
ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ಸ್ (Content creators) ಗೆ ಖುಷಿ ಸುದ್ದಿಯೊಂದಿದೆ. ರೀಲ್ಸ್ (Reels) ಮಾಡಿ ಇನ್ಸ್ಟಾಗ್ರಾಮ್ ಬಳಕೆದಾರರಿಂದ ಮಾತ್ರವಲ್ಲ ಕೇಂದ್ರ ಸರ್ಕಾರ (Central Govt)ದ ಕಡೆಯಿಂದ್ಲೂ ಭೇಷ್ ಅನ್ನಿಸಿಕೊಳ್ಳುವ ಅವಕಾಶ ಸಿಗ್ತಿದೆ. ಜೊತೆಗೆ ಹಣ ಗೆಲ್ಲುವ ಅವಕಾಶವನ್ನೂ ಕೇಂದ್ರ ಸರ್ಕಾರ ನಿಮಗೆ ನೀಡ್ತಿದೆ. ಇದೇ ಆಗಸ್ಟ್ ಒಂದರೊಳಗೆ ನೀವು ರೀಲ್ಸ್ ಫೋಸ್ಟ್ ಮಾಡ್ಭೇಕು. ಅತ್ಯುತ್ತಮ ರೀಲ್ಸ್ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ 15 ಸಾವಿರ ಗೆಲ್ಬಹುದು. ಸರ್ಕಾರದ ರೀಲ್ಸ್ ರೂಲ್ಸ್ ಏನು? ಯಾಕೆ ಸರ್ಕಾರ ಈ ಸ್ಪರ್ಧೆ ಏರ್ಪಡಿಸಿದೆ? ಅದ್ರಲ್ಲಿ ಏನೆಲ್ಲ ಇರ್ಬೇಕು ಎನ್ನುವ ಮಾಹಿತಿ ಇಲ್ಲಿದೆ.
ಕೇಂದ್ರ ಸರ್ಕಾರ ಪ್ರಾರಂಭಿಸಿದ ಡಿಜಿಟಲ್ ಇಂಡಿಯಾ ಕಾರ್ಯಕ್ರಮ 10 ವರ್ಷಗಳನ್ನು ಪೂರೈಸಿದೆ. ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಸರ್ಕಾರ ಜುಲೈ 1, 2015 ರಂದು ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಈಗ ಡಿಜಿಟಲ್ ಇಂಡಿಯಾ ಹತ್ತು ವರ್ಷವನ್ನು ಯಶಸ್ವಿಯಾಗಿ ಪೂರೈಸಿದೆ. ಈ ಸಂದರ್ಭದಲ್ಲಿ ಸರ್ಕಾರ ದೇಶವಾಸಿಗಳಿಗಾಗಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಿದೆ. ಈ ಸ್ಪರ್ಧೆಯ ಹೆಸರು 'ಡಿಕೇಡ್ ಆಫ್ ಡಿಜಿಟಲ್ ಇಂಡಿಯಾ - ರೀಲ್ ಸ್ಪರ್ಧೆ'. ಈ ಸ್ಪರ್ಧೆ ಜುಲೈ 1 ರಿಂದಲೇ ಪ್ರಾರಂಭ ಆಗಿದೆ. ಆಗಸ್ಟ್ 1 ರವರೆಗೆ ನಡೆಯಲಿದೆ. ಅಂದ್ರೆ ರೀಲ್ಸ್ ಮಾಡಿ ಪೋಸ್ಟ್ ಮಾಡೋಕೆ ನಿಮಗೆ ಇನ್ನೂ ಅವಕಾಶ ಇದೆ. ಇದ್ರಲ್ಲಿ ಯಾರು ಬೇಕಾದ್ರೂ ಪಾಲ್ಗೊಳ್ಳಬಹುದು.
