
ಬೆಂಗಳೂರು (ಅ.3): ಸರ್ಕಾರಿ ಕಾರ್ಯಕ್ರಮಕ್ಕೂ ಖಾಸಗಿ ಕಾರ್ಯಕ್ರಮಕ್ಕೂ ವೈಯಕ್ತಿಕ ಕಾರ್ಯಕ್ರಮಕ್ಕೂ ವ್ಯತ್ಯಾಸವೇ ಗೊತ್ತಿಲ್ಲದಂತೆ ಕಾಂಗ್ರೆಸ್ ಸರ್ಕಾರದ ನಾಯಕರು ವರ್ತನೆ ಮಾಡುತ್ತಿದ್ದಾರೆ. ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾದ ದಸರಾ ಜಂಬೂ ಸವಾರಿ ದಿನದ ಒಂದು ಬೆಳವಣಿಗೆ ಈಗ ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದೆ. ದಸರಾದ ಸರ್ಕಾರಿ ಕಾರ್ಯಕ್ರಮದಲ್ಲಿ ಕುಟುಂಬದವರು ಭಾಗಿಯಾಗಿರುವ ಕಾರಣಕ್ಕೆ ಹೈಕಮಾಂಡ್‌ಗೆ ದೂರು ಹೋಗಿದೆ. ಗುರುವಾರ ಮೈಸೂರಿನಲ್ಲಿ ಸಿಎಂ ಹಾಗೂ ಡಿಸಿಎಂ ತೆರೆದ ಜೀಪ್‌ನಲ್ಲಿ ಪರೇಡ್ ಮಾಡಿದ್ದರು. ಇದು ಸರ್ಕಾರಿ ಕಾರ್ಯಕ್ರಮವಾಗಿತ್ತು. ಈ ವೇಳೆ ಎಲ್ಲರ ಕಣ್ಣು ಗ್ಲಾಸ್ ಧರಿಸಿ ಅವರ ಹಿಂದೆ ನಿಂತಿದ್ದ ಪುಟ್ಟ ಬಾಲಕನ ಮೇಲೆ ಹೋಗಿದೆ.
ಮೈಸೂರಿನ ಅರಮನೆ ಮುಂದೆ ನಂದಿ ಧ್ವಜ ಪೂಜೆ ಬಳಿಕ ತೆರೆದ ಜೀಪಿನಲ್ಲಿ ಸಿಎಂ ಪರೇಡ್ ಮಾಡುವ ಕಾರ್ಯಕ್ರಮವಿತ್ತು. ಸಿಎಂ ಸಿದ್ಧರಾಮಯ್ಯ ಅವರ ಜೊತೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ, ಸಚಿವ ಶಿವರಾಜ್ ತಂಗಡಗಿ ಹಾಗೂ ಶಾಸಕ ತನ್ವೀರ್ ಸೇಠ್ ಕೂಡ ಜೀಪ್‌ನಲ್ಲಿದ್ದರು. ಎಲ್ಲರೂ ಕೂಡ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಗಳು.
ಇವರೆಲ್ಲರ ನಡುವೆ ಒಬ್ಬ ಬಾಲಕ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಮಾಹಿತಿ ಕೇಳಿದ್ದಾರೆ. ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಿಎಂ, ಡಿಸಿಎಂಗೆ ಹಿಂದೆ ನಿಂತಿರುವ ಬಾಲಕನತ್ತ ಎಲ್ಲರ ಕಣ್ಣು ನೆಟ್ಟಿತ್ತು. ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಡಿಸಿಎಂ, ಸರ್ಕಾರ ಸಚಿವರ ಪರೇಡ್ ಸಾಮಾನ್ಯ. ಇದರಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಯಾಕೆ? ಭಾಗಿಯಾಗಿದ್ದವ ಯಾರು? ಎಂದು ಹೈಕಮಾಂಡ್ ಮಾಹಿತಿ ಕೇಳಿದೆ.
ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದವರು ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಲ್ಲದೆ, ಪೊಲೀಸರು ಹಾಗೂ ಜನರಿಂದ ಗೌರವ ರಕ್ಷೆ ಪಡೆದಿದ್ದು ಯಾಕೆ ಎನ್ನುವ ಪ್ರಶ್ನೆ ಎದ್ದಿದೆ.
ಇದರ ನಡುವೆ ಸಿಎಂ,ಡಿಸಿಎಂ ಅವರ ತೆರೆದ ಜೀಪ್‌ನ ಪರೇಡ್‌ನಲ್ಲಿ ಕಾರ್‌ನಲ್ಲಿ ಕಾಣಿಸಿಕೊಂಡ ಬಾಲಕ, ಎಚ್‌ಸಿ ಮಹದೇವಪ್ಪ ಅವರ ಮೊಮ್ಮಗ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಇನ್ನೂ ಖಚಿತವಾಗಿಲ್ಲ.
ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ನಾಯಕರುಗಳು ತಮ್ಮ ಕುಟುಂಬಸ್ಥರಿಗೂ ಸರ್ಕಾರದ ವತಿಯೊಂದ ಗೌರವ ಕೊಡಿಸಿದ್ದು ಇದು ಮೊದಲೇನಲ್ಲ. ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಾಗ ಸರ್ಕಾರದ ವತಿಯಿಂದ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಂದು ಸ್ವತಃ ಸಿದ್ಧರಾಮಯ್ಯ ಅವರ ಮೊಮ್ಮಗ ಧವನ್ ರಾಕೇಶ್, ಸಚಿವ ಜಮೀರ್ ಅಹ್ಮದ್ ಅವರ ಪುತ್ರ ಜೈದ್ ಖಾನ್ ಸೇರಿದಂತೆ ಎಲ್ಲರಿಗೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಹಾಕಲಾಗಿದ್ದ ವೇದಿಕೆಯಲ್ಲಿಯೇ ಅವಕಾಶ ನೀಡಲಾಗಿತ್ತು. ಇದು ಸಾರ್ವಜನಿಕರ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.