
ಯಾದಗಿರಿ: ತಂದೆಯೇ ತನ್ನ ಎರಡು ಮಕ್ಕಳನ್ನ ಕಾಲುವೆಗೆ ಎಸೆದು ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರ 24 ಗಂಟೆಗಳ ಶೋಧದ ಬಳಿಕ ಎರಡು ಮಕ್ಕಳ ಶವಪತ್ತೆಯಾಗಿವೆ. ಶಹಾಪುರ ತಾಲೂಕಿನ ಗಂಗನಾಳ್ ಗ್ರಾಮದ ಶಾಂತಪ್ಪ ಬಿರಾದಾರ ಎಂಬಾತನೆ ತನ್ನ ಇಬ್ಬರು ಮಕ್ಕಳನ್ನ ಕಾಲುವೆಗೆಸೆದು ಪೈಸಾಚಿಕ ಕೃತ್ಯ ಮೆರೆದಿದ್ದ.
ಆರೋಪಿ ಶಾಂತಪ್ಪ ಗೋಗಿ, ಪತ್ನಿಯೊಂದಿಗೆ ಜಗಳ ಮಾಡಿ ಮೂವರು ಮಕ್ಕಳನ್ನು ತನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಗ್ರಾಮದ ಬಳಿಯ ಬಸವಸಾಗರ ಜಲಾಶಯದ ಎಡೆದಂಡೆ ಕಾಲುವೆಗೆ ಇಬ್ಬರು ಮಕ್ಕಳನ್ನ ಬಿಸಾಕಿ, ಓರ್ವ ಮಗಳನ್ನು ಮಾತ್ರ ವಾಪಸ್ ಪತ್ನಿಯ ಬಳಿ ಕರೆದುಕೊಂಡು ಬಂದು ಬಿಟ್ಟಿದ್ದ.
ಆಗಸ್ಟ್ 18ರ ಮಧ್ಯಾಹ್ನ ಪತ್ನಿ ರೇಣುಕಾ ಜೊತೆ ಜಗಳವಾಡಿ ತನ್ನ ಮೂವರು ಮಕ್ಕಳನ್ನ ಬೈಕ್ ಮೇಲೆ ಕರೆದುಕೊಂಡು ಹೋಗಿದ್ದ. ಮೂವರು ಮಕ್ಕಳಲ್ಲಿ ಸಾನ್ವಿ ಮತ್ತು ಎರಡು ವರ್ಷದ ಪುಟ್ಟ ಮಗು ಸೃಜನ್ ನನ್ನು ಕಾಲುವೆಗೆ ಎಸೆದು ಬಂದಿದ್ದ. ಆ ಬಳಿಕ ಓರ್ವ ಮಗಳು ಸಂಜನಾಳ ಜೊತೆ ಯಾದಗಿರಿಗೆ ಬಂದು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದನಂತೆ.
ಕೂಡಲೇ ಎಚ್ಚೆತ್ತುಕೊಂಡು ಪೊಲೀಸರು ವಿಚಾರಣೆ ನಡೆಸಿದ ವೇಳೆ ಇಬ್ಬರು ಮಕ್ಕಳಿಗೆ ಕಾಲುವೆಗೆ ಎಸೆದ ಬಗ್ಗೆ ತಿಳಿಸಿದ್ದ. ಪೊಲೀಸರು ಗೋಗಿ ವ್ಯಾಪ್ತಿಯ ಕಾಲುವೆಯಲ್ಲಿ ಮಕ್ಕಳ ಶವಕ್ಕಾಗಿ ಕಾರ್ಯಚರಣೆಗೆ ಮುಂದಾಗಿದ್ದರು, ಮಂಗಳವಾರ ಸಂಜೆಯಿಂದ ಪ್ರಾರಂಭವಾದ ಕಾರ್ಯಾಚರಣೆ ಬುಧವಾರ ಸಂಜೆವರೆಗೂ ನಿರಂತರ ಹುಡುಕಾಟದಿಂದ ಇಬ್ಬರು ಮಕ್ಕಳ ಪತ್ತೆಹಚ್ಚಲಾಗಿದೆ.
ಬಾಣತಿಯಾಳ ಗ್ರಾಮದ ಬಳಿಯ ಉಪಕಾಲುವೆಯಲ್ಲಿ ಮುಳ್ಳಿನ ಗಿಡಕ್ಕೆ ಕಂಟಿಗೆ ಸಿಕ್ಕಿಕೊಂಡ ಸ್ಥಿತಿಯಲ್ಲಿ ಸೃಜನ್(02) ಮೃತದೇಹ ಪತ್ತೆಯಾದರೆ, ಇನ್ನೊರ್ವ ಮಗಳು ಸಾನ್ವಿ (07) ಮೃತದೇಹ ಬೊರುಕಾ ಗೇಟ್ ಬಳಿ ಪತ್ತೆಯಾಗಿದೆ.
ಪತ್ನಿ ರೇಣುಕಾ, ಪತಿ ಶಾಂತಪ್ಪ ನಡುವೆ ನಿರಂತರ ಜಗಳ ನಡೆಯುತಿತ್ತಂತೆ. ಆ.18 ರ ಮಧ್ಯಾಹ್ನ ಕೂಡ ಇದೇ ರೀತಿ ಜಗಳ ನಡೆಸಿದ್ದು, ಆಗ ಆರೋಪಿ ಮಕ್ಕಳನ್ನು ಕರೆದುಕೊಂಡು ಮನೆಯಿಂದ ಹೊರ ಬಂದಿದ್ದಾನೆ.
ಪೊಲೀಸರ ವಿಚಾರಣೆ ವಿಚಿತ್ರ ಹೇಳಿಕೆ ಕೊಟ್ಟಿರುವ ಶಾಂತಪ್ಪ ಕೊಂದಿರುವ ಇಬ್ಬರು ಮಕ್ಕಳು ತಾಯಿ ಜೊತೆ ಹೆಚ್ಚು ಅನ್ಯೋನ್ಯತೆಯಿಂದ ಇರುತ್ತಿದ್ದರು. ಇದೇ ಕಾರಣಕ್ಕೆ ಇಬ್ಬರನ್ನ ಕೊಲೆಗೈದಿರುವುದಾಗಿ ಹೇಳಿದಾನಂತೆ. ಇನ್ನು ಶಾಂತಪ್ಪ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆಂದು ಎಸ್‌ಪಿ ಹೇಳಿದ್ದಾರೆ. ಸದ್ಯ ಎರಡು ಮಕ್ಕಳ ಶವವನ್ನ ಮರಣೋತ್ತರ ಪರೀಕ್ಷೆ ಮುಗಿಸಿ ಅಂತ್ಯ ಕ್ರಿಯೆಗಾಗಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದ್ದು, ಮಕ್ಕಳ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಶಾಂತಪ್ಪನಿಗೆ ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ. (ವರದಿ: ಲಿಂಗೇಶ್ ಮರಕಲೆ, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ)