ಹೆಬ್ಬಾಳ ಜಂಕ್ಷನ್ ಸಮೀಪ ಪಾದಚಾರಿ ಸುರಂಗ ಮಾರ್ಗ ನಿರ್ಮಿಸಲು ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ನಗರ ಸಂಚಾರ ದಟ್ಟಣೆ ನಿವಾರಣೆಗೆ 4ನೇ ಜಂಟಿ ಸಮಾಲೋಚನಾ ಸಭೆಯಲ್ಲಿ ಸೂಚಿಸಿದ್ದಾರೆ.
ಬೆಂಗಳೂರು (ಜು.19): ಪಾದಚಾರಿಗಳಿಂದ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಹೆಬ್ಬಾಳ್ ಜಂಕ್ಷನ್ ಬಳಿ ಹಾದು ಹೋಗಿರುವ ರೈಲ್ವೆ ಹಳಿಯ ಕೆಳಭಾಗದಲ್ಲಿ ಪಾದಚಾರಿ ಸುರಂಗ ಮಾರ್ಗ ನಿರ್ಮಾಣ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಸೂಚಿಸಿದ್ದಾರೆ. ಸೋಮವಾರ ನಗರದ ಸಂಚಾರ ದಟ್ಟಣೆ ನಿರ್ವಹಣೆ ಕುರಿತು ವಿಕಾಸಸೌಧದಲ್ಲಿ ನಡೆದ ವಿವಿಧ ಇಲಾಖೆಗಳ 4ನೇ ಜಂಟಿ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಬಿಬಿಎಂಪಿ, ಬಿಡಿಎ ಮತ್ತು ಸಂಚಾರ ಪೊಲೀಸ್ ಇಲಾಖೆಯು ಸಮನ್ವಯ ಸಾಧಿಸಿ ಹೆಬ್ಬಾಳ ಜಂಕ್ಷನ್‌ನಲ್ಲಿ ಪಾದಚಾರಿಗಳು ರಸ್ತೆ ಮತ್ತು ಅಲ್ಲಿನ ರೈಲ್ವೆ ಮಾರ್ಗವನ್ನು ಆತುರದಲ್ಲಿ ದಾಟುವುದನ್ನು ತಡೆದು, ಅವರಿಗೆ ಸುರಕ್ಷಿತ ಮಾರ್ಗವನ್ನು ಒದಗಿಸಬೇಕಿದೆ. ಹೀಗಾಗಿ, ರೈಲ್ವೆ ಮಾರ್ಗದ ಕೆಳಗೆ ಪಾದಚಾರಿ ಸುರಂಗ ಮಾರ್ಗ ನಿರ್ಮಿಸುವ ಅವಶ್ಯಕತೆ ಇದೆ. ಕೂಡಲೇ ರೈಲ್ವೆ ಇಲಾಖೆಯೊಂದಿಗೆ ಚರ್ಚಿಸಿ, ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಒಪ್ಪಿದಲ್ಲಿ ಯೋಜನೆಯ ವೆಚ್ಚವನ್ನು ಬಿಬಿಎಂಪಿ ಪಾವತಿಸಬೇಕು ಎಂದು ಸೂಚಿಸಿದರು.
ಕೆ.ಆರ್.ಪುರ ಜಂಕ್ಷನ್ ಸಮೀಪ ಎರಡು ಬದಿಯಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಎಡಭಾಗದಲ್ಲಿ ಮಾರಿಯಮ್ಮ ದೇವಸ್ಥಾನದ ಬಳಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದರೂ, ಚರಂಡಿ ಕಾಮಗಾರಿ ನಡೆಯುತ್ತಿದೆ. ಮುಂದಿನ 10 ದಿನಗಳಲ್ಲಿ ಈ ಕೆಲಸ ಪೂರ್ಣಗೊಳಿಸಬೇಕು. ಜತೆಗೆ, ಬಲ ಭಾಗದಲ್ಲಿ ಬಸ್ ನಿಲುಗಡೆಗೆ ಬೇಕಿರುವ ಅಗತ್ಯ ಸ್ಥಳಾವಕಾಶ ಒದಗಿಸಿ ತಂಗುದಾಣದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಎಲ್ಲ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಯಲ್ಲಿ ನಿಲ್ಲದಂತೆ ಕ್ರಮವಹಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಡಿಎ ಆಯುಕ್ತ ರಾಜೇಶ್‌ಗೌಡ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಸಂಚಾರ ಪೊಲೀಸ್ ಜಂಟಿ ಆಯುಕ್ತ ರವಿಕಾಂತೇಗೌಡ ಉಪಸ್ಥಿತರಿದ್ದರು.
ಕಳೆದ ವಾರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ 3ನೇ ಸಮನ್ವಯ ಸಭೆ ನಡೆದಾಗ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ತಾತ್ಕಾಲಿಕ ಪರಿಹಾರದೊಂದಿಗೆ ಶಾಶ್ವತ ಪರಿಹಾರಗಳಿಗೂ ಹೆಚ್ಚು ಆದ್ಯತೆ ಕೊಡಬೇಕು. ನಿಗದಿತ ಅವಧಿಯಲ್ಲಿ ಪರಿಹಾರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಬೇಕೆಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.
ಹೆಬ್ಬಾಳ ಜಂಕ್ಷನ್‌ನಲ್ಲಿ ರೈಲ್ವೇ ಹಳಿ ಕೆಳಗೆ ಕೆಳ ಸೇತುವೆ ಯೋಜನೆ ಕೈಗೆತ್ತಿಕೊಳ್ಳುವ ಯೋಜನೆಯ ಬಗ್ಗೆ ಚರ್ಚೆ ನಡೆಸಲಾಯಿತು. ಈ ವೇಳೆ ತಾತ್ಕಾಲಿಕವಾಗಿ ಲೆವೆಲ್ ಕ್ರಾಸಿಂಗ್ ಕುರಿತು ಚರ್ಚಿಸಲಾಯಿತು. ಬಿಎಂಟಿಸಿ ವತಿಯಿಂದ ಪ್ರದರ್ಶನ ಫಲಕಗಳನ್ನು ಹಾಕಲು ಮತ್ತು ವೀಕ್ಷಣಾ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ರಾಕೇಶ್ ಸಿಂಗ್ ಸೂಚಿಸಿದರು. ಈ ವೇಳೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪರೆಡ್ಡಿ, ಎಲ್ಲಾ 6 ಪ್ರಮುಖ ಜಂಕ್ಷನ್‌ಗಳಲ್ಲಿ ತಲಾ 25 ಗೃಹರಕ್ಷಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.