ವಿಪರೀತವಾಗಿ ಸುರಿದ ಮಳೆಯಿಂದ ಸಂಕಷ್ಟ ಅನುಭವಿಸಿದ್ದ ಕರಾವಳಿ ಜನರು ಇದೀಗ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆ ಪ್ರಮಾಣ ಕಡಿಮೆಯಾಗಿದ್ದು ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ
.
ಉಡುಪಿ (ಜು.19): ಜಿಲ್ಲೆಯಲ್ಲಿ ಸೋಮವಾರವೂ ಸಾಧಾರಣ ಮಳೆ ಮುಂದುವರಿದಿದ್ದು, ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯಂತೆ ಜುಲೈ 19ರಂದು ಯಲ್ಲೋ ಅಲರ್ಚ್ ಘೋಷಿಸಲಾಗಿದೆ. ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ, ಜೊತೆಗೆ ಗಾಳಿಯ ಅಬ್ಬರವೂ ಇತ್ತು. ಆದರೆ ಸೋಮವಾರ ಬಿಸಿಲಿನ ವಾತಾವರಣವಿತ್ತು, ನಡುವೆ ಒಂದೆರಡು ಬಾರಿ ಲಘುವಾದ ಮಳೆಯಾಗಿದೆ.
ಭಾನುವಾರದ ಮಳೆ(Rain) ಗಾಳಿಗೆ ಜಿಲ್ಲೆಯಲ್ಲಿ 8 ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 3.06 ಲಕ್ಷ ರು. ನಷ್ಟವಾಗಿದೆ. ಬೈಂದೂರು ತಾಲೂಕಿನಲ್ಲಿ 3 ಮನೆಗಳಿಗೆ 1.60 ಲಕ್ಷ ರು., ಬ್ರಹ್ಮಾವರ(Brahmavar) ತಾಲೂಕಿನಲ್ಲಿ 3 ಮನೆಗಳಿಗೆ 1.06 ಲಕ್ಷ ರು. ಮತ್ತು ಕಾರ್ಕಳ(Karkala) ತಾಲೂಕಿನಲ್ಲಿ 2 ಮನೆಗಳಿಗೆ 40 ಸಾವಿರ ರು. ನಷ್ಟವಾಗಿದೆ.
ಇದನ್ನೂ ಓದಿ: Karnataka Rain News: ಪ.ಪಂ.ವ್ಯಾಪ್ತಿಯಲ್ಲೇ ಸೇತುವೆ ಇಲ್ಲದ ಹೊಳೆ: ಜನರ ಪರದಾಟ
ಭಾನುವಾರ ಮುಂಜಾನೆಯಿಂದ ಸೋಮವಾರ ಮುಂಜಾನೆ ವರೆಗೆ ಜಿಲ್ಲೆಯಲ್ಲಿ ಸರಾಸರಿ 70.60 ಮಿ.ಮೀ. ಮಳೆ ದಾಖಲಾಗಿದೆ. ತಾಲೂಕುವಾರು ಉಡುಪಿ 64.30, ಬ್ರಹ್ಮಾವರ 64.30, ಕಾಪು 68.70, ಕುಂದಾಪುರ 56.50, ಬೈಂದೂರು 66.30, ಕಾರ್ಕಳ 87, ಹೆಬ್ರಿ 87.90 ಮಿ.ಮೀ. ಮಳೆಯಾಗಿದೆ.
