ಹಿಂದೂ ಕುಟುಂಬ ಒಂದು ಆಯೋಜಿಸಿದ್ದ ಯಕ್ಷಗಾನ ಮುಸ್ಲಿಂ ಬಾಂಧವರ ಮನೆಯಂಗಳಲ್ಲಿ ನಡೆದು ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು
ವರದಿ : ಸಂದೀಪ್ ವಾಗ್ಲೆ
ಮಂಗಳೂರು (ನ.25): ಹಿಂದೂ ಕುಟುಂಬ ಆಯೋಜಿಸಿದ ಯಕ್ಷಗಾನಕ್ಕೆ ಮುಸ್ಲಿಂ ಬಾಂಧವರೊಬ್ಬರ ಮನೆ ಎದುರಿನ ಅಂಗಳದಲ್ಲಿ ವೇದಿಕೆ ಸಿದ್ಧವಾಗಿತ್ತು. ಅತ್ತ ಸಂಜೆಯ ನಮಾಜ್ ಮುಗಿಯುತ್ತಿದ್ದಂತೆ ಇತ್ತ ಹಿಂದೂ ದೇವರುಗಳು- ಇತರ ಪೌರಾಣಿಕ ಪಾತ್ರಗಳು ಆ ನೆಲದಲ್ಲಿ ವಿಜೃಂಭಿಸಿದವು. ಸುಮಾರು ಮೂರು ಗಂಟೆಗಳ ಕಾಲ ‘ಶಮಂತಕ ರತ್ನ’ ಪ್ರಸಂಗಕ್ಕೆ, ಎರಡು ಕುಟುಂಬಗಳ ಸೌಹಾರ್ದತೆಯ ಮಾದರಿಗೆ ಊರ ಜನರು ಸಾಕ್ಷಿಯಾಗಿದ್ದರು..
ಒಂದಿಲ್ಲೊಂದು ಕೋಮು ವೈಷಮ್ಯದ ಪ್ರಕರಣಗಳು ನಡೆಯುತ್ತ ಸಂಘರ್ಷದ ವಾತಾವರಣಕ್ಕೆ ಸಾಕ್ಷಿಯಾಗುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂಥದ್ದೊಂದು ಅಪರೂಪದ, ಕೋಮು ಬಾಂಧವ್ಯ ಬೆಸೆಯುವ ಪ್ರಸಂಗವೊಂದು ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ಸದ್ದಿಲ್ಲದೆ ನಡೆದಿದೆ. ನಾಡಿನ ಹೆಮ್ಮೆಯ ಯಕ್ಷಗಾನವು ಈ ಸಾಮರಸ್ಯಕ್ಕೆ ಸೇತುವೆಯಾಗಿರುವುದು, ಕರಾವಳಿಯ ಸಾಂಸ್ಕೃತಿಕ ಬಹುತ್ವದ ಹಿರಿಮೆಯನ್ನು ಮಗದೊಮ್ಮೆ ಸಾಕ್ಷೀಕರಿಸಿತ್ತು.
ಹಿಂದೂ ಮುಸ್ಲಿಂ ಬೇಧ ನಮಗಿಲ್ಲ, ಸಂಗಾತಿ ಜೊತೆ ಬಾಳಲು ಸ್ವತಂತ್ರ: ಮಹತ್ವದ ತೀರ್ಪು ಪ್ರಕಟ! ...
