Belagavi: ಸುವರ್ಣಸೌಧ ಎದುರು ಶಾವಿಗೆ ಒಣಹಾಕಿ ಕೆಲಸ ಕಳೆದುಕೊಂಡ ಕಾರ್ಮಿಕ ಮಹಿಳೆ

Published : Jun 01, 2022, 05:35 PM ISTUpdated : Jun 01, 2022, 05:37 PM IST
Belagavi: ಸುವರ್ಣಸೌಧ ಎದುರು ಶಾವಿಗೆ ಒಣಹಾಕಿ ಕೆಲಸ ಕಳೆದುಕೊಂಡ ಕಾರ್ಮಿಕ ಮಹಿಳೆ

ಸಾರಾಂಶ

*ಶಾವಿಗೆ ಒಣಹಾಕಿದ ಕಾರ್ಮಿಕ ಮಹಿಳೆ ಕೆಲಸದಿಂದ ವಜಾ *'ಕೊನೆಗೆ ಬಲಿ ಆಗೋರು ಬಡಪಾಯಿಗಳೇ' ಎಂದ ಶಾಸಕ ಪಿ.ರಾಜೀವ್ *ಸುವರ್ಣಸೌಧಕ್ಕೆ ಭೇಟಿ ನೀಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಡಿಸಿ

ವರದಿ: ಮಹಾಂತೇಶ ಕುರಬೇಟ್, ಬೆಳಗಾವಿ

ಬೆಳಗಾವಿ (ಜೂ 01): ಬೆಳಗಾವಿಯ ಸುವರ್ಣ ವಿಧಾನಸೌಧ (Suvarna Vidhana Soudha) ಎದುರು ಶಾವಿಗೆ ಒಣಹಾಕಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಈ ಸಂಬಂಧ ಲೋಕೋಪಯೋಗಿ ಇಲಾಖೆ ಸುವರ್ಣ ವಿಧಾನಸೌಧ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುವರ್ಣಸೌಧ ಸ್ವಚ್ಛತಾ ನಿರ್ವಹಣೆ ಟೆಂಡರ್ ಪಡೆದಿದ್ದ ಗುತ್ತಿಗೆದಾರನಿಗೆ ನೋಟಿಸ್ ನೀಡಿದ್ದರು. ಈ ಸಂಬಂಧ ಗುತ್ತಿಗೆದಾರ ಕಾರ್ಮಿಕ ಮಹಿಳೆಯಿಂದ ಅಚಾತುರ್ಯವಾಗಿದ್ದು, ಕಾರ್ಮಿಕ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. 

ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸೋದಾಗಿ ಗುತ್ತಿಗೆದಾರರು ಹೇಳಿದ್ದಾರೆ. ಈ ರೀತಿ ಘಟನೆ ಮರುಕಳಿಸಿದರೆ ನೇರವಾಗಿ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಾಗಿ ಎಚ್ಚರಿಸಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಬೆಳಗಾವಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಪತ್ರ ಬರೆದು ತಿಳಿಸಿದ್ದಾರೆ. ತಾನು ಮಾಡಿದ ಅಚಾತುರ್ಯದಿಂದ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ ದಿನಗೂಲಿ ಕಾರ್ಮಿಕ ಮಹಿಳೆ ಈಗ ಕೆಲಸ ಕಳೆದುಕೊಂಡಿದ್ದಾಳೆ.

ಇನ್ನು ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಕಾರ್ಮಿಕ ಮಹಿಳೆಯನ್ನು ಅಧಿಕಾರಿಗಳು ಕೆಲಸದಿಂದ ಕಿತ್ತು ಹಾಕಿರುವುದು ಅನ್ಯಾಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಕೆಲ ನಟ್ಟಿಗರು #IStandWithMallavva ಹ್ಯಾಶ್‌ಟ್ಯಾಗ್ ಮೂಲಕ  ಕಾರ್ಮಿಕ ಮಹಿಳೆ ಬೆಂಬಲಕ್ಕೆ ನಿಂತಿದ್ದಾರೆ.  

