
ಬೆಂಗಳೂರು(ಫೆ.24): ದೇಶದ ಜನತೆ ಕೇಂದ್ರ ಸರ್ಕಾರವನ್ನು ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಕುಸಿತದ ಬಗ್ಗೆ ಪ್ರಶ್ನೆ ಮಾಡಿದರೆ, ಪೌರತ್ವ ದಾಖಲೆ ತೋರಿಸುವಂತೆ ಬೆದರಿಸಲಾಗುತ್ತಿದೆ ಎಂದು ಸಾಹಿತಿ ದೇವನೂರು ಮಹದೇವ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತೀಯ ಸಂವಿಧಾನಿಕ ಮೌಲ್ಯಗಳನ್ನು ಅನುಷ್ಠಾನಗೊಳಿಸುವಂತೆ ಹಾಗೂ ಎನ್‌ಆರ್‌ಸಿ, ಸಿಎಎ ವಾಪಸ್ ಪಡೆಯುವಂತೆ ಆಗ್ರಹಿಸಿ ಭಾನುವಾರ ನಗರಕ್ಕೆ ಆಗಮಿಸಿದ್ದ ಹಿರಿಯ ಸಮಾಜವಾದಿಗಳ ನೇತೃತ್ವದ ತಂಡವನ್ನು ನಗರದ ಪುರಭವನದ ಎದುರು ಸ್ವಾಗತಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಪ್ರಗತಿಪರ, ದಲಿತ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ. ಹೀಗಾಗಿ ತಮ್ಮ ಬಣಗಳನ್ನು ಬದಿಗಿಟ್ಟು ಒಂದೇ ವೇದಿಕೆಯಲ್ಲಿ ಎನ್‌ಆರ್‌ಸಿ, ಸಿಎಎ ವಿರುದ್ಧದ ಹೋರಾಟವನ್ನು ಮುನ್ನಡೆಸುವ ಅಗತ್ಯವಿದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಮಾತನಾಡಿ, ದೇಶದಲ್ಲಿ ಆರ್ಥಿಕತೆ ಕುಸಿದು ನಿರುದ್ಯೋಗ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ ಕೃಷಿ ವಿರುದ್ಧದ ಒಡಂಬಡಿಕೆಗಳಿಗೆ ಮುಂದಾಗಿದೆ. ಇದನ್ನು ಮರೆಮಾಚಲು ಸಿಎಎ, ಎನ್‌ಆರ್‌ಸಿ ಜಾರಿಯ ಹುನ್ನಾರ ನಡೆಸಿದೆ ಎಂದು ವಿದೇಶಿ ಪತ್ರಿಕೆಗಳು ವಿಶ್ಲೇಷಿಸುತ್ತಿವೆ. ಈ ಬಗ್ಗೆಯೂ ಗಂಭೀರವಾಗಿ ಆಲೋಚಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಮಾಜಿ ಶಾಸಕ ಬಿ.ಆರ್.ಪಾಟೀಲ, ಸಮಾಜವಾದಿ ಮುಖಂಡ ಅಲಿಬಾಬಾ, ರೈತ ಮುಖಂಡ ಚಾಮರಸ ಪಾಟೀಲ್, ದಲಿತ ಮುಖಂಡ ಲಕ್ಷ್ಮಿ ನಾರಾಯಣ ನಾಗವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.