ದಕ್ಷಿಣ ಕನ್ನಡದಲ್ಲಿ ಮಳೆ ಕಡಿಮೆ: ಮಂಗಳೂರು: ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಸೋಮವಾರ ದಿನವಿಡೀ ಮೋಡ, ಆಗಾಗ ಮಳೆ ಕಾಣಿಸಿದೆ. ಅಪರಾಹ್ನವೂ ಮಳೆ ವಾತಾವರಣ ಮುಂದುವರಿದಿದೆ. ಮಂಗಳೂರಿನಲ್ಲಿ ಸಂಜೆ ತುಸು ಬಿಸಿಲು ಕಂಡುಬಂತು. ಸೋಮವಾರ ಆರೆಂಜ್ ಅಲರ್ಚ್ ಇದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಕರಾವಳಿಯಲ್ಲಿ ಜು.19ರಿಂದ 21ರ ವರೆಗೂ ಯೆಲ್ಲೋ ಅಲರ್ಚ್ ಇರಲಿದ್ದು, ಹಗುರ ಮಳೆಯ ನಿರೀಕ್ಷೆ ಇದೆ.
ಇದನ್ನೂ ಓದಿ: ಆದೇಶ ಪರಿಷ್ಕರಿಸಿದ ಡಿಸಿ, ಶಿರಾಡಿಘಾಟ್‌ನಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ!
ಕಡಬ ಗರಿಷ್ಠ ಮಳೆ: ಸೋಮವಾರ ಬೆಳಗ್ಗಿನ ವರೆಗೆ ಜಿಲ್ಲೆಯ ಕಡಬದಲ್ಲಿ 103 ಮಿಲಿ ಮೀಟರ್ ಮಳೆಯಾಗಿದೆ. ಬೆಳ್ತಂಗಡಿ 79.1 ಮಿ.ಮೀ, ಬಂಟ್ವಾಳ 67.6 ಮಿ.ಮೀ, ಮಂಗಳೂರು 39.5 ಮಿ.ಮೀ, ಪುತ್ತೂರು 79.9 ಮಿ.ಮೀ, ಸುಳ್ಯ 68.1 ಮಿ.ಮೀ, ಮೂಡುಬಿದಿರೆ 81.7 ಮಿ.ಮೀ. ಮಳೆ ವರದಿಯಾಗಿದೆ. ದಿನದ ಸರಾಸರಿ ಮಳೆ 75 ಮಿ.ಮೀ. ದಾಖಲಾಗಿದೆ.
ಉಪ್ಪಿನಂಗಡಿ ನೇತ್ರಾವತಿ ಮತ್ತು ಕುಮಾರಧಾರ ನದಿ 28.70 ಮೀಟರ್, ಬಂಟ್ವಾಳ ನೇತ್ರಾವತಿ ನದಿ 6.9 ಮೀಟರ್, ಗುಂಡ್ಯ ಹೊಳೆಯಲ್ಲಿ 4.2 ಮೀಟರ್‌ನಲ್ಲಿ ನೀರು ಹರಿಯುತ್ತಿದೆ. ಭಾರಿ ಮಳೆಗೆ 4 ಮನೆ ಸಂಪೂರ್ಣ ಹಾಗೂ 13 ಮನೆ ಭಾಗಶಃ ಹಾನಿಗೀಡಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.
ಕಡಲ್ಕೊರೆತ: ಹೊನ್ನಾವರ ಇಕೋ ಬೀಚ್ ಗೆ ಹಾನಿ: ಅಂತಾರಾಷ್ಟ್ರೀಯ ಬ್ಲ್ಯೂ ಫ್ಲ್ಯಾಗ್ ಮಾನ್ಯತೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಹೊನ್ನಾವರ ಬಳಿಯ ಕಾಸರಕೋಡಿನ ಇಕೋ ಬೀಚ್ ಕಡಲ್ಕೊರೆತಕ್ಕೆ ಹಾನಿಗೊಳಗಾಗಿದೆ. ಕಡಲತೀರದಲ್ಲಿ ನಿರ್ಮಿಸಲಾದ ಪ್ರವಾಸಿಗರ ಆಕರ್ಷಿತ ಕಾಮಗಾರಿಗಳು ಅಲೆಯ ರಭಸಕ್ಕೆ ಅಸ್ತವ್ಯಸ್ತವಾಗಿವೆ. ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದಿದ್ದ ಕೆಲವೇ ಬೀಚ್‌ಗಳ ಪೈಕಿ ಹೊನ್ನಾವರದ ಇಕೋ ಬೀಚ್ ಕೂಡ ಸೇರಿತ್ತು. ಭಾರೀ ಮಳೆ ಹಾಗೂ ಕಡಲಿನ ಹೊಡೆತಕ್ಕೆ ಕಡಲತೀರ ಸಂಪೂರ್ಣ ಹಾಳಾಗಿದೆ.