'ಯಾರನ್ನೋ ಒಬ್ಬರನ್ನು ಬಲಿ ಹಾಕಿ ರಕ್ಷಣೆ ಮಾಡಿಕೊಳ್ಳೋದು ತಪ್ಪು':  ಇನ್ನು ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಪಿ.ರಾಜೀವ್ (P Rajeev) 'ಶಾವಿಗೆ ಒಣ ಹಾಕಿದ ಶ್ರಮಿಕ ವರ್ಗದವರಿಗೆ ಅವಮಾನಿಸುವ ಯಾವ ಉದ್ದೇಶ ಇಲ್ಲ. ಅವರ ಕರ್ತವ್ಯವನ್ನು ಗೌರವಿಸುತ್ತೇನೆ ಆದರೆ ಆ ಸ್ಥಳ ಉಪಯೋಗಿಸುವುದು ಸೂಕ್ತವಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ ಆಡಳಿತದಲ್ಲಿ ಹಿಂದುಳಿದಿದೆ ಎಂಬ ಆರೋಪವಿದೆ. ಉತ್ತರ ಕರ್ನಾಟಕ ಅಭಿವದ್ಧಿಗೊಳಿಸುವ ಉದ್ದೇಶದಿಂದ ಸುವರ್ಣ ವಿಧಾನಸೌಧ ಕಟ್ಟಿದ್ದೇವೆ. ಸುವರ್ಣಸೌಧ ಸದ್ಭಳಕೆ ಆಗಬೇಕು ಕೆಲವೊಂದು ಇಲಾಖೆಗಳು ವರ್ಗಾವಣೆ ಮಾಡಿದ್ದೇವೆ. ಉಸ್ತುವಾರಿ ಹೊತ್ತಿರುವ ಅಧಿಕಾರಿಗಳೂ ಅದರ ಘನತೆ ಗೌರವ ಕಾಪಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ' ಎಂದರು. 

ಇದನ್ನೂ ಓದಿ: ಚಲಿಸುತ್ತಿದ್ದಾಗಲೇ ಎರಡು ಭಾಗವಾದ ಪಿಕ್ಅಪ್ ವಾಹನ: ರಸ್ತೆಗುರುಳಿದ ಜನ

ಇನ್ನು ಈ ಸುವರ್ಣ ಸೌಧದಲ್ಲಿ ಜಿಲ್ಲಾ ಮಟ್ಟದ ಕಚೇರಿಗಳು ಬಿಟ್ಟು ರಾಜ್ಯ ಮಟ್ಟದ ಕಚೇರಿಗಳು ಸ್ಥಳಾಂತರ ಆಗುತ್ತಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಪಿ.ರಾಜೀವ್, 'ಸುಮ್ಮನೆ ಹೇಳಿಕೆಗೆ ಇಲ್ಲಿ ಇಲಾಖೆಗಳನ್ನು ತಂದು ಓಡಾಟ ಆಗಬಾರದು. ಆಡಳಿತಾತ್ಮಕ ಸುಧಾರಣೆ ಯಾವ್ಯಾವುದನ್ನು ಮಾಡಬಹುದು ಎಂದು ಈ ಕುರಿತು ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪನವರು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆ ಸಮಿತಿ ಏನು ಶಿಫಾರಸು ಮಾಡುತ್ತೆ ಅದೆಲ್ಲವನ್ನೂ ನೋಡಿ ಸುವರ್ಣಸೌಧ ಸದ್ಭಳಕೆ ಮಾಡುವ ಚಿಂತನೆ ನಡೀತಿದೆ' ಎಂದರು‌. 

ಇನ್ನು ಶಾವಿಗೆ ಒಣ ಹಾಕಿದ ಶ್ರಮಿಕ ಮಹಿಳೆಯನ್ನ ಕೆಲಸದಿಂದ ವಜಾಗೊಳಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, 'ಯಾರನ್ನೋ ಒಬ್ಬರನ್ನು ಬಲಿ ಹಾಕಿ ರಕ್ಷಣೆ ಮಾಡಿಕೊಳ್ಳೋದು ತಪ್ಪು. ಕೊನೆಗೆ ಬಲಿ ಆಗುವವರು ಬಡಪಾಯಿಗಳೇ ಅದು ಆಗಬಾರದು ಇದರ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಇನ್ನುಮುಂದೆ ಈ ತರಹ ಘಟನೆಗಳು ಆಗಬಾರದು ಇದು ಸದ್ಭಳಕೆ ಆಗಬೇಕು' ಎಂದರು.

