ಬಸ್ ಇಲ್ಲದೆ ಕಂಗಾಲಾಗಿದ್ದ ಸಾವಿತ್ರಿ ಬಡಿಗೇರ| ಬಸ್ ನಿಲ್ದಾಣಕ್ಕೆ ಬಂದು ಬಾಣಂತಿಯ ಗೋಳಾಟ ನೋಡಲಾಗದೆ 65 ಕಿಮೀ ದೂರ ಲಾಳಸಂಗಿ ಗ್ರಾಮದಲ್ಲಿರುವ ಅವರ ಮನೆಗೆ ಬಾಣಂತಿಯನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದ ಸುಜಾತಾ ಕಳ್ಳಿಮನಿ| ಜಿಪಂ ಅಧ್ಯಕ್ಷೆಯ ಕಾರ್ಯವೈಖರಿ ಕೊಂಡಾಡಿದ ಗ್ರಾಮಸ್ಥರು|
ವಿಜಯಪುರ(ಏ.08): ಸಾರಿಗೆ ನೌಕರರ ಮುಷ್ಕರದಿಂದಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಬಸ್ಸಿಲ್ಲದೆ ಗೋಳಾಡುತ್ತಿದ್ದ ಬಾಣಂತಿಯನ್ನು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರು ತಮ್ಮ ಸ್ವಂತ ಕಾರಿನಲ್ಲಿ ಬಾಣಂತಿಯನ್ನು ಅವರ ಊರಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಇದು ಗ್ರಾಮಸ್ಥರ ಮೆಚ್ಚುಗೆ ಪಾತ್ರವಾಯಿತು.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದ ಸಾವಿತ್ರಿ ಬಡಿಗೇರ ಅವರನ್ನು ಬುಧವಾರ ಬೆಳಗ್ಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅಲ್ಲಿಂದ ಹೇಗೋ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ಅಲ್ಲಿ ಯಾವುದೇ ಬಸ್ ಇಲ್ಲದೆ ಕಂಗಾಲಾಗಿದ್ದಾರೆ. ಸುಮಾರು 65 ಕಿಮೀ ದೂರವಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಳಸಂಗಿ ಹೋಗುವುದು ಹೇಗೆ ಎಂದು ಚಿಂತಿತರಾಗಿದ್ದಾರೆ. ಇದನ್ನು ಕಂಡ ಯಾರೋ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿಗೆ ದೂರವಾಣಿ ಕರೆ ಮಾಡಿದ್ದಾರೆ.
ವಿಜಯಪುರ: ಲಾಕ್‌ಡೌನ್ ಭೀತಿಯ ಮಧ್ಯೆ ಮಹಾರಾಷ್ಟ್ರಕ್ಕೆ ಗುಳೆ ಹೊರಟ ಕಾರ್ಮಿಕರು
ಕರೆಗೆ ಸ್ಪಂದಿಸಿದ ಅವರು ಬಸ್ ನಿಲ್ದಾಣಕ್ಕೆ ಬಂದು ಬಾಣಂತಿಯ ಗೋಳಾಟ ನೋಡಲಾಗದೆ ಅಲ್ಲಿಂದ 65 ಕಿಮೀ ದೂರ ಲಾಳಸಂಗಿ ಗ್ರಾಮದಲ್ಲಿರುವ ಅವರ ಮನೆಗೆ ಬಾಣಂತಿಯನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದಿದ್ದಾರೆ. ಇದನ್ನು ಜನರ ಮೆಚ್ಚುಗೆಗೆ ಪಾತ್ರವಾಯಿತಲ್ಲದೆ, ಗ್ರಾಮಸ್ಥರು ಜಿಪಂ ಅಧ್ಯಕ್ಷೆಯ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ.