ರೇವಣ್ಣ ನಿರ್ಧಾರದ ವಿರುದ್ಧ ತಿರುಗಿಬಿದ್ದ ಜನತೆ

By Web DeskFirst Published Jul 26, 2018, 9:22 AM IST
Highlights

ಕೋಚಿಮುಲ್‌ನಿಂದ 80 ಲಕ್ಷ ಲೀಟರ್ ಹಾಲು ರಕ್ಷಣಾ ಇಲಾಖೆಗೆ ಪೂರೈಕೆಯಾಗುತ್ತಿದೆ. ಇದರಲ್ಲಿ 40 ಲಕ್ಷ ಲೀಟರ್ ಹಾಲು ಪೂರೈಕೆಯನ್ನು ಹಾಸನ ಜಿಲ್ಲೆಗೆ ರೇವಣ್ಣ ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಕೋಲಾರದಲ್ಲಿ ರೇವಣ್ಣ ನಿರ್ಧಾರವನ್ನು ವಿರೋಧಿಸಿ ಜನ ಪ್ರತಿಭಟನೆ ನಡೆಡಸಿದ್ದಾರೆ. 

ಕೋಲಾರ/ಚಿಕ್ಕಬಳ್ಳಾಪುರ: ದೇಶದ ರಕ್ಷಣಾ ಇಲಾಖೆಗೆ ಪೂರೈಕೆ ಆಗುತ್ತಿರುವ ಕೋಚಿಮುಲ್(ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕ ಸಂಘ)ನ ಗುಡ್‌ಲೈಫ್ ಹಾಲಿನಲ್ಲಿ ಅರ್ಧ ಪಾಲು ಪೂರೈಕೆ ವಹಿವಾಟನ್ನು ಹಾಸನಕ್ಕೆ ನೀಡಿರುವುದನ್ನು ವಿರೋಧಿಸಿ ಲೋಕೋ ಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಕೋಲಾರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಕೋಚಿಮುಲ್‌ನಿಂದ 80 ಲಕ್ಷ ಲೀಟರ್ ಹಾಲು ರಕ್ಷಣಾ ಇಲಾಖೆಗೆ ಪೂರೈಕೆಯಾಗುತ್ತಿದೆ. ಇದರಲ್ಲಿ 40 ಲಕ್ಷ ಲೀಟರ್ ಹಾಲು ಪೂರೈಕೆಯನ್ನು ಹಾಸನ ಜಿಲ್ಲೆಗೆ ರೇವಣ್ಣ ವಹಿಸಿದ್ದಾರೆ. ಈ ಆದೇಶವನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ದಲಿತ ಮುಖಂಡ ವಕ್ಕಲೇರಿ ರಾಜಪ್ಪ ಮಾತನಾಡಿ, ಹಾಲಿನ ಬೆಲೆ ಕುಸಿತದಿಂದ ರೈತರು ಕಂಗೆಟ್ಟಿರುವಾಗಲೇ ರೇವಣ್ಣನವರು ಗುಡ್‌ಲೈಫ್ ಮಾರುಕಟ್ಟೆಯ 40 ಲಕ್ಷ ಲೀಟರ್‌ನ ವ್ಯಾಪಾರವನ್ನು ಕಸಿದುಕೊಂಡು ರೈತರ ಮರಣಶಾಸನ ಬರೆಯಲು ಹೊರಟಿದ್ದಾರೆ. ಅಪ್ಪ- ಮಕ್ಕಳ ಪಕ್ಷ ಮತ್ತು ಸರ್ಕಾರಕ್ಕೆ ಈ ಎರಡೂ ಜಿಲ್ಲೆಯ ರೈತರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಶಾಸಕ ಸುಧಾಕರ್ ವಿರೋಧ: ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿದ ಶಾಸಕ ಡಾ.ಕೆ.ಸುಧಾಕರ್, ನಿರಂತರ ಬರದಿಂದ ತತ್ತರಿಸಿರುವ ಅವಿಭಜಿತ ಜಿಲ್ಲೆ ಹುಡುಕಿಕೊಂಡಿದ್ದ ಮಾರುಕಟ್ಟೆಯಲ್ಲಿ ಪಾಲು ಕೇಳುತ್ತಿರುವ ಸಚಿವರ ನಡೆ ಬರಪೀಡಿತ ಜಿಲ್ಲೆಗಳ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಕೋಚಿಮುಲ್ ಸ್ವತಃ ಹುಡುಕಿಕೊಂಡಿದ್ದ ಮಾರುಕಟ್ಟೆಯಾಗಿದ್ದ ರಕ್ಷಣಾ ಇಲಾಖೆಗೆ ಕೋಚಿಮುಲ್‌ನಿಂದ ಸರಬರಾಜು ಮಾಡ ಲಾಗುತ್ತಿತ್ತು. ಆದರೆ ಈಗ ಸಚಿವ ರೇವಣ್ಣ ಅವರ ನಿರ್ಧಾರದಿಂದ ಮೋಸ ಮಾಡಿದಂತಾಗುತ್ತದೆ ಎಂದರು.

click me!