'ಕಾಲು ಹಿಡಿದು ಬೇಡಿಕೊಂಡರೂ ಅಪ್ಪನನ್ನು ನೋಡಲು ಬಿಡಲಿಲ್ಲ'

By Kannadaprabha NewsFirst Published Apr 30, 2021, 9:50 AM IST
Highlights

ಹುಲಿಯಂತೆ ಇದ್ದ ನಮ್ಮಪ್ಪ ಕೊರಗುತ್ತಲೇ ಜೀವಬಿಟ್ಟರು| ಕೊರೋನಾಗೆ ಬಲಿಯಾದ ತಂದೆಯನ್ನು ನೆನೆಯುತ್ತಾ ಕಣ್ಣೀರು ಹಾಕಿದ ಪುತ್ರಿ| ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯುವತಿ| 

ಬೆಂಗಳೂರು(ಏ.30): 'ಹುಲಿಯಂತೆ ಇದ್ದ ನಮ್ಮಪ್ಪ, ಆಸ್ಪತ್ರೆಯಲ್ಲಿ ಅಮ್ಮು.. ಅಮ್ಮು... ಅಂತ ಕೂಗುತ್ತಲೇ ಜೀವ ಬಿಟ್ಟರು. ಆಸ್ಪತ್ರೆಯಲ್ಲಿ ನಾಲ್ಕು ದಿನ ಇದ್ದರೂ ನಮ್ಮಪ್ಪನನ್ನು ನೋಡುವುದಕ್ಕೆ ಆಸ್ಪತ್ರೆಯ ಸಿಬ್ಬಂದಿ ಬಿಡಲಿಲ್ಲ. ಅವರಿಗೆ ಇಂಜೆಕ್ಷನ್‌ ಕೊಡುವುದಕ್ಕೆ ಯಾವೊಬ್ಬ ವೈದ್ಯರು ಗತಿ ಇರಲಿಲ್ಲ’ ಎಂದು ಕೊರೋನಾಗೆ ಬಲಿಯಾದ ತಂದೆಯನ್ನು ನೆನೆಯುತ್ತಾ ಪುತ್ರಿ ಕಣ್ಣೀರು ಹಾಕಿದರು.

ಮೃತ ಸೋಂಕಿನನ್ನು ನಾಲ್ಕು ದಿನಗಳ ಹಿಂದೆ ನಗರದ ಸಪ್ತಗಿರಿ ಆಸ್ಪತ್ರಗೆ ದಾಖಲಿಸಲಾಗಿತ್ತು. ಗುಣಮುಖರಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದರ ಹೊರತಾಗಿಯೂ ಗುರುವಾರ ಸೋಂಕಿತರು ಮೃತಪಟ್ಟಿದ್ದರು. ಕಣ್ಣ ಮುಂದೆಯೇ ತಂದೆಯನ್ನು ಕಳೆದುಕೊಂಡ ಪುತ್ರಿ ಇಡೀ ದಿನಾ ದುಃಖಿಸುತ್ತಾ, ಅಂತಿಮ ಕ್ಷಣದಲ್ಲಿ ತಂದೆಯ ಬಾಯಿಗೆ ನೀರು ಬಿಡಲು ಆಗಲಿಲ್ಲ ಎಂದು ಎದೆಬಡಿದುಕೊಂಡು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

'ಆಸ್ಪತ್ರೆಗೆ ಹೋದರೆ ಸಾಯಿಸ್ತಾರೆ, ದಯವಿಟ್ಟು ಮನೆಯಲ್ಲೇ ಇರಿ'

ತಂದೆಯೊಂದಿಗೆ ನಾಲ್ಕು ದಿನಗಳಿಂದಲೂ ಆಸ್ಪತ್ರೆಯಲ್ಲೇ ಇದ್ದೆ. ನನ್ನಪ್ಪನ ಸಾವಿಗೆ ಆಸ್ಪತ್ರೆಯೇ ಕಾರಣ. ಆಸ್ಪತ್ರೆಗೆ ದಾಖಲಾಗುವ ಮುನ್ನ ಪಲ್ಸ್‌ ರೇಟ್‌ 84 (ನಾಡಿ ಮಿಡಿತ) ಇತ್ತು. ಆಸ್ಪತ್ರೆಗೆ ದಾಖಲಾದ ಒಂದೇ ದಿನಕ್ಕೆ 30ಕ್ಕೆ ಇಳಿಕೆಯಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 10.30ರವರೆಗೆ ಕಾದು ನಿಂತರೂ ಯಾವೊಬ್ಬ ವೈದ್ಯನೂ ಇಂಜೆಕ್ಷನ್‌ ಕೊಡಲಿಲ್ಲ. ಹಣ ಕೊಟ್ಟವರಿಗೆ ಮಾತ್ರ ತಕ್ಷಣವೇ ಚಿಕಿತ್ಸೆ ನೀಡುತ್ತಾರೆ. ಹಣ ನೀಡದವರಿಗೆ ಚಿಕಿತ್ಸೆ ನೀಡುವುದಿರಲಿ, ಅಳಲು ಕೇಳಲೂ ಸಹ ಯಾರಿಲ್ಲ. ನಾವು ಎಲ್ಲಿಂದ ಲಕ್ಷ ಲಕ್ಷ ಹಣ ತರಬೇಕು? ಎಂದು ಆಕೆ ಕಣ್ಣೀರು ಹಾಕುತ್ತಲೇ ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಕಡೆಯಿಂದ ಸಪ್ತಗಿರಿ ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯಿತು. ಆದರೆ, ಯಾವುದೋ ಮೂಲೆಯಲ್ಲಿ ಅಪ್ಪನನ್ನು ಬಿಸಾಡಿದ್ದರು. ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ನಾನು ಅಪ್ಪನ ಜೊತೆ ಇದ್ದೇನೆ. ಅಮ್ಮು...ಅಮ್ಮು.. ಎಂದು ಅಪ್ಪ ನನ್ನ ಕರೆಯುತ್ತಿದ್ದರು. ನೀರು ಕುಡಿಸುವುದಕ್ಕಾಗಿ ಐಸಿಯು ಒಳಗೆ ಬಿಡುವಂತೆ ಆಸ್ಪತ್ರೆಯ ಸಿಬ್ಬಂದಿಯ ಕಾಲು ಹಿಡಿದ ಅಂಗಲಾಚಿ ಬೇಡಿದೆ. ಆದರೆ, ಒಳಗೆ ಬಿಡಲಿಲ್ಲ. ನಿಮ್ಮಪ್ಪ ಚೆನ್ನಾಗಿದ್ದು, ಗುಣಮುಖರಾಗುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರೇ ಹೇಳುತ್ತಿದ್ದರು. ಆದಾದ ಮರುದಿನವೇ ಅಪ್ಪ ಸಾವನ್ನಪ್ಪಿದ್ದಾರೆ. ಇಷ್ಟು ದಿನ ಯಾವ ಚಿಕಿತ್ಸೆ ನೀಡಿದರು? ಎಂದು ಮಗಳು ನೋವಿನಿಂದ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

click me!