ಸಿಗ್ನಲಿಂಗ್ ಸಮಸ್ಯೆಯಿಂದ ‘ನಮ್ಮ ಮೆಟ್ರೋ’ದ ನೇರಳೆ ಮಾರ್ಗದಲ್ಲಿ ಮಂಗಳವಾರ ಬೆಳಗ್ಗೆ 5ರಿಂದ ಮಧ್ಯಾಹ್ನ 12.10ರವರೆಗೆ ರೈಲು ಸಂಚಾರ ವಿಳಂಬವಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು.
ಬೆಂಗಳೂರು (ಜು.05): ಸಿಗ್ನಲಿಂಗ್ ಸಮಸ್ಯೆಯಿಂದ ‘ನಮ್ಮ ಮೆಟ್ರೋ’ದ ನೇರಳೆ ಮಾರ್ಗದಲ್ಲಿ ಮಂಗಳವಾರ ಬೆಳಗ್ಗೆ 5ರಿಂದ ಮಧ್ಯಾಹ್ನ 12.10ರವರೆಗೆ ರೈಲು ಸಂಚಾರ ವಿಳಂಬವಾಗಿ ಸಾವಿರಾರು ಪ್ರಯಾಣಿಕರು ಪರದಾಡಿದರು. ತಮ್ಮ ನಿತ್ಯದ ಕೆಲಸ, ಕಾರ್ಯಗಳಿಗೆ ಮೆಟ್ರೋ ರೈಲು ಅವಲಂಬಿಸಿ ಬಂದಿದ್ದ ಪ್ರಯಾಣಿಕರು, ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಹೋಗಲು ಆಗದೇ ಕಿರಿಕಿರಿಗೆ ಒಳಗಾದರು. ಬೆಳಗ್ಗೆಯ ಪೀಕ್ ಅವರ್‌ನಲ್ಲಿಯೇ ಮೆಟ್ರೋ ಕೈಕೊಟ್ಟಿತು. ನಿಧಾನವಾಗಿ ರೈಲುಗಳು ಸಂಚರಿಸುತ್ತಿದ್ದರಿಂದ ರೈಲುಗಳೆಲ್ಲ ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ನಗರದ ಮೆಜೆಸ್ಟಿಕ್, ಬೈಯಪ್ಪನಹಳ್ಳಿ ಸೇರಿ ನೇರಳೆ ಮಾರ್ಗದ ಬಹುತೇಕ ಎಲ್ಲ ನಿಲ್ದಾಣಗಳು ಜನರಿಂದ ತುಂಬಿಹೋಗಿತ್ತು.
ಪ್ರತಿ ನಿಲ್ದಾಣದಲ್ಲೂ ರೈಲುಗಳು 5 ನಿಮಿಷಕ್ಕೂ ಹೆಚ್ಚಿನ ಕಾಲ ನಿಲುಗಡೆ ಆಗುತ್ತಿದ್ದವು. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಹಾಗೂ ಅತ್ತ ಬೈಯಪ್ಪನಹಳ್ಳಿಯಿಂದ ಹೊರಟ ಮೆಟ್ರೋ ಇಂದಿರಾನಗರದಲ್ಲಿಯೇ ಕೊನೆಯದಾಗಿ ನಿಲುಗಡೆ ಆಗುತ್ತಿತ್ತು. ಇದರಿಂದ ಸ್ವಾಮಿ ವಿವೇಕಾನಂದ ನಿಲ್ದಾಣ (ಹಳೇ ಮದ್ರಾಸ್ ರಸ್ತೆ), ಹಾಗೂ ಬೈಯಪ್ಪನಹಳ್ಳಿ ನಿಲ್ದಾಣಕ್ಕೆ ತೆರಳಬೇಕಾದವರು ಬಿಎಂಟಿಸಿ, ಖಾಸಗಿ ವಾಹನ ಅವಲಂಬಿಸಬೇಕಾದ ಅನಿವಾರ್ಯತೆ ಉಂಟಾಯಿತು.
ಪ್ರತಿಪಕ್ಷ ನಾಯಕ, ಅಧ್ಯಕ್ಷ ಬಿಜೆಪಿ ಕಸರತ್ತು: ಅಭಿಪ್ರಾಯ ಪಡೆದು ವೀಕ್ಷಕರು ದಿಲ್ಲಿಗೆ ವಾಪಸ್
ಸಿಗ್ನಲಿಂಗ್ ಸಮಸ್ಯೆ: ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಆರ್‌ಸಿಎಲ್ ಎಂಡಿ ಅಂಜುಮ್ ಪರ್ವೇಜ್, ಮಾರ್ಗದಲ್ಲಿ ಸಿಗ್ನಲಿಂಗ್‌ಗೆ ವಿದ್ಯುತ್ ಪೂರೈಕೆ ಮಾಡುವ ಯುಪಿಎಸ್ ಬದಲಾವಣೆ ಮಾಡುವುದು ವಿಳಂಬವಾದ ಕಾರಣ ಸಿಗ್ನಲಿಂಗ್ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಸಮಸ್ಯೆ ಆಗಿದೆ ಎಂದು ತಿಳಿಸಿದರು. ಮೆಟ್ರೋ ಸಿಪಿಆರ್‌ಒ ಯಶವಂತ್ ಚೌಹಾಣ್ ಅವರು, ಬೆಳಗ್ಗೆ 5.40ರ ಸುಮಾರಿಗೆ ಸಮಸ್ಯೆ ಕಂಡುಬಂತು. ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ಮೆಜೆಸ್ಟಿಕ್ ಹಾಗೂ ಎಂಜಿ ರೋಡ್ ಮೆಟ್ರೋ ನಿಲ್ದಾಣದಿಂದ 7-8 ನಿಮಿಷಕ್ಕೊಮ್ಮೆ ಲೂಪ್ ರೈಲುಗಳನ್ನು ಕಾರ್ಯಚರಣೆ ಮಾಡಿದ್ದೇವೆ.