ಗೃಹಪ್ರವೇಶಕ್ಕೆ ಯಕ್ಷಗಾನ: ನಾಗೇಶ್ ಎಂಬವರು ಕಿನ್ನಿಗೋಳಿಯಲ್ಲಿ ಇತ್ತೀಚೆಗಷ್ಟೆಹೊಸ ಮನೆ ಕಟ್ಟಿದ್ದರು. ಗೃಹ ಪ್ರವೇಶವನ್ನು ಕಳೆದ ಶುಕ್ರವಾರ (ನ.20ರಂದು) ಆಯೋಜಿಸಿದ್ದರು. ತಮ್ಮ ಹೊಸ ಮನೆಗೆ ‘ಶಮಂತಕ ರತ್ನ’ ಎಂದೇ ಹೆಸರಿಟ್ಟಿರುವ ನಾಗೇಶ್ ಸ್ವತಃ ಹವ್ಯಾಸಿ ಯಕ್ಷಗಾನ ಕಲಾವಿದರೂ ಆಗಿರುವುದರಿಂದ ಅದೇ ಹೆಸರಿನ ಯಕ್ಷಗಾನ ಪ್ರಸಂಗವನ್ನು ಆಡಿಸುವ ಯೋಜನೆ ಹಾಕಿಕೊಂಡಿದ್ದರು. ಸ್ನೇಹಿತರೊಡಗೂಡಿ ಎಲ್ಲ ತಯಾರಿಯನ್ನೂ ನಡೆಸಿದ್ದರು. ಆದರೆ ಅವರ ಮನೆ ಆವರಣದಲ್ಲಿ ಯಕ್ಷಗಾನ ನಡೆಸಲು ಜಾಗದ ಕೊರತೆಯಿತ್ತು. ಪಕ್ಕದಲ್ಲಿ ಬೇರೆ ಜಾಗವಿದ್ದರೂ, ಪಕ್ಕದ ಮನೆಯವರೇ ಆದ ಅಬ್ದುಲ್ ರಜಾಕ್ ಅವರ ಅಂಗಳದ ಜಾಗ ಕೇಳಿದಾಗ ರಜಾಕ್ ಸಂತೋಷದಿಂದ ಒಪ್ಪಿದರು. ಹಿಂದೂ ಪೌರಾಣಿಕ ಯಕ್ಷಗಾನವು ಮುಸ್ಲಿಂ ಬಂಧುವಿನ ಮನೆಯಂಗಳದಲ್ಲಿ ಸಕಲ ಸಡಗರದಿಂದ ನಡೆದೇಬಿಟ್ಟಿತು.
ಶುಕ್ರವಾರ ಸಂಜೆ ಸುಮಾರು 6.30ಕ್ಕೆ ಆರಂಭವಾದ ‘ಶಮಂತಕ ರತ್ನ’ ಯಕ್ಷಗಾನ 9.30ರವರೆಗೂ ನಡೆಯಿತು. ಸ್ವತಃ ಅಬ್ದುಲ್ ರಜಾಕ್ ಯಕ್ಷಗಾನವನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ. ರಜಾಕ್ ಅವರ ಮನೆಯವರೂ ಕೂಡ ತಮ್ಮ ಅಂಗಳದಲ್ಲಿ ಯಕ್ಷಗಾನ ನಡೆದಿದ್ದರಿಂದ ಮುದಗೊಂಡಿದ್ದರು. ನಾಗೇಶ್ ಅವರ ಬಂಧುಗಳು, ಊರಿನವರು ಆಸಕ್ತಿಯಿಂದ ಯಕ್ಷಗಾನ ವೀಕ್ಷಿಸಿದರು. ನಾಗೇಶ್- ಅಬ್ದುಲ್ ರಜಾಕ್ ಕುಟುಂಬಗಳು ಸೌಹಾರ್ದತೆಯ ಹೊಸ ಮಾದರಿಯನ್ನು ಈ ರೀತಿ ಸಮಾಜದ ಮುಂದಿಟ್ಟದ್ದು ವಿಶೇಷವಾಗಿತ್ತು.
BJPಯಿಂದ ಇಬ್ಬರು ಮುಸ್ಲಿಂ ಮಹಿಳೆಯರು ಸ್ಪರ್ಧೆ..! ಮೋದಿಯ ಅಪ್ಪಟ ಫ್ಯಾನ್ಸ್ ಇವ್ರು ...
