
ಬೆಂಗಳೂರು (ಅ.29): ಕನ್ನಡ ರಾಜ್ಯೋತ್ಸವಕ್ಕೆ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಆರ್.ವಿ ರೋಡಿಂದ ಬೊಮ್ಮಸಂದ್ರ ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ನವೆಂಬರ್ 1ರಿಂದ ಐದನೇ ರೈಲು ಸಂಚಾರ ಮಾಡಲಿದೆ. ಸದ್ಯ ನಾಲ್ಕು ರೈಲುಗಳೊಂದಿಗೆ ಯೆಲ್ಲೋ ಲೈನ್ ಕಾರ್ಯಾಚರಣೆಯನ್ನು ಮಾಡ್ತಿದ್ದು, ಪ್ರತಿ ರೈಲು ಸಂಚಾರದ ನಡುವೆ 19 ನಿಮಿಷಗಳ ಅಂತರವಿದೆ. ಐದನೇ ರೈಲು ಸೇರ್ಪಡೆಯಾದ್ರೆ ಅಂತರ ಇನ್ನಷ್ಟು ಕಡಿತವಾಗಲಿದ್ದು, ಐದನೇ ರೈಲು ಸಂಚಾರದಿಂದ 15 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಲಿದೆ. ಸದ್ಯ ಐದನೇ ರೈಲಿನ ಸುರಕ್ಷಿತ ಪರೀಕ್ಷೆ ಮುಗಿದಿದ್ದು, ಕೊನೆಯ ಹಂತದ ತಾಂತ್ರಿಕ ಪರೀಕ್ಷೆ ಕಾರ್ಯ ಸಾಗ್ತಿದೆ.
ನವೆಂಬರ್ 1 ರಂದು ಸಾರ್ವಜನಿಕ ಸೇವೆಗೆ ರೈಲು ಲಭ್ಯವಾಗಲಿದೆ. ಇನ್ನು ಆಗಸ್ಟ್ 10ರಂದು ಪ್ರಧಾನಿ ಮೋದಿ ಯೆಲ್ಲೋ ಲೈನ್‌ಗೆ ಚಾಲನೆ ಕೊಟ್ಟಿದ್ದರು. ಆರಂಭದಲ್ಲಿ ಮೂರು ರೈಲುಗಳೊಂದಿಗೆ ಸಂಚಾರ ಆರಂಭಿಸಿತ್ತು. ಅಲ್ಲದೇ 25 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಿತ್ತು. ಸೆಪ್ಟಂಬರ್ 10ರಂದು ನಾಲ್ಕನೇ ರೈಲು ಸೇರ್ಪಡೆಯಾಗಿತ್ತು. ಅದಾದ ನಂತರ ಪ್ರತಿ 19 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಿತ್ತು. ಈಗ ಐದನೇ ರೈಲು ಬೋಗಿಗಳು ಯೆಲ್ಲೋ ಲೈನ್ ತಲುಪಿದ್ದು, ನವೆಂಬರ್ ತಿಂಗಳಿಂದ ಕಾರ್ಯಾಚರಣೆ ಮಾಡಲಿದೆ. ಐದನೇ ರೈಲು ಸಂಚಾರಿಸಿದ್ರೆ ಪ್ರತಿ 15 ನಿಮಿಷಕ್ಕೊಮ್ಮೆ ರೈಲು ಸಂಚಾರ ಮಾಡಲಿದೆ.
