
ಗಣಿತದಲ್ಲಿ ಬುದ್ದಿವಂತರಲ್ಲದಿದ್ದರೂ ವ್ಯವಹಾರದಲ್ಲಿ ಲಂಕೇಶರು 'ಭಾರಿ ಚತುರ. ಏಜೆನ್ಸಿಯ ವಿಚಾರದಲ್ಲಿ ಮಹಾ ಕಟ್ಟುನಿಟ್ಟು. ತಮ್ಮ ನೌಕರ ಸಿದ್ದಪ್ಪನಿಗೆ ಖಡಾಖಂಡಿತವಾದ ಸೂಚನೆಯಿತ್ತು. ಪ್ರತಿ ಏಜೆಂಟನೂ ತನ್ನ ಆರ್ಡರಿನ ಪ್ರತಿ ಸಂಚಿಕೆಗೂ ಆರು ವಾರಗಳ ಮುಂಗಡ ಕೊಡಲೇಬೇಕಿತ್ತು. ಇಲ್ಲವಾದರೆ ಏಜೆನ್ಸಿಯಿಲ್ಲ. ಏಜೆನ್ಸಿ ತೆಗೆದುಕೊಳ್ಳುವುದೇ ಹೆಮ್ಮೆಯ ವಿಷಯವಾಗಿತ್ತು ತಾಲ್ಲೂಕು ಮಟ್ಟದ ಏಜೆಂಟರಿಗೆ. ಆರು ಸಂಚಿಕೆಗೆ ಮುಂಗಡ ಕೊಡಲು ಮೇಲೆ ಬೀಳುತ್ತಿದ್ದರು. ಸಿದ್ದಪ್ಪನಿಗೆ ದುಡ್ಡು ಎಣಿಸುವುದು, ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ಬ್ಯಾಂಕಿಗೆ ತುಂಬುವುದೇ ದೊಡ್ಡ ಕೆಲಸವಾಯಿತು. ಅವನು ಸುಸ್ತಾಗಿ ಹೈರಾಣಾಗಿದ್ದ. ಮುಂದೆ ಒಂದೆರೆಡು ತಿಂಗಳಲ್ಲೇ ಸಿದ್ದಪ್ಪನಿಗೆ ಸಹಾಯಕನಾಗಿ ಬಂದವನು ಶೇಖರಪ್ಪ. ಇವನು ಲಂಕೇಶ್ ಅಕ್ಕನ ಮಗ. ಒಳ್ಳೆಯ ಹುಡುಗ. ಇವನಾಗೇ ಬಂದವನೆಂದು ನೆನಪು. ಆದರೆ ಲಂಕೇಶರ ಒಪ್ಪಿಗೆಯಿಲ್ಲದೆ ಇದು ಅಸಾಧ್ಯವಾಗುತ್ತಿತ್ತು. ಬರುತ್ತಿದ್ದ ಸಾವಿರಾರು ರೂಪಾಯಿಗೆ ಕಣ್ಣಿಡುವ ಅವರದೇ ಆದ, ಬೇಕಾದವರಲ್ಲೊಬ್ಬನಾಗಿದ್ದ ಈ ಶೇಖರಪ್ಪ. ಪತ್ರಿಕಾ ಕಚೇರಿಗೆ ಇವನ ಆಗಮನ ಮುಂದಿನ ಇತಿಹಾಸಕ್ಕೆ ಸೂಚನೆಯಾಗಿತ್ತು.
ಅಕ್ಷರ ಪ್ರೇಮಿ ಪಿ.ಲಂಕೇಶ್ ಅಂಕಿ ಪ್ರೇಮಿಯಾಗಿದ್ದು!
ಹೀಗೂ ಇದ್ದರು ಪಿ.ಲಂಕೇಶ್: ಆಗಿನ ಕಾಲದ ಐಷಾರಾಮಿ ಕಾರು ಕೊಂಡಿದ್ದ ಕವಿ
ಕವಿ, ಪತ್ರಕರ್ತ ಪಿ.ಲಂಕೇಶ್‌ರಿಗಿತ್ತು ರೇಸ್ ಹುಚ್ಚು!
ಪತ್ರಕರ್ತ ಲಂಕೇಶ್ ಹಿಂದಿದ್ದ 'ಪಿ' ಅರ್ಥವೇನು?