ಮನೆ ಕಟ್ಟಲೂ ನೆರವು: ಮನೆ ಕಟ್ಟಲು ಜಾಗ ತೋರಿಸಿದ್ದಲ್ಲದೆ, ಮನೆ ನಿರ್ಮಾಣ ಸಂದರ್ಭದಲ್ಲೂ ನೀರು ಪೂರೈಸಿ ಅಬ್ದುಲ್ ರಜಾಕ್ ಕುಟುಂಬ ಸಹಾಯ ಮಾಡಿದ್ದನ್ನು ನಾಗೇಶ್ ಸ್ಮರಿಸಿಕೊಳ್ಳುತ್ತಾರೆ. ನಾಲ್ಕು ವರ್ಷದ ಹಿಂದೆ ರಜಾಕ್ ಅವರ ಮನೆ ಗೃಹ ಪ್ರವೇಶವಾದ ದಿನವೇ (ನ.20ರಂದು) ಈ ವರ್ಷ ನಾಗೇಶ್ ಗೃಹ ಪ್ರವೇಶವೂ ನಡೆದಿರುವುದು ವಿಶೇಷ. ಈ ಯಕ್ಷಗಾನ ಬಯಲಾಟವನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಅನುಸರಿಸಿಕೊಂಡು ಅಚ್ಚುಕಟ್ಟಾಗಿ ನೆರವೇರಿಸಿದ್ದರು.
ಅಬ್ದುಲ್ ರಜಾಕ್ ಅವರು ಯಕ್ಷಗಾನದ ಮೇಲೆ ಅಭಿಮಾನ ಹೊಂದಿರುವವರು. ಅವರ ಮನೆಯಂಗಳದ ಜಾಗ ಕೇಳಿದಾಗ ಸಂತೋಷದಿಂದ ಒಪ್ಪಿಗೆ ನೀಡಿದ್ದರು. ಸ್ವತಃ ಯಕ್ಷಗಾನವನ್ನು ವೀಕ್ಷಿಸಿದ್ದಲ್ಲದೆ, ಮುಗಿದ ಬಳಿಕವೂ ಅವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿ ಸಂತೋಷಪಟ್ಟಿದ್ದರು. ಊರಿನವರೂ ಸಹಕಾರ ನೀಡಿದರು. ನಾವೆಲ್ಲರೂ ಒಂದೇ ಸಮಾಜದಲ್ಲಿ ಬದುಕುತ್ತಿರುವಾಗ ಯಾವುದೇ ದ್ವೇಷಗಳಿಲ್ಲದೆ ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕಬೇಕಾಗಿದೆ.
- ನಾಗೇಶ್, ಯಕ್ಷಗಾನ ಆಯೋಜಕರು
ನಾನು ಬಾಲ್ಯದಿಂದಲೂ ಇಡೀ ರಾತ್ರಿ ಕುಳಿತು ಯಕ್ಷಗಾನ ಬಯಲಾಟಗಳನ್ನು ನೋಡುತ್ತಿದ್ದವನು. ಅದಕ್ಕೆ ಹಿಂದೂ- ಮುಸ್ಲಿಮರೆನ್ನುವ ಭೇದವಿಲ್ಲ. ನಮ್ಮ ಮನೆಯಂಗಳದಲ್ಲಿ ಯಕ್ಷಗಾನ ನಡೆದದ್ದು ನನಗೂ ಖುಷಿಯ ಸಂಗತಿ. ಗ್ರಾಮೀಣ ಪ್ರದೇಶಗಳಲ್ಲಿ ಧರ್ಮಗಳ ನಡುವಿನ ಸಹಬಾಳ್ವೆ ಹಿಂದೆಯೂ ಇತ್ತು, ಈಗಲೂ ಇದೆ. ಈ ಯಕ್ಷಗಾನ ಕೂಡ ತೀರ ಸಹಜ ರೀತಿಯಲ್ಲೇ ಆಗಿದೆ. ಕೋಮು ಭಾವನೆಗಿಂತ ಮಾನವೀಯತೆಯ ಅಂಶ ಮನುಷ್ಯರಲ್ಲಿರುವುದು ಮುಖ್ಯ.
- ಅಬ್ದುಲ್ ರಜಾಕ್, ಯಕ್ಷಗಾನಕ್ಕೆ ಮನೆ ಜಾಗ ನೀಡಿದವರು.