ಬೆಂಕಿ ಅವಘಡ ವೈಟಿಪಿಎಸ್‌ನ ಎರಡೂ ಘಟಕ ಬಂದ್, ಆರ್‌ಟಿಪಿಎಸ್, ಬಳ್ಳಾರಿಯ ಬಿಟಿಪಿಎಸ್‌ ಮೇಲೆ ಹೆಚ್ಚಿನ ಒತ್ತಡ!

Published : Dec 25, 2025, 08:48 PM IST
YTPS Raichuru

ಸಾರಾಂಶ

 ವೈಟಿಪಿಎಸ್‌ ಎರಡೂ ಘಟಕಗಳು ಅಗ್ನಿ ದುರಂತ ಮತ್ತು ತಾಂತ್ರಿಕ ದೋಷದಿಂದ ಸ್ಥಗಿತಗೊಂಡಿವೆ. ಇದರಿಂದಾಗಿ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ಆರ್‌ಟಿಪಿಎಸ್‌) ಮೇಲೆ ಹೆಚ್ಚಿನ ಒತ್ತಡ ಬಿದ್ದಿದ್ದು, ರಾಜ್ಯದ ವಿದ್ಯುತ್ ಉತ್ಪಾದನೆಯಲ್ಲಿ ತೀವ್ರ ಹಿನ್ನಡೆಯಾಗಿದೆ.

ವರದಿ: ರಾಮಕೃಷ್ಣ ದಾಸರಿ

ರಾಯಚೂರು: ವಿವಿಧ ಕಾರಣಗಳಿಂದಾಗಿ ಸಮೀಪದ ಯರಮರಸ್‌ ಅತ್ಯಾಧುನಿಕ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ವೈಟಿಪಿಎಸ್‌ನ) ಎರಡೂ ಘಟಕಗಳು ಬಂದಾಗಿದ್ದರಿಂದ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ (ಆರ್‌ಟಿಪಿಎಸ್‌) ಘಟಕಗಳ ಮೇಲೆ ಹೆಚ್ಚಿನ ಒತ್ತಡ ಬಿದಿದ್ದು, ಪರಿಣಾಮ ಕೇಂದ್ರದ ಏಳೂ ಘಟಕಗಳಿಂದಲೂ ನಿರಂತರವಾಗಿ ಕರೆಂಟ್‌ ಉತ್ಪಾದಿಸಲಾಗುತ್ತಿದೆ.

ಇತ್ತೀಚೆಗೆ ವೈಟಿಪಿಎಸ್‌ನ ಸಂಭವಿಸಿದ ಅಗ್ನಿ ದುರಂತದಿಂದಾಗಿ ಸ್ಥಾವರದ ಒಂದನೇ ಘಟಕವು ಬಂದಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಸ್ಥಾವರದ ಎರಡನೇ ಘಟಕದ ಬಾಯ್ಲರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದರಿಂದ ಆ ಘಟಕವನ್ನು ಸಹ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ರಾಜ್ಯಕ್ಕೆ ಶಾಖೋತ್ಪನ್ನ ವಿದ್ಯುತ್‌ ಕ್ಷೇತ್ರದಿಂದ ಸಿಗುತ್ತಿದ್ದ ಬಹುಪಾಲು ಕರೆಂಟ್‌ಗೆ ಖೋತಾಬಿದಿದ್ದು, ಇಷ್ಟೇ ಅಲ್ಲದೇ ಉಳಿದ ಆರ್‌ಟಿಪಿಎಸ್‌ ಮತ್ತು ಪಕ್ಕದ ಬಳ್ಳಾರಿಯ ವೈಟಿಪಿಎಸ್ ಗಳ ಮೇಲೆ ಹೆಚ್ಚಿನ ಒತ್ತಡಬಿದ್ದಂತಾಗಿದೆ.

ಕೆಲ ತಿಂಗಳ ಹಿಂದೆ ಬೇಡಿಕೆ ಕುಸಿತದಿಂದ ಶಾಖೋತ್ಪನ್ನ ವಿದ್ಯುತ್‌ ಸ್ಥಾವರಗಳಿಗೆ ವಿಶ್ರಾಂತಿ ನೀಡಿ ಪರ್ಯಾಯ ಮೂಲಗಳಾದ ಜಲ, ಸೋಲಾರ್, ಪವನ ಮೂಲಗಳ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಇದೀಗ ತೀವ್ರ ಚಳಿಯಿಂದಾಗಿ ಸೋಲಾರ್‌ ಮೂಲದಿಂದ ಕರೆಂಟ್ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಹಂಚಿಕೆ ಹಾಗೂ ಅನ್ಯ ರಾಜ್ಯಗಳಿಂದ ಕರೆಂಟ್ ಖರೀದಿಯು ಕಡಿಮೆಯಾಗಿದ್ದರಿಂದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ಸ್ಥಾವರಗಳ ಘಟಕಗಳನ್ನು ಬಹುತೇಕ ಪೂರ್ಣ ಪ್ರಮಾಣದಲ್ಲಿ ಚಲಾಯಿಸಿ ಕರೆಂಟ್‌ ಪಡೆಯಲಾಗುತ್ತಿತ್ತು. ಇದೀಗ ತಲಾ 800 ಮೆಗಾ ವ್ಯಾಟ್ ಸಾಮರ್ಥ್ಯದ ವೈಟಿಪಿಎಸ್‌ನ ಎರಡೂ ಘಟಕಗಳು ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದರಿಂದ ಉಳಿದವುಗಳ ಮೇಲೆ ವಿದ್ಯುತ್‌ ಉತ್ಪಾದನೆಯ ಒತ್ತಡವು ಹೆಚ್ಚಾಗಿದೆ.

