ಪ್ರದೀಪ್ ಈಶ್ವರ್ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಮುಖಂಡರು, ದೂರುಗಳ ಹೊತ್ತು ದೌಡಾಯಿಸಿದ ನಾಯಕರು

Published : Sep 28, 2026, 10:33 PM IST
pradeep eshwar and bk hariprasad

ಸಾರಾಂಶ

Pradeep Eshwar: ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅವರ ಪಕ್ಷದ ನಾಯಕರಿಂದಲೇ ಅಸಮಾಧಾನ ಭುಗಿಲೆದ್ದಿದೆ. ಯಾರು? ಯಾಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅನ್ನೋ ವಿವರ ಈ ಸ್ಟೋರಿಯಲ್ಲಿದೆ.

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಶಾಸಕ ಪ್ರದೀಪ್ ಈಶ್ವರ್ ಅವರ ಕಾರ್ಯವೈಖರಿ ಮತ್ತು ನಡವಳಿಕೆ ವಿರುದ್ಧ ಸ್ವಪಕ್ಷೀಯ ಮುಖಂಡರೇ ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ. ಶಾಸಕರ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಹೊತ್ತ ಸ್ಥಳೀಯ ಕಾಂಗ್ರೆಸ್ ನಾಯಕರ ನಿಯೋಗ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ದೌಡಾಯಿಸಿ ಅಸಮಾಧಾನ ಹೊರಹಾಕಿದೆ.

ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿಯಾಗಿ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದಲ್ಲಿನ ವಿದ್ಯಮಾನಗಳು ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ಏಕಪಕ್ಷೀಯ ಧೋರಣೆ ಬಗ್ಗೆ ದೂರು ದಾಖಲಿಸಿದ್ದಾರೆ. ಹಿಂದೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಗಮನಕ್ಕೂ ಈ ವಿಚಾರ ಹೋಗಿತ್ತಾದರೂ, ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಮುಖಂಡರು ನೇರವಾಗಿ ಕೆಪಿಸಿಸಿ ಅಂಗಳಕ್ಕೆ ಬಂದು ನ್ಯಾಯಕ್ಕೆ ಆಗ್ರಹಿಸಿದ್ದಾರೆ.

ಆರೋಪ ಏನು?

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಮುಖಂಡರು, ಕೂಡಲೇ ಕ್ಷೇತ್ರಕ್ಕೆ ಕೆಪಿಸಿಸಿಯಿಂದ ವಿಶೇಷ ವೀಕ್ಷಕರನ್ನು ನೇಮಿಸಬೇಕು. ಪಕ್ಷದ ಬೆಳವಣಿಗೆಗಳ ಬಗ್ಗೆ ವೀಕ್ಷಕರು ಹಾಗೂ ಸಮಿತಿ ರಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್‌ನ 18 ಮಂದಿ ಸದಸ್ಯರಿದ್ದರು. ಆದರೆ.. ಶಾಸಕರ ದುರ್ವರ್ತನೆ ಹಾಗೂ ಕಡೆಗಣನೆಯಿಂದ ಬೇಸತ್ತು ಕೆಲ ಸದಸ್ಯರು ಮಾಜಿ ಸಚಿವ ಡಾ.ಕೆ.ಸುಧಾಕರ್ ಜೊತೆ ಗುರುತಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಗುಂಪುಗಾರಿಕೆ ಮಾಡಿದ್ದರಿಂದ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾಗಿದೆ ಎಂಬ ಆರೋಪ ಮಾಡಿದ್ದಾರೆ.

ಕೋಚಿಮುಲ್ ನಿರ್ದೇಶಕ ವೆಂಕಟೇಶ್ ಅವರೂ ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಚಿಮುಲ್ ಚುನಾವಣೆಯಲ್ಲಿ ತಮ್ಮ ವಿರುದ್ಧವೇ ಶಾಸಕರು ಯಲುವಳ್ಳಿ ರಮೇಶ್ ಅವರನ್ನು ಕಣಕ್ಕಿಳಿಸಿ ಪಕ್ಷದಲ್ಲೇ ಒಡಕು ಮೂಡಿಸಿದರು. ವಿವಿಧ ಹುದ್ದೆಗಳ ನಾಮನಿರ್ದೇಶನ ವಿಚಾರದಲ್ಲಿ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಿ, ಬಿಜೆಪಿ ಬೆಂಬಲಿಗರಿಗೆ ಸ್ಥಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಟ್ಯಾಟೂ ಹಾಕಿಸಿಕೊಂಡಿದ್ದ ವ್ಯಕ್ತಿಯನ್ನ ನಾಮನಿರ್ದೇಶನ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

ಕ್ಷೇತ್ರದಲ್ಲಿ ಶಾಸಕರು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಲು ಲಭ್ಯವಾಗುತ್ತಿಲ್ಲ. ಎಲ್ಲ ನಾಯಕರನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಶಾಸಕರ ಧೋರಣೆಗೆ ಕ್ಷೇತ್ರದಲ್ಲಿ ನಿಷ್ಠಾವಂತ ಕಾರ್ಯಕರ್ತರು ತೀವ್ರ ಮುಜುಗರ ಅನುಭವಿಸುವಂತಾಗಿದೆ. ಶಾಸಕರ ನಡವಳಿಕೆಗಳ ಬಗ್ಗೆ ಪಕ್ಷ ಸಮಗ್ರ ಮಾಹಿತಿ ಸಂಗ್ರಹಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಈ ಬೆಳವಣಿಗೆಯು ಚಿಕ್ಕಬಳ್ಳಾಪುರ ಕಾಂಗ್ರೆಸ್ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿದೆ.

ಇಷ್ಟು ದಿನ ಪ್ರದೀಪ್ ಈಶ್ವರ್ ಅವರನ್ನು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದರು. ಇದೀಗ ತಮ್ಮದೇ ಪಕ್ಷದ, ತಮ್ಮದೇ ಕ್ಷೇತ್ರ ನಾಯಕರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದರಿಂದ ಅವರ ರಾಜಕೀಯ ಬೆಳವಣಿಗೆಗೆ ದೊಡ್ಡ ಹೊಡೆತ ನೀಡಿದರೂ ಅಚ್ಚರಿ ಇಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದನ್ನು ಹೇಗೆ ಬಗೆಹರಿಸಲಿದೆ ಎಂಬುದನ್ನ ಕಾದು ನೋಡಬೇಕಿದೆ.

PREV
Read more Articles on
click me!

Recommended Stories

ನಾನು ಮುಗ್ಧ ಅಂತ ಕೋರ್ಟ್​ ಹೇಳಿದೆ: ಸ್ಫೋಟ ಕೇಸ್​ನಿಂದ ಮುಕ್ತಗೊಂಡು ಕಣ್ಣೀರಿಟ್ಟ ಡ್ರೋನ್​ ಪ್ರತಾಪ್​
'ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಪರ ತೀರ್ಪು ಬಂದರೆ' ಬಿಗ್‌ ಸ್ಟೇಟ್‌ಮೆಂಟ್ ನೀಡಿದ ವಕೀಲ ಹಸ್ಮತ್ ಪಾಷಾ