ಹೆಚ್ಚಿನ ಜನ ಸಂಚರಿಸುವ ವೇಳೆಯಾದ ಕಾರಣ ಬೆಳಗ್ಗೆಯೇ ದುರಸ್ತಿ ಕಾರ್ಯಕ್ಕೆ ಮುಂದಾಗಲಿಲ್ಲ. ಮ್ಯಾನ್ಯುವಲ್ ಆಗಿ ರೈಲುಗಳನ್ನು ಸಂಚರಿಸಲಾಗಿದೆ ಎಂದು ಹೇಳಿದರು. ಮೆಟ್ರೋ ಕಾರ್ಯಾಚರಣೆ, ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್.ಶಂಕರ್, ‘ಹೊಸ ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ 2.1 ಕಿ.ಮೀ. ಮಾರ್ಗದಲ್ಲಿ ಸಿಗ್ನಲಿಂಗ್ ವ್ಯವಸ್ಥೆಗೆ ವಿದ್ಯುತ್ ಪೂರೈಕೆ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ ನಿಗದಿತ ಅವಧಿಯಲ್ಲಿ ಈ ಕೆಲಸ ಪೂರ್ಣಗೊಳ್ಳದ ಕಾರಣ ಯುಪಿಎಸ್ ಬದಲಾವಣೆ ಸಾಧ್ಯವಾಗಲಿಲ್ಲ. ಹೀಗಾಗಿ ಸಮಸ್ಯೆ ಉಂಟಾಯಿತು’ ಎಂದು ತಿಳಿಸಿದರು.
ಗುತ್ತಿಗೆದಾರರ ನಿರ್ಲಕ್ಷ್ಯ?: ಸಿಗ್ನಲಿಂಗ್ ವ್ಯವಸ್ಥೆ ನಿರ್ವಹಣೆಗೆ ಅಲ್ಸಟಾನ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಇವರು ಇಂದಿರಾನಗರ ನಿಲ್ದಾಣದಿಂದ ಟ್ರ್ಯಾಕ್ ಇಂಟರ್‌ಚೇಂಜ್ ಸಿಗ್ನಲ್ ಕೆಲಸ ಮಾಡುವಾಗ ಸಮರ್ಪಕವಾಗಿ ನಿರ್ವಹಿಸಿಲ್ಲ. ಇದರಿಂದಾಗಿ ಸಮಸ್ಯೆ ಉಂಟಾಗಿದೆ. ಆದರೆ, ಬಿಎಂಆರ್‌ಸಿಲ್ ಅಧಿಕಾರಿ ವಲಯವು ಈ ವಿಚಾರ ಬಹಿರಂಗಪಡಿಸದೆ ಗುತ್ತಿಗೆದಾರರನ್ನು ರಕ್ಷಿಸುವ ಕೆಲಸ ಮಾಡಿದೆ ಎಂದು ಬಿಎಂಆರ್‌ಸಿಎಲ್ ಎಂಪ್ಲಾಯಿಸ್ ಯೂನಿಯನ್ ಆರೋಪಿಸಿದೆ. ಜೊತೆಗೆ ಮೆಟ್ರೋ ವಿಳಂಬದಿಂದ ಬಿಎಂಆರ್‌ಸಿಎಲ್‌ಗೆ ಉಂಟಾಗಿರುವ ನಷ್ಟವನ್ನು ಸಂಸ್ಥೆಯಿಂದ ವಸೂಲಿ ಮಾಡಬೇಕು ಎಂದು ಯೂನಿಯನ್ ಅಧ್ಯಕ್ಷ ಸೂರ್ಯ ನಾರಾಯಣ ಒತ್ತಾಯಿಸಿದ್ದಾರೆ.
ಗ್ಯಾರಂಟಿಗೆ ಬಿಜೆಪಿ ಹೋರಾಟ: ಬಿಎಸ್‌ವೈ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ
ಪ್ರಯಾಣಿಕರ ಜೇಬಿಗೆ ಕತ್ತರಿ: ಮೆಟ್ರೋದಲ್ಲಿ ಒಮ್ಮೆ ಟಿಕೆಟ್ ತೆಗೆದುಕೊಂಡು ಪ್ಲಾಟ್‌ಫಾಮ್‌ರ್ ಏರಿಯಾಕ್ಕೆ ಹೋದರೆ ರೈಲಿನಲ್ಲಿ ಪ್ರಯಾಣಿಸಿ ನಿಗದಿತ ನಿಲ್ದಾಣದಲ್ಲಿ ಇಳಿಯಬೇಕು. ಒಂದು ವೇಳೆ ಪ್ರಯಾಣಿಸದೇ ಅದೇ ನಿಲ್ದಾಣದಿಂದಲೇ ಹೊರಬರಬೇಕಾದರೆ ಪ್ರಯಾಣಿಕರೆ .9-10 ಕೊಟ್ಟು ಹೊರ ಬರಬೇಕು. ಈ ಸಮಸ್ಯೆಯನ್ನು ಹಲವು ಪ್ರಯಾಣಿಕರು ಅನುಭವಿಸಿದರು. ಅಲ್ಲದೆ, ಇಂದಿರಾನಗರದಲ್ಲಿ ರೈಲು ನಿಲ್ಲುತ್ತಿದ್ದುದರಿಂದ ಮುಂದೆ ಹೋಗಲಾರದವರಿಗೆ ಅದೇ ನಿಲ್ದಾಣದಲ್ಲಿ ಉಳಿದ ಹಣ ನೀಡಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.