ಬೆಂಗಳೂರಿನಲ್ಲಿ ನಡೆದ ಗಲಾಟೆಯ ಹೊಣೆ ಹೊತ್ತು ಗೃಹ ಸಚಿವ ಎಸ್ ಆರ್ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಲಾಗಿದೆ.
ಬೆಂಗಳೂರು(ಆ.14): ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿಯಲ್ಲಿ ಗಲಭೆ ಪ್ರಕರಣಕ್ಕೆ ರಾಜ್ಯ ಸರ್ಕಾರದ ವೈಫ್ಯಲವೇ ಕಾರಣವಾಗಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದ ಎದುರು ಪ್ರತಿಭಟನೆ ನಡೆಸಿದರು. ‘ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಗಲಭೆ ತಡೆಯುವಲ್ಲಿ ವೈಫಲ್ಯ ಅನುಭವಿಸಿದೆ.
ಗಲಭೆಗೆ ಪ್ರಚೋದನೆ ನೀಡಿದವರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಯಾವುದೋ ಒಂದು ಸಮುದಾಯ ದೂಷಿಸುವ ಬದಲು ಕೋಮು ಸೌಹಾರ್ದತೆ ಕಾಪಾಡಬೇಕು. ಹಿಂಸಾಚಾರದಲ್ಲಿ ಪಾಲ್ಗೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೆಂಗಳೂರು ಗಲಭೆ ಮ್ಯಾಜಿಸ್ಟ್ರೇಟ್ ತನಿಖೆಗೆ, ಗಲಭೆಕೋರರಿಂದಲೇ ನಷ್ಟ ವಸೂಲಿ..
‘ಬಿಜೆಪಿಗರು ವಿರೋಧ ಪಕ್ಷವನ್ನು ಟೀಕಿಸುವ ಮೂಲಕ ತನ್ನ ವೈಫಲ್ಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ದಾಳಿ ನಡೆಯುವ ಮಾಹಿತಿ ಬಿಜೆಪಿ ನಾಯಕರಿಗೆ ಇರಲಿಲ್ಲವೇ?’ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ‘ಒಂದು ಧರ್ಮವನ್ನು ಹೀಯಾಳಿಸಿ, ಆ ಧರ್ಮದ ಗುರುವಿನ ಬಗ್ಗೆ ಅವಹೇಳನ ಮಾಡಿದ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ವಿನಾಕಾರಣ ಹಾಗೂ ಆಧಾರ ರಹಿತವಾಗಿ ಟೀಕಿಸುವುದನ್ನು ಕೈಬಿಟ್ಟು ತಪ್ಪಿತಸ್ಥರನ್ನು ಹಿಡಿದು ಶಿಕ್ಷೆಗೆ ಗುರಿಪಸಿಬೇಕು’ ಎಂದು ಒತ್ತಾಯಿಸಿದರು.