
ಯಾದಗಿರಿ: ಉಪ ಕಾಲುವೆಯ ಗೇಟುಗಳನ್ನು ಅಧಿಕಾರಿಗಳು ಸಮರ್ಪಕ ನಿರ್ವಹಣೆ ಮಾಡದಿದ್ದರಿಂದ, ಒಣಗುತ್ತಿರುವ ತಮ್ಮ ಬೆಳೆಗಳಿಗೆ ನೀರು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ನೂರಾರು ರೈತರು, ನೀರಾವರಿ ಇಲಾಖೆಯ ಅಧಿಕಾರಿಯನ್ನೇ ಜೀಪಿನ ಬಾನೆಟ್ ಮೇಲೆ ಕುಳ್ಳಿರಿಸಿ, ಪ್ರತಿಭಟನೆ ನಡೆಸಿದ ಘಟನೆ ಕೆಂಭಾವಿ ಪಟ್ಟಣದ ಸುರಪುರ-ಹುನಗುಂದ ರಾಜ್ಯ ಹೆದ್ದಾರಿಯ ಕಿತ್ತೂರ ರಾಣಿ ಚೆನ್ನಮ್ಮ (ಎಸ್.ಬಿ.ಐ) ವೃತ್ತದಲ್ಲಿ ಶನಿವಾರ ನಡೆದಿದೆ.
ಶಹಾಪುರ ಶಾಖಾ ಕಾಲುವೆಯ, ಕೆಂಭಾವಿ ಸಮೀಪದ ಉಪ ಕಾಲುವೆಯ ಗೇಟುಗಳು ತುಕ್ಕು ಹಿಡಿದು, ಕೆಟ್ಟು ಹೋಗಿವೆ. ಮುಖ್ಯ ಕಾಲುವೆಯಲ್ಲಿ ನೀರು ಹರಿಯುತ್ತಿದ್ದು, ಗೇಟುಗಳನ್ನು ದುರಸ್ತಿ ಮಾಡಿಸುವಂತೆ ಕಳೆದ ಕೆಲವು ದಿನಗಳಿಂದ ರೈತರು ಅಧಿಕಾರಿಗಳಿಗೆ ತಿಳಿಸಿದ್ದಾಗ್ಯೂ ಕೂಡ, ಗೇಟುಗಳು ದುರಸ್ತಿಯಾಗದೆ ಒಣಗುತ್ತಿರುವ ಬೆಳೆಗಳಿಗೆ ನೀರು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಶಹಾಪೂರ ಶಾಖಾ ಕಾಲುವೆಯ ಉಪ ಕಾಲುವೆಯ ಸಂಖ್ಯೆ ಡಿ-1ರಲ್ಲಿ ಬರುವ ಶಹಾಪೂರ ಮತಕ್ಷೇತ್ರದ ಪರಸನಹಳ್ಳಿ, ಹೆಗ್ಗಣದೊಡ್ಡಿ, ಮಾಲಗತ್ತಿ, ಕತರಡಕಲ್, ಜೈನಾಪೂರ, ಗೊಡ್ರಿಹಾಳ ಹಾಗೂ ಸುರಪುರದ ಕೂಡಲಗಿ, ಬೈಚಬಾಳ, ಕಚನೂರ ಸೇರಿದಂತೆ ಕಾಲುವೆ ಕೊನೆಯ ಭಾಗದ ನೂರಾರು ರೈತರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ಮಾಲಗತ್ತಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಅಶೋಕ ಅವರನ್ನು ಇಲಾಖೆಯ ಜೀಪ್ ಬಾನೆಟ್ ಮೇಲೆ ಕುಳ್ಳಿರಿಸಿ, ತಾಸುಗಟ್ಟಲೆ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಉಪ ಕಾಲುವೆಯ ಸಮರ್ಪಕ ನಿರ್ವಹಣೆ ಮಾಡಿಲ್ಲ ಎಂದು ದೂರಿ, ಅಧಿಕಾರಿಗಳ ನಡೆ ಖಂಡಿಸಿ, ರೊಚಿಗೆದ್ದ ಶಹಾಪೂರ ಹಾಗೂ ಸುರಪುರ ಹಲವು ಗ್ರಾಮಗಳ ನೂರಾರು ರೈತರು ಕೆಂಭಾವಿ ಪಟ್ಟಣದ ಸುರಪುರ-ಹುನಗುಂದ ಹೆದ್ದಾರಿಯ ಕಿತ್ತೂರ ರಾಣಿ ಚೆನ್ನಮ್ಮ (ಎಸ್.ಬಿ.ಐ) ವೃತ್ತದಲ್ಲಿ ಅಧಿಕಾರಿಗಳಿಗೆ ಘೇರಾವ್ ಹಾಕಿ ಬೃಹತ್ ಪ್ರತಿಭಟನೆ ನಡೆಸಿದರು.
