
ಯಾದಗಿರಿ: ಶಹಾಪುರ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನ ಟೈಯರ್ ಏಕಾಏಕಿ ಸಿಡಿದು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಆರು ವರ್ಷದ ಪುತ್ರಿ ಸೇರಿ ಮೂವರು ದುರಂತ ಅಂತ್ಯ ಕಂಡಿದ್ದಾರೆ. ಅಪಘಾತದಲ್ಲಿ ಚಾಲಕ ಸೇರಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಲಾಗಿದೆ.
ತೇಜಸ್ವಿನಿ (30), ಸಹನಾ (22) ಹಾಗೂ ಆರು ವರ್ಷದ ಮುಗ್ಧ ಬಾಲಕಿ ಆರಾಧ್ಯ (06) ಮೃತ ದುರ್ದೈವಿಗಳು. ಇನ್ನು ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತೊಬ್ಬ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.
ಶಹಾಪುರ-ಸುರಪುರ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದೆ. ರಸ್ತಾಪುರ ಕಮಾನ್ ಬಳಿ ಕಾರು ವೇಗವಾಗಿ ಸಾಗುತ್ತಿದ್ದ ವೇಳೆ ಏಕಾಏಕಿ ಟೈಯರ್ ಬ್ಲಾಸ್ಟ್ ಆಗಿದೆ. ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು, ರಸ್ತೆ ಬದಿಯಲ್ಲಿದ್ದ ಮರಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಒಂದು ವೇಳೆ ಟೈಯರ್ ಬ್ಲಾಸ್ಟ್ ಆಗದೇ ಕೊನೆ ಪಕ್ಷ ಪಂಕ್ಚರ್ ಆಗಿದ್ದರೂ ಕೂಡ ಮೂರು ಜೀವಗಳು ಬದುಕುಳಿಯುತ್ತಿದ್ದವು. ಟೈರ್ ಸ್ಫೋಟದಿಂದಲೇ ದುರಂತ ಸಂಭಿಸಿದೆ ಎಂದು ಪ್ರತ್ಯಕ್ಷದರ್ಶಿಗಳ ಅಭಿಪ್ರಾಯವಾಗಿದೆ.
ಮರಕ್ಕೆ ಕಾರು ಅಪ್ಪಳಿಸಿದ ಭೀಕರ ಸದ್ದು ಕೇಳಿ ಸ್ಥಳೀಯ ಗ್ರಾಮಸ್ಥರು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸವಾರರು ಆಘಾತಕ್ಕೆ ಒಳಾಗಿದ್ದಾರೆ. ನಂತರ ಸ್ಥಳಕ್ಕೆ ಹೋಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಕಾರಿನೊಳಗೆ ಸಿಲುಕಿಕೊಂಡಿದ್ದವರನ್ನು ಹೊರತೆಗೆದಿದ್ದಾರೆ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ತಾಯಿ-ಮಗಳು ಸೇರಿ ಮೂವರು ಅಲ್ಲೇ ಪ್ರಾಣ ಬಿಟ್ಟಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇನ್ನು, ವಿಷಯ ತಿಳಿಯುತ್ತಿದ್ದಂತೆಯೇ ಶಹಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.