ಉತ್ಪಾದನೆ ಹೀಗುಂಟು

ಆರ್‌ಟಿಪಿಎಸ್‌ನ ಎಂಟು ಘಟಕಗಳ ಪೈಕಿ ಒಂದೇ ಘಟಕವು ಹಳೆಯದಾಗಿದ್ದರಿಂದ ಕಳೆದ ಹಲವು ವರ್ಷಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕೆಲ ದಿನಗಳ ಹಿಂದೆ ವಾರ್ಷಿಕ ನಿರ್ವಹಣೆಗಾಗಿ ಬಂದ್ ಮಾಡಿದ್ದ ಮೂರನೇ ಘಟಕವು ಪುನರಾರಂಭಗೊಂಡಿದ್ದು, ಕೇಂದ್ರದ 210 ಮೆಗಾ ವ್ಯಾಟ್ ಸಾಮರ್ಥ್ಯದ 2 ರಿಂದ 7ನೇ ಘಟಕ ಹಾಗೂ 250 ಮೆಗಾ ವ್ಯಾಟ್‌ ಸಾಮರ್ಥ್ಯದ 8ನೇ ಘಟಕ ಸೇರಿ 1350 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದರಲ್ಲಿ 2ನೇ ಘಟಕದಿಂದ 197 ಮೆಗಾ ವ್ಯಾಟ್, 3ನೇ ಘಟಕದಿಂದ 172, 4ನೇ ಘಟಕದಿಂದ 190, 5ನೇ ಘಟಕದಿಂದ 196, 6ನೇ ಘಟಕದಿಂದ 193 ಮತ್ತು 7ನೇ ಘಟಕದಿಂದ 197 ಮೆಗಾ ವ್ಯಾಟ್ ಅದೇ ರೀತಿ 8ನೇ ಘಟಕದಿಂದ 230 ಮೆಗಾ ವ್ಯಾಟ್ ಕರೆಂಟ್ ಉತ್ಪಾದಿಸಲಾಗುತ್ತಿದೆ. ಬಿಟಿಪಿಎಸ್‌ನ ಮೂರು ಘಟಕಗಳ ಪೈಕಿ ತಾಂತ್ರಿಕ ದೋಷದಿಂದಾಗಿ ಎರಡೂ ಘಟಕಗಳು ಬಂದಾಗಿದ್ದು, ಉಳಿದ 395 ಮೆಗಾ ವ್ಯಾಟ್ ಕರೆಂಟ್‌ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಹಿನ್ನಡೆ ಉಂಟಾಗಿದೆ

ರಾಜ್ಯದ ವಿದ್ಯುತ್‌ ಬೇಡಿಕೆ ಅನುಸಾರ ವಿವಿಧ ಮೂಲಗಳಿಂದ ಕರೆಂಟ್‌ ಪಡೆಯಲಾಗುತ್ತಿದೆ. ಅತೀ ಹೆಚ್ಚಿನ ಪ್ರಮಾಣದಲ್ಲಿ ಶಾಖೋತ್ಪನ್ನ ವಿದ್ಯುತ್‌ ಮೂಲಗಳಿಂದ ವಿದ್ಯುತ್‌ ಒದಗಿಸಲಾಗುತ್ತಿತ್ತು. ಆದರೆ ವೈಟಿಪಿಎಸ್‌ ಹಾಗೂ ಬಿಟಿಪಿಎಸ್‌ನ ನಾಲ್ಕು ಘಟಕಗಳು ಬಂದಾಗಿದ್ದರಿಂದ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆಗೆ ತೀವ್ರ ಹಿನ್ನಡೆ ಉಂಟಾಗಿದೆ. ವೈಟಿಪಿಎಸ್‌ನ ಎರಡೂ ಘಟಕಗಳು ಬಂದಾಗಿದ್ದರಿಂದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಸ್ಥಾವರದ ಮೂಲಗಳಿಂದ ಸರಿಸುಮಾರು 1,500 ಮೆಗಾ ವ್ಯಾಟ್‌ ಮತ್ತು ವೈಟಿಪಿಎಸ್‌ನ ಎರಡೂ ಘಟಕಗಳು ಬಂದಾಗಿದ್ದರಿಂದ ಸುಮಾರು ಒಂದು ಸಾವಿರ ಹೀಗೆ ಎರಡೂವರೆ ಸಾವಿರ ಮೆಗಾ ವ್ಯಾಟ್ ಕರೆಂಟ್‌ ಉತ್ಪಾದನೆಗೆ ಹಿನ್ನಡೆ ಉಂಟಾದಂತಾಗಿದೆ.

PREV
Read more Articles on
click me!

Recommended Stories

ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?
ಮುಳ್ಳಯ್ಯನಗಿರಿ ಬಳಿ ಪ್ರವಾಸಿಗರ ಜೀಪ್ ಪಲ್ಟಿ, ಪುತ್ತೂರಿನ 7 ಮಂದಿಗೆ ಗಾಯ