2023 ವಿಧಾನಸಭಾ ಚುನಾವಣೆ : ಹಳೇ ಮೈಸೂರಿಗೆ ಯೋಗಿ ಆದಿತ್ಯನಾಥ್‌

By Kannadaprabha News  |  First Published Oct 14, 2022, 5:10 AM IST

ಉತ್ತರ ಪ್ರದೇಶದಲ್ಲಿ ವರ್ಚಸ್ವಿ ನಾಯಕರಾಗಿ ಬೆಳವಣಿಗೆ ಸಾಧಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ ಅವರ ಪ್ರಭಾವಳಿಯನ್ನು ಹಳೇ ಮೈಸೂರು ವಿಭಾಗದಲ್ಲಿ ಹರಡುವುದರೊಂದಿಗೆ ಬಿಜೆಪಿ ಬಲವರ್ಧನೆಗೊಳಿಸುವ ತಂತ್ರಗಾರಿಕೆಗೆ ಕಮಲಪಡೆ ನಾಯಕರು ಮುಂದಾಗಿದ್ದಾರೆ.


  ಮಂಡ್ಯ (ಅ.14) :ಉತ್ತರ ಪ್ರದೇಶದಲ್ಲಿ ವರ್ಚಸ್ವಿ ನಾಯಕರಾಗಿ ಬೆಳವಣಿಗೆ ಸಾಧಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ ಅವರ ಪ್ರಭಾವಳಿಯನ್ನು ಹಳೇ ಮೈಸೂರು ವಿಭಾಗದಲ್ಲಿ ಹರಡುವುದರೊಂದಿಗೆ ಬಿಜೆಪಿ ಬಲವರ್ಧನೆಗೊಳಿಸುವ ತಂತ್ರಗಾರಿಕೆಗೆ ಕಮಲಪಡೆ ನಾಯಕರು ಮುಂದಾಗಿದ್ದಾರೆ.

ಮುಂಬರುವ 2023ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು (Assembly Election ) ಗುರಿಯಾಗಿಸಿಕೊಂಡಿರುವ ಬಿಜೆಪಿ ಜಿಲ್ಲೆಯೊಳಗೆ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಯೋಗಿ(Yigi Adityanath )  ಸಂತರಾಗಿ ರಾಜಕೀಯ ಪ್ರವೇಶಿಸಿ ಎಲ್ಲರ ನಿರೀಕ್ಷೆಗೂ ಮೀರಿ ರಾಜಕೀಯ ನಾಯಕರಾಗಿ ಬೆಳವಣಿಗೆ ಸಾಧಿಸಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಯೂ ಆಗಿ ಎರಡನೇ ಬಾರಿಗೆ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಅವರ ಪ್ರಭಾವವನ್ನು ದಕ್ಷಿಣಕ್ಕೂ ವಿಸ್ತರಿಸುವ ಕಾರ್ಯಯೋಜನೆಯೇ ಕುಂಭಮೇಳವಾಗಿದೆ. ಆ ಮೂಲಕ ಮೋದಿ ನಂತರ ಯೋಗಿ ಆದಿತ್ಯನಾಥ್‌ ನಾಯಕತ್ವವನ್ನು ಎಲ್ಲೆಡೆ ಪ್ರವರ್ಧಮಾನಕ್ಕೆ ತರುವ ಬಿಜೆಪಿಯ ಅಜೆಂಡಾ ಇದಾಗಿದೆ ಎನ್ನಲಾಗಿದೆ.

Latest Videos

undefined

ಬಿಜೆಪಿ ಬೆಳವಣಿಗೆಗೆ ಆಸಕ್ತಿ:

ಯೋಗಿ ಆದಿತ್ಯನಾಥ್‌ ಅವರೂ ಕೂಡ ನಾಥ ಪರಂಪರೆಗೆ ಸೇರಿದವರು. ಆದಿ ಚುಂಚನಗಿರಿ ಮಠವೂ ನಾಥ ಪರಂಪರೆಗೆ ಸೇರಿದ್ದು, ಈ ಸಮುದಾಯದ ಜನರ ಮತಗಳನ್ನು ಬಿಜೆಪಿ ಕಡೆಗೆ ಕ್ರೋಢೀಕರಿಸಿಕೊಂಡು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಸರಿಸಮನಾಗಿ ಬಿಜೆಪಿ ಬೆಳವಣಿಗೆ ಕಾಣುವುದಕ್ಕೆ ಹರಸಾಹಸ ನಡೆಸುತ್ತಿದೆ ಎಂದು ಹೇಳಲಾಗಿದೆ.

ಕಾಂಗ್ರೆಸ್‌-ಜೆಡಿಎಸ್‌ ಗಟ್ಟಿನೆಲೆಯೊಳಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಬಿಜೆಪಿ ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರು ಜಯಭೇರಿ ಬಾರಿಸುವುದರೊಂದಿಗೆ ಜಿಲ್ಲೆಯೊಳಗೆ ಮೊದಲ ಖಾತೆಯನ್ನು ತೆರೆದಿದೆ. ಬಿಜೆಪಿಯ ಈ ಗೆಲುವಿನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ಸಲುವಾಗಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಯೋಗಿ ಆದಿತ್ಯನಾಥ್‌ ಅವರನ್ನು ಕುಂಭಮೇಳಕ್ಕೆ ಕರೆತರುವುದರೊಂದಿಗೆ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವುದಕ್ಕೆ ಟೊಂಕ ಕಟ್ಟಿದೆ ಎನ್ನಲಾಗಿದೆ.