ಕಳೆದೊಂದು ವಾರದಿಂದ ಉಪಕಾಲುವೆಯ ಗೇಟ್ ಸಂಪೂರ್ಣ ಕೆಟ್ಟುಹೋಗಿ, ಕಾಲುವೆಯಲ್ಲಿ ಕುಸಿದು ಬಿದ್ದಿದೆ. ಇದೀಗ ನೀರು ಬಂದಿದ್ದು ನೀರಿನ ರಭಸದಿಂದ ಗೇಟ್ ದುರಸ್ತಿ ಕಾರ್ಯ ಕಷ್ಟಸಾಧ್ಯವಾಗಿದ್ದು, ಈ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಬಿತ್ತಿದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದೆ. ರೈತರೇ ಸಾವಿರಾರು ರೂಪಾಯಿ ಖರ್ಚು ಮಾಡಿ ಗೇಟ್ ದುರಸ್ತಿಗೆ ಮುಂದಾಗಿದ್ದರೂ ಹಣ ವ್ಯರ್ಥವಾಯಿತೇ ಹೊರತು ಗೇಟ್ ಮಾತ್ರ ದುರಸ್ತಿ ಆಗಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಪ್ರತಿಭಟನೆ ಸುದ್ದಿ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಶಹಾಪೂರ ಸಿಪಿಐ ದೀಪಕ್ ಭೋಸರೆಡ್ಡಿ, ಪ್ರತಿಭಟನಾಕಾರ ಜೊತೆ ಮತ್ತು ಅಧಿಕಾರಿಗಳ ಜೊತೆ ಮಾತನಾಡಿ, ಕೆಲವೇ ಗಂಟೆಗಳಲ್ಲಿ ನಾನೇ ಖುದ್ದಾಗಿ ಸ್ಥಳದಲ್ಲಿದ್ದು ಗೇಟ್ ದುರಸ್ತಿಗೊಳಿಸಿ ರೈತರಿಗೆ ನೀರು ಒದಗಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಮುಖ್ಯರಸ್ತೆಯಲ್ಲಿ ದಿಢೀರ್ ನಡೆದ ಈ ಪ್ರತಿಭಟನೆಯಿಂದ ಹಲವು ಬಸ್ಸುಗಳು ಹಾಗೂ ಖಾಸಗಿ ವಾಹನಗಳು ಮುಖ್ಯ ರಸ್ತೆಯ ಮೇಲೆ ನಿಂತಿದ್ದರೆ, ಇನ್ನೂ ಕೆಲವು ಬಸ್ಸುಗಳು ಮತ್ತು ಖಾಸಗಿ ವಾಹನಗಳು ಕಾಲುವೆಯ ಎಡಭಾಗದ ಕಚ್ಚಾರಸ್ತೆಯ ಮೂಲಕ ಸಂಚಾರ ನಡೆಸಿದವು. ದಿಢೀರ್ ಪ್ರತಿಭಟನೆಯಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ಕೆಲಕಾಳ ಪರದಾಡುವಂತಾಗಿತ್ತು.
ಪರಸನಹಳ್ಳಿ ಸಮೀಪ ಉಪ ಕಾಲುವೆಯ ಮುಖ್ಯ ಗೇಟ್ ಒಡೆದು ಹಲವು ದಿನಗಳು ಕಳೆದಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಅಲಕ್ಷ್ಯ ವಹಿಸಿದ್ದು, ಇದೀಗ ಕಾಲುವೆಯಲ್ಲಿ ನೀರು ಬಂದಿದ್ದು ರೈತರಿಗೆ ನೀರು ಸಿಗದಂತಾಗಿದೆ. ಬಿತ್ತಿದ ಬೆಳೆಗಳು ಒಣಗುವ ಹಂತಕ್ಕೆ ತಲುಪಿದ್ದು ಕೂಡಲೆ ಅಧಿಕಾರಿಗಳು ದುರಸ್ತಿಗೊಳಿಸಿ ಕಾಲುವೆಯ ಕೊನೆಯ ಅಂಚಿನ ರೈತರಿಗೆ ನೀರು ತಲುಪುವಂತೆ ನಿಗಾ ವಹಿಸಬೇಕು.
ದೇವಪ್ಪ, ಕೂಡಲಗಿ ಗ್ರಾಮದ ರೈತ.