
ಬೆಂಗಳೂರು: ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಪ್ರಮುಖ ವಾಣಿಜ್ಯ ಹಾಗೂ ಮನರಂಜನಾ ಕೇಂದ್ರವಾಗಿರುವ ಕೋರಮಂಗಲ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಜನಸಂದಣಿ ಹೆಚ್ಚಾಗುವ ನಿರೀಕ್ಷೆಯ ಹಿನ್ನೆಲೆ, ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ಸಮಗ್ರ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಖುದ್ದಾಗಿ ಕೋರಮಂಗಲ ಪ್ರದೇಶದಲ್ಲಿ ಬೈಕ್ ರೈಡ್ ಮೂಲಕ ಪರಿಶೀಲನೆ ನಡೆಸಿದರು. ಈ ವೇಳೆ ಕೋರಮಂಗಲದ ಪ್ರಮುಖ ಜಂಕ್ಷನ್‌ಗಳು, ಪಬ್ ರಸ್ತೆ, ಜನಸಂದಣಿ ಹೆಚ್ಚಾಗುವ ಸ್ಥಳಗಳು ಹಾಗೂ ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಸುತ್ತು ಹಾಕಿ ಭದ್ರತಾ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದರು.
ಈ ಪರಿಶೀಲನಾ ಕಾರ್ಯದಲ್ಲಿ ಪೂರ್ವ ವಲಯ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಅಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ, ಟ್ರಾಫಿಕ್ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಸಿಸಿಬಿ ಡಿಸಿಪಿ ಶ್ರೀ ಹರಿಬಾಬು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಜೊತೆಗೆ ಸ್ಥಳೀಯ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯೂ ಈ ಪರಿಶೀಲನೆಗೆ ಸಾಕ್ಷಿಯಾದರು.
ಕೋರಮಂಗಲದ ಸುಖ ಸಾಗರ್ ಹೋಟೆಲ್ ಜಂಕ್ಷನ್ನಿಂದ ಆರಂಭಗೊಂಡ ಪರಿಶೀಲನೆ, ವಿವಿಧ ಪ್ರಮುಖ ರಸ್ತೆಗಳಲ್ಲಿ ಮುಂದುವರಿದಿತು. ಹೊಸ ವರ್ಷಾಚರಣೆಯ ವೇಳೆ ಕೋರಮಂಗಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲಿದ್ದಾರೆ ಎಂಬ ಅಂದಾಜಿನ ಹಿನ್ನೆಲೆ, ಪೊಲೀಸರು ವಿಶೇಷ ಭದ್ರತಾ ಯೋಜನೆಯನ್ನು ರೂಪಿಸಿದ್ದಾರೆ.
ಈ ಬಾರಿ ಕೋರಮಂಗಲದಲ್ಲಿ ತಾತ್ಕಾಲಿಕ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದ್ದು, ಒಂದು ಕಟ್ಟಡದ ಟಾಪ್ ಫ್ಲೋರ್‌ನಲ್ಲಿ ಕಂಟ್ರೋಲ್ ರೂಂ ಕಾರ್ಯನಿರ್ವಹಿಸಲಿದೆ. ಅಲ್ಲಿಂದಲೇ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪ್ರತಿಯೊಂದು ಚಲನವಲನವನ್ನು ನಿಗಾ ವಹಿಸಲಾಗುತ್ತದೆ. ಜೊತೆಗೆ ಪಬ್ ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಇನ್ನೊಂದು ತಾತ್ಕಾಲಿಕ ಕಂಟ್ರೋಲ್ ರೂಂ ಕೂಡ ಕಾರ್ಯಾಚರಣೆ ನಡೆಸಲಿದೆ.
ಪ್ರತಿ ಇಂಚಿನ ಪ್ರದೇಶವೂ ಸಿಸಿಟಿವಿ ನಿಗಾವಲಯದಲ್ಲಿ ಇರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಂದೋಬಸ್ತ್ ಮಾಡಲಾಗಿದೆ. ಎಲ್ಲೆಲ್ಲಿ ಯಾವ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಡಿಸಿಪಿ ಸಾರಾ ಫಾತಿಮಾ ಅವರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ವಿವರವಾಗಿ ಮಾಹಿತಿ ನೀಡಿದರು.
ಪೊಲೀಸರು ಸಾರ್ವಜನಿಕರಿಗೆ ಭದ್ರತೆ ಕುರಿತಾಗಿ ಅರಿವು ಮೂಡಿಸುವ ಪ್ರಯತ್ನದಲ್ಲಿದ್ದು, ಹೊಸ ವರ್ಷಾಚರಣೆಯನ್ನು ಶಾಂತಿಯುತವಾಗಿ ಹಾಗೂ ಸುರಕ್ಷಿತವಾಗಿ ಆಚರಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.