ಮಹಾಕುಂಭ ಮೇಳದಲ್ಲಿ ಧಾರ್ಮಿಕವಾಗಿ ಎಲ್ಲಾ ಮಠಾಧೀಶರನ್ನು ಒಗ್ಗೂಡಿಸುವುದರೊಂದಿಗೆ ಯೋಗಿ ಆದಿತ್ಯನಾಥ್‌ ಅವರನ್ನೂ ಕರೆತಂದು ಕುಂಭಮೇಳಕ್ಕೆ ಮೆರುಗು ನೀಡುವುದು. ಅವರ ಪ್ರಭಾವದಿಂದ ಬಿಜೆಪಿಗೆ ಒಂದಷ್ಟುಶಕ್ತಿ ಸಿಗಲಿದೆ ಎಂಬ ಭರವಸೆಯೊಂದಿಗೆ ಪಕ್ಷದ ಜನಪ್ರಿಯ ಸಂತನನ್ನು ಕರೆತರುತ್ತಿದ್ದಾರೆ. ಇದು ಬಿಜೆಪಿಗೆ ಹೇಗೆ ವರದಾನವಾಗಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.

ರಾಹುಲ್‌ ಪಾದಯಾತ್ರೆಗೆ  ಪರ್ಯಾಯವೇ?

ರಾಹುಲ್‌ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಗೆ ಜಿಲ್ಲೆಯೊಳಗೆ ಅಭೂತಪೂರ್ವ ಬೆಂಬಲ ದೊರಕಿದ್ದು, ಅದಕ್ಕೆ ಪರ್ಯಾಯವಾಗಿ ಕುಂಭಮೇಳ ಆಯೋಜಿಸುವುದರೊಂದಿಗೆ ಯೋಗಿ ಆದಿತ್ಯನಾಥ್‌ ಅವರನ್ನು ಕರೆಸಿ ಬಿಜೆಪಿ ಶಕ್ತಿ ಪ್ರದರ್ಶಿಸುತ್ತಿದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಮೂಡಿವೆ.

ರಾಹುಲ್‌ ಪಾದಯಾತ್ರೆ ಯಶಸ್ವಿಯಾದ ಮಾದರಿಯಲ್ಲೇ ಕೆ.ಆರ್‌.ಪೇಟೆ ತಾಲೂಕಿನಲ್ಲಿ ಆಯೋಜಿಸಿರುವ ಮಹಾಕುಂಭ ಮೇಳವನ್ನು ಯಶಸ್ವಿಗೊಳಿಸುವ ಮೂಲಕ ಕಾಂಗ್ರೆಸ್‌ ಸೆಡ್ಡು ಹೊಡೆಯುವುದಕ್ಕೆ ಬಿಜೆಪಿಗರು ಪಣತೊಟ್ಟಿದ್ದಾರೆ. ಮೂರು ದಿನಗಳ ಕುಂಭಮೇಳವನ್ನು ಯಶಸ್ವಿಗೊಳಿಸುವುದರೊಂದಿಗೆ ಪಕ್ಷಕ್ಕೆ ಹೊಸ ಆಯಾಮ ತಂದುಕೊಡುವುದು, ಜಿಲ್ಲೆಯೊಳಗೆ ಬಿಜೆಪಿ ಶಕ್ತಿಯುತವಾಗಿ ನೆಲೆ ಕಂಡುಕೊಳ್ಳುವಂತೆ ಮಾಡುವ ಗುರಿಯನ್ನು ಬಿಜೆಪಿ ಮುಖಂಡರು ಹೊಂದಿದ್ದಾರೆ ಎಂದು ಹೇಳಲಾಗಿದೆ.

ಮಹಾಕುಂಭಮೇಳದ ಪ್ರಧಾನ ಆಕರ್ಷಣೆಯೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಂದ್‌. ಅವರನ್ನು ದಕ್ಷಿಣಕ್ಕೆ ಕರೆತರುವ ಸಲುವಾಗಿಯೇ ಬಿಜೆಪಿ ಕುಂಭಮೇಳವನ್ನು ಆಯೋಜಿಸಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. 2022ರಲ್ಲಿ ಆಯೋಜಿಸಿರುವುದನ್ನು ನೋಡಿದರೆ ಚುನಾವಣಾ ಪೂರ್ವ ತಾಲೀಮಿನಂತೆ ಕಂಡುಬರುತ್ತಿದೆ ಎನ್ನಲಾಗಿದೆ.

ಹಳೇ ಮೈಸೂರು ಭಾಗದಲ್ಲಿ ಪ್ರಭಾವ

ಮುಂದಿನ ಚುನಾವಣೆಯಲ್ಲಿ ಹಳೇ ಮೈಸೂರು ಭಾಗವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಜನಪ್ರಿಯ ನಾಯಕರನ್ನು ಕರೆತಂದು ಜನರನ್ನು ಆಕರ್ಷಿಸುವ ಪ್ರಯತ್ನಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ಯೋಗಿ ಆದಿತ್ಯಾನಂದ್‌, ಚುನಾವಣೆ ಸಮೀಪಿಸುವ ಹಂತದಲ್ಲಿ ನರೇಂದ್ರ ಮೋದಿ ಅವರನ್ನು ಕರೆತರುವುದರೊಂದಿಗೆ ಹೊಸ ಅಲೆಯನ್ನು ಈ ಭಾಗದಲ್ಲಿ ಸೃಷ್ಟಿಸುವುದು ಬಿಜೆಪಿಯವರ ರಾಜಕೀಯ ತಂತ್ರವಾಗಿದೆ. ಈ ಪ್ರಯೋಗದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

click me!