರತಿರಾವ್‌, ಒಡನಾಡಿಯ ಸ್ಟ್ಯಾನ್ಲಿ- ಪರಶು, ಸಿಪಿಐನ ಲ. ಜಗನ್ನಾಥ್‌, ಅರವಿಂದ ಶರ್ಮಾ, ಧನಪಾಲ್‌ ಮತ್ತಿತರರು ಪಾಲ್ಗೊಂಡಿದ್ದರು.

2012ರಲ್ಲೆ ಎನ್‌ಟಿಎಂ ಶಾಲೆ ಉಳಿವಿನ ಬಗ್ಗೆ ಸದನದ ಬಾವಿಗಿಳಿದು ಹೋರಾಟ ಮಾಡಿದ್ದೆ. ಈಗ ಶಿಕ್ಷಣಾಧಿಕಾರಿಗಳು ಸರ್ಕಾರಿ ಆದೇಶವಿಲ್ಲದೆ ಚೆನ್ನೈ ಮೂಲದ ಶ್ರೀರಾಮಕೃಷ್ಣ ಆಶ್ರಮಕ್ಕೆ ಈ ಜಾಗ ಬಿಟ್ಟುಕೊಡಲು ನಾವು ಒಪ್ಪಬೇಕಾ? ಎಂದು ಮಾಜಿ ಸಚಿವ ಸಾ.ರಾ ಮಹೇಶ್‌ ಪ್ರಶ್ನಿಸಿದ್ದಾರೆ.

ಸಿದ್ದು-ಪ್ರಸಾದ್ ಮುಖಾಮುಖಿ: ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳು! ಮುಂದೇನಾಯ್ತು?

click me!