ಸಹಾಯ ಮಾಡಿದವರ ಮೇಲೆ ದ್ವೇಷ ಸಾಧಿಸಿದ ಪಿ.ಲಂಕೇಶ್
ಲಂಕೇಶರು ಒಂದು ಕ್ಯಾಲುಕ್ಯುಲೇಟರ್ ಕೊಂಡಿದ್ದರು. ಅದರಲ್ಲಿ ಕೂಡುವುದು, ಕಳೆಯುವುದು, ಗುಣಾಕಾರ, 'ಭಾಗಾಕಾರ ಮಾಡುವುದನ್ನು ಕಲಿತಿದ್ದರು. ಅವರ ಪ್ರಕಾರ ಪತ್ರಿಕೆಯೊಂದಕ್ಕೆ ಲಾಭ ಹತ್ತು ಪೈಸೆ. ಎರಡನೇ ವಾರಕ್ಕೆ ಪ್ರಕಟವಾಗಬೇಕಿದ್ದು ಆರು ಸಾವಿರ. ಈ ಲೆಕ್ಕದಲ್ಲಿ ಅವರ ಲಾಭ ವಾರಕ್ಕೆ 600 ರೂಪಾಯಿ. ತಿಂಗಳಿಗೆ 2400 ರೂಪಾಯಿ. ಆಗೆಲ್ಲ ಅವರ ಖರ್ಚು ಬರುತ್ತಿದ್ದದ್ದು ತಿಂಗಳಿಗೆ ಎರಡು ಸಾವಿರ ಮಾತ್ರ. ಸಿದ್ದಪ್ಪ, ಜಾಣಗೆರೆ, ಗುಜ್ಜಾರಪ್ಪ ಮೂವರೇ ಫುಲ್‌ಟೈಂ ಪತ್ರಕರ್ತರು. ತಿಂಗಳ ಸಂಬಳ ಒಂದೂವರೆ ಸಾವಿರದಲ್ಲಿ ಮುಗಿದು ಹೋಗುತ್ತಿತ್ತು. ಇನ್ನುಳಿದ ಎಲ್ಲ ಬರೆಯುವವರೂ ಹವ್ಯಾಸಿಗಳು. ಅಂದರೆ ಪಾರ್ಟ್ ಟೈಂ ಅಥವಾ ಫ್ರೀಲಾನ್ಸ್‌ರ್ಸ್. ನಾನು, ನಚ್ಚಿ, ಎ.ಎನ್. ಪ್ರಸನ್ನ, ರವೀಂದ್ರ ರೇಶ್ಮೆ, ಚಂಪಾ, ತೇಜಸ್ವಿ ಎಲ್ಲರಿಗೂ ಅವರದೇ ವೃತ್ತಿಯಿತ್ತು, ವರಮಾನವೂ ಇತ್ತು. ಲಂಕೇಶ್ ಕುಟುಂಬದ ಖರ್ಚು ನಡೆಯುತ್ತಿದ್ದದ್ದು ಇಂದಿರಮ್ಮನರ ಬಟ್ಟೆ ಅಂಗಡಿಯಿಂದಾಗಿ. ಇದು ಲಂಕೇಶರ ಬಹುದೊಡ್ಡ ಗೆಲುವು. ಯಾವುದೇ ಕುಟುಂಬವೂ ಪತ್ರಿಕೆಯ ಮೇಲೆ ನಿಂತಿರಲಿಲ್ಲ. ನಮ್ಮ ಆನೇಕ ಪತ್ರಿಕೆಗಳು ನಾಶವಾದದ್ದೂ ಇದೇ ಲೆಕ್ಕದಲ್ಲಿ. 3-4 ಕುಟುಂಬಗಳು ಒಂದು ಪತ್ರಿಕೆಯ ಮೇಲೆ ಅವಲಂಬಿತವಾಗಿರುತ್ತಿದ್ದವು.
ಪತ್ರಿಕೆಯ ಎರಡನೆಯ ಸಂಚಿಕೆಗೆ ಅಂತಾ ವಸ್ತುಗಳೇನಿರಲಿಲ್ಲ. ಲಂಕೇಶ್‌ಗೆ ಹೇಳಿದೆ. ಪ್ರತಿ ಸಂಚಿಕೆಗೂ ಮೊದಲು ಮೀಟಿಂಗ್‌ನ ಅವಶ್ಯಕತೆಯಿದೆ. ಯಾರು ಏನು ಬರೆಯುವುದೆಂಬುದು ಎಲ್ಲರಿಗೂ ಗೊತ್ತಿರಬೇಕು. ಆಗಲಿ ಬಿಡಯ್ಯ ಎಂದರು ಲಂಕೇಶ್. ಎರಡನೆಯ ಸಂಚಿಕೆಯೂ ಬಂತು. ಮುದ್ರಣ ಆರು ಸಾವಿರಕ್ಕೇರಿತ್ತು. ಮುಂದೆ ಅದು ಎಂಟಾಗಿ, ಆರು ತಿಂಗಳು ಕಾಣುವ ವೇಳೆಗೆ ಅರವತ್ತು ಸಾವಿರದಷ್ಟಾಗಿತ್ತು. ಲಂಕೇಶರು ಸುಖದ ತುತ್ತ ತುದಿಯಲ್ಲಿದ್ದರು. ಆದರೆ ಮೀಟಿಂಗ್ ನಡೆದದ್ದು ಎರಡು-ಮೂರು ವಾರಗಳು ಮಾತ್ರ. ಎಲ್ಲರೂ ತಮಗೆ ತೋಚಿದ್ದು, ಸರಿಯೆನಿಸಿದ್ದು ಬರೆಯುತ್ತಿದ್ದರು. ವರ್ಷಗಳ ಕಾಲ ಅಲ್ಲಿ ನಡೆದದ್ದು ಇದೇ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.