ಸುವರ್ಣಸೌಧಕ್ಕೆ ಭೇಟಿ ನೀಡಿದ ಡಿಸಿ: ಅಧಿಕಾರಿಗಳಿಗೆ ಎಚ್ಚರಿಕೆ:  ಇನ್ನು ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡಿದ ಡಿಸಿ ನಿತೇಶ್ ಪಾಟೀಲ್, 'ಸುವರ್ಣ ವಿಧಾನಸೌಧದ ಘನತೆ ಗಮನದಲ್ಲಿಟ್ಟುಕೊಂಡು ಅಲ್ಲಿನ ಭದ್ರತೆ, ಸ್ವಚ್ಛತೆ ಸೇರಿ ಒಟ್ಟಾರೆ ನಿರ್ವಹಣೆಗೆ ಸರಕಾರದ ಮಾರ್ಗಸೂಚಿ ಪ್ರಕಾರ ಎಲ್ಲ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು‌. 

ಸುವರ್ಣ ವಿಧಾನಸೌಧದ ನಿರ್ವಹಣೆ ಮಾಡುತ್ತಿರುವ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ  ಕಾರ್ಮಿಕರ ಜತೆ ಚರ್ಚೆ ನಡೆಸಿದ ಜಿಲ್ಲಾಧಿಕಾರಿ, "ಸುವರ್ಣ ವಿಧಾನಸೌಧದ ಮುಂದೆ ಶಾವಿಗೆ ಒಣಹಾಕಿದ್ದ ಮಹಿಳಾ ಕಾರ್ಮಿಕರೊಬ್ಬರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು. ಸ್ವಚ್ಛತೆ ಸೇರಿ ಮತ್ತಿತರ ದೈನಂದಿನ ನಿರ್ವಹಣೆಯ ಕೆಲಸಕಾರ್ಯಗಳಿಗೆ ನಿಯೋಜಿಸಲಾಗುವ ಸಿಬ್ಬಂದಿ ಹಾಗೂ ಕಾರ್ಮಿಕರು ಶಿಸ್ತುಬದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು" ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ: ತಾಯಿಯರಿಬ್ಬರ ಅಪೂರ್ವ ಸಮ್ಮಿಲನ... ಮನುಷ್ಯರಲ್ಲೂ ಇಲ್ಲದ ಅನುಬಂಧವಿದು: ವಿಡಿಯೋ

"ಪ್ರತಿಯೊಬ್ಬರನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ, ಗುರುತಿನ ಚೀಟಿ ಪರಿಶೀಲಿಸಿ ಪ್ರವೇಶ ಕಲ್ಪಿಸಬೇಕು. ಯಾವುದೇ ರೀತಿಯ ಕೆಲಸಗಳನ್ನು ‌ಮಾಡುವಾಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಸಲಹೆ-ಸೂಚನೆ ತಪ್ಪದೇ ಪಾಲಿಸಬೇಕು. ಯಾವುದೇ ರೀತಿಯ ಅಚಾತುರ್ಯ ಉಂಟಾದರೆ ಅವರನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದೇವ"' ಎಂದು ಡಿಸಿ ನಿತೇಶ್ ಪಾಟೀಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಒಟ್ಟಾರೆಯಾಗಿ ಸುವರ್ಣಸೌಧ ಎದುರು ಶಾವಿಗೆ ಒಣಹಾಕಿದ ವಿಚಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಮಿಕ ಮಹಿಳೆ ಅಚಾತುರ್ಯದಿಂದ ಈ ಘಟನೆ ನಡೆದಿದ್ದೇನೋ ನಿಜ ಶಾಸಕ ಪಿ.ರಾಜೀವ್‌ರವರೇ ಹೇಳುವಂತೆ ಕೊನೆಗೆ ಬಲಿಪಶು ಆಗೋದು ಬಡಿಪಾಯಿಗಳೇ ಅನ್ನೋದು ನಿಜ. ಆದ್ರೆ ಸುವರ್ಣ ವಿಧಾನಸೌಧ ನಿರ್ವಹಣೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧವೂ ಸೂಕ್ತ ಕ್ರಮವಾಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ. 

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