ಟೋಲ್‌ ತಪ್ಪಿಸಲು ಹೋಗಿ ವಾಹನ ಅಪಘಾತ

Kannadaprabha News   | Asianet News
Published : Feb 07, 2020, 08:08 AM IST
ಟೋಲ್‌ ತಪ್ಪಿಸಲು ಹೋಗಿ ವಾಹನ ಅಪಘಾತ

ಸಾರಾಂಶ

ಟೋಲ್‌ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಹೋಗಿ ಬೇಜವ್ದಾರಿಯಿಂದ ವಾಹನವನ್ನು ಡಿವೈಡರ್‌ನಲ್ಲಿ ತಿರುಗಿಸಿದ ಪರಿಣಾಮ ವಾಹನ ಮಗುಚಿ ಬಿದ್ದ ಘಟನೆ ಬುಧವಾರ ಸುರತ್ಕಲ್‌ ಎನ್‌ಐಟಿಕೆ ಟೋಲ್‌ಬೂತ್‌ ಬಳಿಯ ರೆಡ್‌ರಾಕ್‌ ಹೊಟೇಲ್‌ ರಸ್ತೆಯ ಎದುರಿನ ಪಡ್ರೆ ದ್ವಾರದ ಬಳಿ ನಡೆದಿದೆ.

ಮಂಗಳೂರು(ಫೆ.07): ಟೋಲ್‌ ಶುಲ್ಕ ಪಾವತಿಸುವುದನ್ನು ತಪ್ಪಿಸಲು ಹೋಗಿ ಬೇಜವ್ದಾರಿಯಿಂದ ವಾಹನವನ್ನು ಡಿವೈಡರ್‌ನಲ್ಲಿ ತಿರುಗಿಸಿದ ಪರಿಣಾಮ ವಾಹನ ಮಗುಚಿ ಬಿದ್ದ ಘಟನೆ ಬುಧವಾರ ಸುರತ್ಕಲ್‌ ಎನ್‌ಐಟಿಕೆ ಟೋಲ್‌ಬೂತ್‌ ಬಳಿಯ ರೆಡ್‌ರಾಕ್‌ ಹೊಟೇಲ್‌ ರಸ್ತೆಯ ಎದುರಿನ ಪಡ್ರೆ ದ್ವಾರದ ಬಳಿ ನಡೆದಿದೆ.

ರೆಡ್‌ರಾಕ್‌ ಹೊಟೇಲ್‌ ರಸ್ತೆ ಎದುರಿನ ಡಿವೈಡರ್‌ ದಾಟಿ ಬಂದ ಬೊಲೆರೋ ಪಿಕ್‌ಅಪ್‌ ವಾಹನ ಪಡ್ರೆ ದ್ವಾರದ ಬಳಿ ಯಾವುದೇ ಸೂಚನೆ ಕೊಡದೆ ಏಕಾಏಕಿ ದ್ವಾರದ ಒಳಗೆ ತಿರುಗಿಸುವ ಯತ್ನ ಮಾಡಿದೆ. ಆಗ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬರುತ್ತಿದ್ದ ಮಂಗಳೂರು-ಕಾರ್ಕಳ ಎಕ್ಸ್‌ಪ್ರೆಸ್‌ ಬಸ್ಸೊಂದು ಪಿಕ್‌ಅಪ್‌ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಪಿಕ್‌ಅಪ್‌ ವಾಹನ ನಜ್ಜುಗುಜ್ಜಾಗಿದೆ. ಚಾಲಕ ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಅವಘಡಕ್ಕೆ ಮೂಲ ಕಾರಣವಾಗಿದ್ದು ರೆಡ್‌ರಾಕ್‌ ರಸ್ತೆ ಎದುರಿನ ಡಿವೈಡರ್‌ ಎಂದು ಆನಂತರ ಬೆಳಕಿಗೆ ಬಂದಿದೆ. ಟೋಲ್‌ ಶುಲ್ಕ ತಪ್ಪಿಸಲು ಇತ್ತೀಚೆಗೆ ಪಡ್ರೆ ಮಾರ್ಗವಾಗಿ ವಾಹನವನ್ನು ಕೆಲವರು ಕೊಂಡೊಯ್ಯುತ್ತಾರೆ. ತೀರಾ ಇಕ್ಕಟ್ಟಾಗಿರುವ ಈ ರಸ್ತೆಯಲ್ಲಿ ವಾಹನಗಳು ಹೈವೆಯಿಂದ ಏಕಾಏಕಿ ಒಳಗಿನ ರಸ್ತೆಗೆ ತಿರುಗುವುದರಿಂದ ಅಪಘಾತಗಳು ನಿತ್ಯ ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮಂಗಳೂರು ಗೋಲಿಬಾರ್: ವಿಡಿಯೋ ಸಾಕ್ಷಿ ನೀಡಲು ಮಾಧ್ಯಮಗಳಿಗೆ ಸೂಚನೆ