ಕನ್ನಡಿಗರ ವ್ಯಾಪಕ ವಿರೋಧಕ್ಕೆ ಕಾರಣವಾಗಿದ್ದ ನಮ್ಮ ಮೆಟ್ರೋವನ್ನು ತಮಿಳುನಾಡಿನ ಹೊಸೂರಿಗೆ ವಿಸ್ತರಣೆ ಮಾಡುವ ಯೋಜನೆ ಇದೀಗ ತಾಂತ್ರಿಕವಾಗಿ ಕಾರ್ಯಸಾಧುವಲ್ಲ ಎಂದು ಬಿಎಂಆರ್‌ಸಿಎಲ್ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಮೂಲಗಳ ಪ್ರಕಾರ ಕರ್ನಾಟಕದ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಮ್ಮ ಮೆಟ್ರೋ ಹಾಗೂ ಚೆನ್ನೈ ಮೆಟ್ರೋ ರೈಲ್ ಲಿ. (ಸಿಎಂಆರ್‌ಎಲ್) ವ್ಯವಸ್ಥೆಗಳು ವಿಭಿನ್ನ ವಿದ್ಯುತ್ ಶಕ್ತಿ ಚಾಲಿತ ತಾಂತ್ರಿಕತೆಯನ್ನು ಬಳಸುತ್ತಿರುವುದರಿಂದ ಸಂಯೋಜಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ವರದಿಯಲ್ಲಿ ಹೇಳಿರುವುದಾಗಿ ತಿಳಿದುಬಂದಿದೆ. ಆರ್.ವಿ.ರಸ್ತೆ - ಬೊಮ್ಮಸಂದ್ರ ಸಂಪರ್ಕಿಸುವ ಮೆಟ್ರೋ ಹಳದಿ ಮಾರ್ಗವನ್ನು ಬೊಮ್ಮಸಂದ್ರದಿಂದ 23 ಕಿ.ಮೀ. ವಿಸ್ತರಿಸಿ ತಮಿಳುನಾಡಿನ ಹೊಸೂರು ಸಂಪರ್ಕಿಸುವ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳುವಂತೆ ತಮಿಳುನಾಡು ಕೋರಿತ್ತು.
ಅಲ್ಲಿನ ಕೃಷ್ಣಗಿರಿ ಸಂಸದ ಎ.ಚೆಲ್ಲಕುಮಾರ್ ಈ ಕುರಿತು ಕೇಂದ್ರಕ್ಕೆ ವಿಶೇಷ ಮನವಿ ಮಾಡಿದ್ದರು. ಬಳಿಕ ಎರಡೂ ಮೆಟ್ರೊ ಸಂಸ್ಥೆಗಳು ತಮ್ಮದೇ ಆದ ಅಧ್ಯಯನ ನಡೆಸಿದ್ದವು. ಬೊಮ್ಮಸಂದ್ರದಿಂದ ತಮಿಳುನಾಡಿನ ಕಡೆಗೆ ಕೊನೆಯ ಉಪನಗರವಾದ ಅತ್ತಿಬೆಲೆಗೆ ಮೆಟ್ರೊವನ್ನು ವಿಸ್ತರಿಸಲು ಬಿಎಂಆರ್‌ಸಿಎಲ್ ತನ್ನದೇ ಆದ ಅಧ್ಯಯನವನ್ನು ನಡೆಸಿತು. ಪ್ರಸ್ತಾವಿತ ಯೋಜನೆ ಪ್ರಕಾರ ಎರಡೂ ರಾಜ್ಯಗಳ ಗಡಿಯಲ್ಲಿ 300 ಮೀಟರ್ ಅಂತರದಲ್ಲಿ ಎರಡು ನಿಲ್ದಾಣಗಳು ನಿರ್ಮಾಣಗೊಳ್ಳಬೇಕು. ಈ 300 ಮೀಟರ್ ಅನ್ನು ಪಾದಚಾರಿ ಮೇಲ್ಸೇತುವೆ ಮೂಲಕ ದಾಟಬೇಕು. ಇದು ಕಾರ್ಯಸಾಧುವಲ್ಲ ಎಂದು ಅಧಿಕಾರಿಗಳು ತಿಳಿಸಿದರು. ನಾವು ನಮ್ಮ ಅಭಿಪ್ರಾಯವನ್ನು ರಾಜ್ಯ ಸರ್ಕಾರದೊಂದಿಗೆ ಹಂಚಿಕೊಂಡಿದ್ದೇವೆ. ಅಂತಿಮ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.