'ಬಿಜೆಪಿ ಸರ್ಕಾರದ ನೀತಿಗೆ ಬೇಸತ್ತು ಜೆಡಿಎಸ್ ಸೇರ್ಪಡೆಯಾಗುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಯುವಪೀಳಿಗೆ ಸಮುದಾಯವು ಜಾತ್ಯತೀತ ನಿಲುವು ಹೊಂದಿದ ಜೆಡಿಎಸ್ ಪಕ್ಷದತ್ತ ಮುಖ ಮಾಡುತ್ತಿದೆ ಎಂದು ಮುಖಂಡರೋರ್ವರು ಹೇಳಿದ್ದಾರೆ.
ಬೀರೂರು (ಫೆ.13): ಕೇಂದ್ರ ಸರ್ಕಾರವು ಜನವಿರೋಧಿ ನೀತಿ ಅನುಸರಿಸಿ ನಡೆಸುತ್ತಿರುವ ಕಾರ್ಯವೈಖರಿಗೆ ಬೇಸತ್ತು ಇಂದಿನ ಯುವಪೀಳಿಗೆ ಸಮುದಾಯವು ಜಾತ್ಯತೀತ ನಿಲುವು ಹೊಂದಿದ ಜೆಡಿಎಸ್ ಪಕ್ಷದತ್ತ ಮುಖ ಮಾಡುತ್ತಿರುವುದು ಸಂತಸ ತಂದಿದೆ ಎಂದು ಜೆಡಿಎಸ್ ರಾಜ್ಯ ಯುವ ಜನತಾದಳ ಪ್ರಧಾನ ಕಾರ್ಯದರ್ಶಿ ಪ್ರೇಮ್‌ಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೀರೂರು ಜೆಡಿಎಸ್ ಯುವ ಘಟಕದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ಆಡಳಿತ ನಡೆಸಿದ ನಮ್ಮ ಮಾಜಿ ಪ್ರಧಾನಿ ದೇವೇಗೌಡರ ಕಾಲದಲ್ಲಿ ದೇಶ ಸುಭಿಕ್ಷವಾಗಿತ್ತು. ಇಂದು ಬೆಲೆ ಏರಿಕೆಯಿಂದ ಜನರು ತತ್ತರಿಸಿ, ರೋಸಿಹೋಗಿದ್ದಾರೆ. ಪೆಟ್ರೋಲ್, ಮತ್ತು ಅಡುಗೆ ಗ್ಯಾಸ್ ಬೆಲೆ ಗಗನಕ್ಕೆ ಮುಟ್ಟುತಿದ್ದರೂ ಯಾರು ಕ್ಯಾರೆ ಎನ್ನುತ್ತಿಲ್ಲ. ಹೀಗಾದರೆ, ಮಧ್ಯಮ ವರ್ಗದವರ ಪಾಡೇನು? ಪ್ರಧಾನಿ ಮೋದಿ ಅವರಿಗೆ ಇದು ತಿಳಿಯುತ್ತಿಲ್ಲವೇ ಎಂದು ಪ್ರಶ್ನಿಸಿದರು.
32 ಕಡೆ ಜೆಡಿಎಸ್ ಅಧಿಕಾರಕ್ಕೆ : ಉತ್ತಮ ಆಡಳಿತಕ್ಕೆ ಸಲಹೆ .
ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಭದ್ರವಾಗಿದೆ. ಈಗಾಗಲೇ ನಮ್ಮ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಹಾಗೂ ಮಾಜಿ ಶಾಸಕರಾದ ವೈಎಸ್‌ವಿ ದತ್ತಣ್ಣ ಅವರು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಯುವಜನ ಸಮೂಹ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬಡವರಿಗಾಗಿ ನೀಡಿದ ಯೋಜನೆ ನೆನೆದು ಪಕ್ಷದತ್ತ ತಮ್ಮ ಚಿತ್ತಹರಿಸಿದ್ದಾರೆ ಎಂದರು.
ತಾಲೂಕಿನಲ್ಲಿ ಗ್ರಾಮೀಣ ಭಾಗದಲ್ಲಿ ತಾವು ಸಂಚಾರ ನಡೆಸಿ ಬೂತ್ ಮಟ್ಟದಿಂದ ಎಲ್ಲರನ್ನು ಒಗ್ಗೂಡಿಸಲಾಗುತ್ತಿದೆ. ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿ ಮುಂಬರುವ 2023ಕ್ಕೆ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಬೇರೂರಿ ಅಧಿಕಾರಕ್ಕೆ ಬರಲಿದೆ. ಜನರ ನಿರೀಕ್ಷೆಯಂತೆ ಸರಳ ಸಜ್ಜನ ರಾಜಕಾರಣಿ ದತ್ತಣ್ಣ ಮತ್ತೊಮ್ಮೆ ಶಾಸಕರಾಗುವುದು ಖಚಿತ ಎಂದರು.
ಬೀರೂರು ನಗರ ಘಟಕ ಅಧ್ಯಕ್ಷ ಬಾವಿಮನೆ ಮಧು ಮಾತನಾಡಿ, ಪ್ರೇಮ್‌ಕುಮಾರ್ ಅವರನ್ನು ಪಕ್ಷದ ಮುಖಂಡರು ಯುವ ಘಟಕ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದೆ. ಕಡೂರು ಕ್ಷೇತ್ರದಲ್ಲಿ ಮತ್ತೆ ಜೆಡಿಎಸ್ ಬಾವುಟ ಹಾರಾಡಿಸಲು ಹೋರಾಟ ಮಾಡೋಣ ಎಂದರು.