ರೆಡ್‌ರಾಕ್‌ ಹೊಟೇಲ್‌ ರಸ್ತೆಯ ಎದುರಿನ ಡಿವೈಡರ್‌ನಿಂದಾಗಿ ಹಲವು ಅಪಘಾತಗಳು ನಡೆದಿದ್ದು ಈಗಾಗಲೇ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉಳಿದಂತೆ ಸಣ್ಣಪುಟ್ಟಅಪಘಾತಗಳಿಗೆ ಲೆಕ್ಕವೇ ಇಲ್ಲದಂತೆ ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭದಲ್ಲಿ ಡಿವೈಡರ್‌ ಮುಚ್ಚಿತ್ತು. ಆದರೆ ಹೊಟೇಲ್‌ವೊಂದರ ಉದ್ಯಮಿಯ ವೈಯಕ್ತಿಕ ಹಿತಾಸಕ್ತಿಯಿಂದಾಗಿ ಡಿವೈಡರ್‌ನ್ನು ತೆಗೆಯಲಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೀಗ ಅಪಘಾತ ನಡೆದ ಬಳಿಕ ಸ್ಥಳೀಯರ ಆಕ್ರೋಶಕ್ಕೆ ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಇಲಾಖೆ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿ ತತ್‌ಕ್ಷಣ ಡಿವೈಡರ್‌ನ್ನು ಮುಚ್ಚುವಂತೆ ಆದೇಶ ನೀಡಬೇಕೆಂದು ಮನವಿ ಪತ್ರ ಸಲ್ಲಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಏನಾದರೂ ಅಪಘಾತಗಳು ನಡೆದರೆ ಅದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯೇ ಹೊಣೆ ಎಂದು ಹೆದ್ದಾರಿ ಇಲಾಖೆ ಅಧಿಕಾರಿಗಳು ಮನವಿಯಲ್ಲಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಲಾಭದಲ್ಲಿದ್ದರೂ ಮಸ್ಕಾಂನಿಂದ ವಿದ್ಯುತ್‌ ದರ ಏರಿಕೆ!

ಈ ಹಿಂದೆ ರಾಷ್ಟ್ರೀಯ ಹೆದ್ದಾರಿಯ ಪಡುಪಣಂಬೂರು ಎಂಬಲ್ಲಿಯೂ ಡಿವೈಡರ್‌ ತೆರೆದ ಪರಿಣಾಮ ಹಲವು ಅಪಘಾತಗಳು ನಡೆದು ಪ್ರಾಣಹಾನಿ ಉಂಟಾಗಿತ್ತು. ಕೊನೆಗೆ ಸ್ಥಳೀಯರ ಆಕ್ರೋಶಕ್ಕೆ ಮಣಿದು ಡಿವೈಡರ್‌ನ್ನು ಮುಚ್ಚಲಾಗಿತ್ತು.

PREV
click me!

Recommended Stories

ಬೆಂಗಳೂರು ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ರಸ್ತೆಯಲ್ಲಿ ಅಗ್ನಿ ಅವಘಡ: ನಡುರಸ್ತೆಯಲ್ಲೇ ಭಸ್ಮವಾದ ಕಾರು
ಬೆಂಗಳೂರು ಹೋಟೆಲ್‌ನಲ್ಲಿ ಭರ್ಜರಿ ಪಾರ್ಟಿ, ಪೊಲೀಸ್ ಬಂದಾಕ್ಷಣ ಬಾಲ್ಕನಿಯಿಂದ ಜಿಗಿದ ಯುವತಿ!