
ಮೈಸೂರು (ಆ.25) ಮೈಸೂರು ದಸರಾ ಉದ್ಘಾಟನೆ ವಿಚಾರ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜಟಾಪಟಿ ಜೋರಾಗಿದೆ. ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ, ಬೂಕರ್ ಪ್ರಶಸ್ತಿ ಪುರಸ್ಕೃತೆ ಭಾನು ಮುಷ್ತಾಕ್‌ಗೆ ರಾಜ್ಯ ಸರ್ಕಾರ ಆಹ್ವಾನ ನೀಡಿದೆ. ಭಾನು ಮುಷ್ತಾಕ್ ಅವರ ನಿಲುವು, ಅವರ ಧರ್ಮ, ಆಚರಣೆಗಳು ತಾಯಿ ಚಾಮುಂಡೇಶ್ವರಿ ಆರಾಧನೆ, ಉತ್ಸವಕ್ಕೆ ಅಡ್ಡಿಯಾಗಲಿದೆ ಎಂದು ಬಿಜೆಪಿ ಆರೋಪಿಸಿದೆ. ಈ ವಿವಾದ ತೀವ್ರಗೊಳ್ಳುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ವಿವಾದ್ಮಾತ ಪ್ರತಿಕ್ರಿಯೆ ನೀಡಿದ್ದಾರೆ. ತಾಯಿ ಚಾಮಂಡಿಯನ್ನು ಉದ್ಘಾಟಕರು ನಂಬುತ್ತಾರೋ, ಬಿಡುತ್ತಾರೋ ಅವರಿಗೆ ಬಿಟ್ಟಿದ್ದು. ಇದು ಊರ ಹಬ್ಬ ಎಲ್ಲರು ಸೇರಿ ಮಾಡಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಪರಮೇಶ್ವರ್, ದಸರಾ ನಾಡ ಹಬ್ಬ, ಯಾವ ಜಾತಿಗೆ, ಧರ್ಮಕ್ಕೆ ಸೀಮಿತವಲ್ಲ. ಒಂದು ಧರ್ಮವನ್ನು ಹೊರಗಿಟ್ಟು ದಸರಾ ಹಬ್ಬ ಮಾಡಲು ಸಾಧ್ಯವೇ? ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ. ಮಿರ್ಜಾ ಇಸ್ಮಾಯಿಲ್ ದಿವನರಾಗಿ ದಸರಾ ಮಾಡಿಲ್ಲವೇ? ನಿಸ್ಸಾರ್ ಅಹಮ್ಮದ್ ದಸರಾ ಉದ್ಘಾಟನೆ ಮಾಡಿಲ್ಲವೇ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ. ಇದೀಗ ಬೂಕರ್ ಪ್ರಶಸ್ತಿ ವಿಜೇತ ಭಾನು ಮುಷ್ತಾಕ್ ದಸರಾ ಹಬ್ಬ ಉದ್ಘಾಟನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪರಮೇಶ್ವರ್ ಪ್ರಶ್ನಿಸಿದ್ದಾರೆ. ಈ ವಿಚಾರಗಳಲ್ಲಿ ತಕರಾರು ತೆಗೆಯಬಾರದು. ಊರ ಹಬ್ಬವನ್ನು ಎಲ್ಲರು ಸೇರಿ ಮಾಡಬೇಕು ಎಂದು ಪರಮೇಶ್ವರ್ ಹೇಳಿದ್ದಾರೆ.
ಭಾನು ಮುಷ್ತಾಕ್ 2023ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವೇಳೆ ಕನ್ನಡವನ್ನು ತಾಯಿ ಭುವನೇಶ್ವರಿಯಾಗಿ ಮಾಡಿರುವದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ವಿಡಿಯೋವನ್ನು ಚಿಂತಕ ಚಕ್ರವರ್ತಿ ಸೂಲೆಬೆಲೆ ಸೇರಿದಂತೆ ಹಲವರು ಹಂಚಿಕೊಂಡು ಭಾನು ಮುಷ್ತಾಕ್ ಹಾಗೂ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದೆ. ಈ ವೈರಲ್ ವಿಡಿಯೋದಲ್ಲಿ ಭಾನು ಮುಷ್ತಾಕ್, ಕನ್ನಡವನ್ನು ಭುವನೇಶ್ವರಿಯಾಗಿ ಮಾಡಿದ್ದೀರಿ, ಕೆಂಪು ಹಳದಿಯ ಅರಶಿನ ಕುಂಕುಮ ಬಾವುಟ ಹಾಕಿದ್ದೀರಿ. ಹೀಗಾಗಿ ಮುಸ್ಲಿಮರು ಕನ್ನಡದಿಂದ ದೂರ ಉಳಿದಿದ್ದಾರೆ ಅನ್ನೋ ಮಾತುಗಳನ್ನಾಡಿದ್ದರು. ಕನ್ನಡ ಭಾಷೆಯನ್ನು ದೇವತೆ ಮಾಡಿ ದೌರ್ಜನ್ಯ ಮಾಡುತ್ತೀದ್ದಿರಿ ಎಂದಿದ್ದರು. ತಾಯಿ ಭುವನೇಶ್ವರಿಯನ್ನೇ ಸಹಿಸಿಕೊಳ್ಳಲು ಸಾಧ್ಯವಾಗದ ಭಾನು ಮುಷ್ತಾಕ್ ತಾಯಿ ಚಾಮಂಡೇಶ್ವರಿಯನ್ನು ಸಹಿಸಿಕೊಳ್ಳಲು ಸಾಧ್ಯವೇ ಎಂದು ಸೂಲಿಬೆಲೆ ಸೇರಿದಂತೆ ಹಲವರು ಪ್ರಶ್ನಿಸಿದ್ದಾರೆ.
ಭಾನು ಮುಷ್ತಾಕ್ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದು, ಮೂರ್ತಿ ಪೂಜೆಯ ವಿರೋಧಕರಾಗಿದ್ದಾರೆ. ಹೀಗಿರುವಾಗ ತಾಯಿ ಚಾಮುಂಡೇಶ್ವರಿಯ ಉತ್ಸವವನ್ನು ಭಾನು ಮುಷ್ತಾಕ್ ಹೇಗೆ ಉದ್ಘಾಟಿಸುತ್ತಾರೆ ಎಂದು ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.