ಪ್ರವಾಸಿಗರಿಗೆ ನಡೆದಾಡಲು ಇದ್ದ ಸಿಮೆಂಟ್ ಪೂಟ್‌ಪಾತ್, ಬ್ಲ್ಯೂ ಫ್ಲ್ಯಾಗ್ ಹಾರಿಸುತ್ತಿದ್ದ ಧ್ವಜ ಸ್ತಂಭ, ವಾಚ್ ಟವರ್ ಮತ್ತಿತರ ಆಕರ್ಷಣೀಯಗಳು ಹಾನಿಗೊಳಗಾಗಿದೆ. ಸುಮಾರು 500 ಮೀಟರ್ ಉದ್ದಕ್ಕೂ 10 ಮೀಟರ್ ಎತ್ತರದವರೆಗೆ ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದೆ. ಕಡಲ್ಕೊರೆತದಿಂದ ನಯನ ಮನೋಹರ ಇಕೋ ಬೀಚ್ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟುಹಾನಿಯಾಗಿ ಕಡಲ ಒಡಲಿಗೆ ಸೇರುವ ಭೀತಿ ಎದುರಿಸುತ್ತಿದೆ. ಇಕೋ ಬೀಚ್ ಹಾಗೂ ಪಾರ್ಕ್ನ್ನು ಖಾಸಗಿ ಸಂಸ್ಥೆಗೆ ನಿರ್ವಹಣೆಗಾಗಿ ವಹಿಸಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಸುರಿದ ಅಬ್ಬರದ ಮಳೆ ಹಾಗೂ ಭೀಕರ ಸಮುದ್ರ ಕೊರೆತದಿಂದ ಬ್ಲ್ಯೂ ಫ್ಲ್ಯಾಗ್ ಬೀಚ್‌ನ ಕೆಲವು ಭಾಗದ ಕುರುಹುಗಳು ಇಲ್ಲದಂತಾಗಿದೆ.
ಈ ಹಿಂದೆಯೂ ಹಾನಿಯಾಗಿತ್ತು:
ಇಕೋ ಬೀಚ್ ಕಡಲ್ಕೊರೆತಕ್ಕೆ ಹಾನಿಯಾಗಿರುವುದು ಇದು ಮೊದಲೇನಲ್ಲ. ಈ ಹಿಂದೆ ‘ತೌಕ್ತೆ’ ಚಂಡಮಾರುತದ ಸಂದರ್ಭದಲ್ಲಿಯೂ ಹಾನಿಗೊಳಗಾಗಿತ್ತು. ಉದ್ಘಾಟನೆಗೂ ಮೊದಲೇ ಕಡಲಬ್ಬರಕ್ಕೆ ತುತ್ತಾಗಿತ್ತು. ಇದರಿಂದ ಇಕೋ ಬೀಚ್‌ಗಾಗಿ ವ್ಯಯಿಸಿದ ಹಣ ನೀರಲ್ಲಿ ಹೋಮವಾದಂತಾಗಿತ್ತು. ಪ್ರಕೃತಿ ಒಡ್ಡಿದ ಸವಾಲುಗಳನ್ನು ಸ್ವೀಕರಿಸಿಯೂ ಪುನಃ ಪ್ರವಾಸಿಗರ ಆಕರ್ಷಣೆಗೆ ಒಳಗಾಗುವಂತೆ ವ್ಯವಸ್ಥಿತ ಮೂಲ ಸೌಕರ್ಯಗಳೊಂದಿಗೆ ಬೀಚ್ ತಲೆ ಎತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.