ವಿಜೇತರಿಗೆ ಸಿಗುತ್ತೆ ಹಣ : ಡಿಕೇಡ್ ಆಫ್ ಡಿಜಿಟಲ್ ಇಂಡಿಯಾ - ರೀಲ್ ಸ್ಪರ್ಧೆ ಅಡಿಯಲ್ಲಿ ನೀವು ಮನಸ್ಸಿಗೆ ಕಂಡ ರೀಲ್ಸ್ ಹಾಕೋ ಹಾಕಿಲ್ಲ. ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಸಂಬಂಧಿಸಿದ ಸೃಜನಶೀಲ ರೀಲ್ಗಳನ್ನು ಹಂಚಿಕೊಳ್ಳಬೇಕು. ಡಿಜಿಟಲ್ ಇಂಡಿಯಾ ನಿಮ್ಮ ಜೀವನದ ಮೇಲೆ ಹೇಗೆ ಸಕಾರಾತ್ಮಕ ಪರಿಣಾಮ ಬೀರಿದೆ, ಸರ್ಕಾರಿ ಸೇವೆಗಳಿಗೆ ಆನ್ಲೈನ್ ಪ್ರವೇಶದಿಂದ ಏನೆಲ್ಲ ಲಾಭ ಆಗಿದೆ, ಡಿಜಿಟಲ್ ಶಿಕ್ಷಣ, ಆರೋಗ್ಯ ಸೇವೆ, ಆರ್ಥಿಕ ಸ್ಥಿತಿ ಸೇರಿದಂತೆ ಡಿಜಿಟಲ್ ಇಂಡಿಯಾಕ್ಕೆ ಸಂಬಂಧಿಸಿದ ಯಾವುದೇ ರೀಲ್ಸ್ ನೀವು ಮಾಡ್ಬಹುದು. ಡಿಜಿಟಲ್ ಸೇವೆ, ದೇಶದ ನಾಗರೀಕರನ್ನು ಹೇಗೆ ಸಬಲೀಕರಣಗೊಳಿಸಿದೆ ಎಂಬುದನ್ನು ನೀವು ರೀಲ್ಸ್ ನಲ್ಲಿ ಹೇಳ್ಬಹುದು. ಈ ಸ್ಪರ್ಧೆ ಅಡಿಯಲ್ಲಿ ಕೇಂದ್ರ ಸರ್ಕಾರ ಬಹುಮಾನ ನೀಡ್ತಿದೆ. ಅಗ್ರ 10 ವಿಜೇತರಿಗೆ ತಲಾ 15,000 ರೂಪಾಯಿ ಸಿಗಲಿದೆ. ಮುಂದಿನ 25 ವಿಜೇತರಿಗೆ ತಲಾ 10,000 ರೂಪಾಯಿ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದಲ್ಲದೆ 50 ವಿಜೇತರಿಗೆ ತಲಾ 5,000 ರೂಪಾಯಿ ನೀಡಲಾಗುವುದು.
ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇರುವ ಷರತ್ತು ಏನು? : ಡಿಜಿಟಲ್ ಇಂಡಿಯಾದ ದಶಕದ - ರೀಲ್ ಸ್ಪರ್ಧೆಯಲ್ಲಿ ಭಾಗವಹಿಸಲು, ನೀವು ಕೆಲವು ಷರತ್ತುಗಳನ್ನು ಪಾಲಿಸಬೇಕು. ನಿಮ್ಮ ರೀಲ್ ಕನಿಷ್ಠ 1 ನಿಮಿಷ ಉದ್ದವಿರಬೇಕು. ನೀವು ಮಾಡಿದ ರೀಲ್ಸ್ ನಿಮ್ಮದಾಗಿರಬೇಕು. ಬೇರೆ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಅಥವಾ ಬೇರೆಯವರ ಕಂಟೆಂಟ್ ಗಳನ್ನು ನೀವು ಕದ್ದು ಪೋಸ್ಟ್ ಮಾಡುವಂತಿಲ್ಲ. ನೀವು ನಿಮ್ಮ ರೀಲ್ ಅನ್ನು ಹಿಂದಿ, ಇಂಗ್ಲಿಷ್ ಅಲ್ಲದೆ ಯಾವುದೇ ಸ್ಥಳೀಯ ಭಾಷೆಯಲ್ಲಿ ಮಾಡಬಹುದು. ರೀಲ್ MP4 ಫೈಲ್ನಲ್ಲಿರಬೇಕು. ಈ ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ನೀವು ಸರ್ಕಾರದ ವೆಬ್ಸೈಟ್ https://www.mygov.in/task/decade-digital-india-reel-contest ಗೆ ಭೇಟಿ ನೀಡಬಹುದು. ಅಲ್ಲಿ ನಿಮಗೆ ರೀಲ್ ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಲಭ್ಯವಿದೆ.