ಸಂಪುಟ ರಚನೆಗೆ ಕಾಲ ಕೂಡಿಬಂತು: ಝಂಡಾ ಹಾರಿಸಿ ಯಡಿಯೂರಪ್ಪ ದೆಹಲಿಗೆ

By Web DeskFirst Published Aug 11, 2019, 8:57 PM IST
Highlights

ಯಡಿಯೂರಪ್ಪ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಅರ್ಧ ತಿಂಗಳು ಕಳೆದಿದೆ. ಆದರೆ ಈ ವರೆಗೆ ಸಂಪುಟ ರಚನೆ ಆಗಿಲ್ಲ. ಇದೀಗ ಸಂಪುಟ ರಚನೆಗೆ ಕಾಲ ಕೂಡಿಬಂದಿದ್ದು, ಝಂಡಾ ಏರಿಸಿ ದೆಹಲಿಗೆ ತೆರಳಲಿದ್ದಾರೆ. ಇನ್ನು ಈ ಬಗ್ಗೆ ಬೆಳಗಾವಿಯಲ್ಲಿ ಬಿಎಸ್ ವೈ ಮಾಹಿತಿ ಮಾತನಾಡಿದ್ದು, ಏನೆಲ್ಲ ಹೇಳಿದ್ದಾರೆ ಎನ್ನುವುದನ್ನು  ಮುಂದೆ ಓದಿ..

ಬೆಳಗಾವಿ, [ಆ.11]: ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸಂಪುಟ ರಚನೆಗೆ ಘಳಿಗೆ ಕೂಡಿಬಂದಿದ್ದು, ಆಗಸ್ಟ್ 16ರ ಬಳಿಕ ಬಿಜೆಪಿ ಸರ್ಕಾರದ ಸಂಪುಟ ರಚನೆಯಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. 

ಇನ್ನು ಈ ಬಗ್ಗೆ ಇಂದು [ಭಾನುವಾರ] ಬೆಳಗಾವಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಪ್ರವಾಹ ಪರಿಸ್ಥಿತಿ ವೈಮಾನಿಕ ಸಮೀಕ್ಷೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ, ಇದೇ ತಿಂಗಳ 15ನೇ ತಾರೀಖಿನ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. 

ಮೋದಿ ಹಾದಿಯಲ್ಲಿ BSY, ಸಂಪುಟ ರಚನೆಗೆ ಪಂಚಸೂತ್ರ! ಯಾರಿಗೆ ಚಾನ್ಸ್?

ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಮೊದಲು ಪರಿಹಾರ ಹಾಗೂ ಸಂತ್ರಸ್ತರ ಪುನರ್ವಸತಿಗೆ ಆದ್ಯತೆ ನೀಡಬೇಕು‌. ಹಾಗಾಗಿ ಸಂಪುಟ ವಿಸ್ತರಣೆ ತಡವಾಗಿದೆ. ಹೈಕಮಾಂಡ್ ಸೂಚನೆಯಂತೆ ಆಗಸ್ಟ್ 15 ರವರೆಗೆ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಆಗಸ್ಟ್ 16 ರಂದು ನವದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಯಡಿಯೂರಪ್ಪ ಅವರು ಸಿಎಂ ಆಗಿ ಜುಲೈ 26 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ ಈ ವರೆಗೆ ಸಂಪುಟ ವಿಸ್ತರಣೆ ಆಗಿಲ್ಲ.  ಇದೀಗ ಸಂಪುಟ ರಚನೆಗೆ ಕಾಲ ಕೂಡಿಬಂದಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ, ಆಗಸ್ಟ್ 18 ರಂದು ಸಂಪುಟ ರಚನೆಯಾಗುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಪ್ರವಾಹಕ್ಕೆ ಅರ್ಧ ಕರ್ನಾಟಕ ಮುಳುಗಿ ಹೋಗಿದೆ. ಮತ್ತೊಂದೆಡೆ ರಾಜ್ಯ ಸರ್ಕಾರ ಸಚಿವರಿಲ್ಲದೇ ಸಿಎಂ ಯಡಿಯೂರಪ್ಪ ಅವರು ಒಬ್ಬರೇ ಜವಾಬ್ದಾರಿ ಹೊತ್ತು ಆಕಡೆಯಿಂದ ಈಕಡೆ ಸುತ್ತಾಡುವ ಪರಿಸ್ಥಿತಿ ಎದುರಾಗಿದೆ.  ಮತ್ತೊಂದೆಡೆ ಪ್ರತಿಪಕ್ಷಗಳು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿವೆ.

click me!