ಚಿಕ್ಕಮಗಳೂರು: ದಶಕಗಳಿಂದ ಹದಗೆಟ್ಟ ರಸ್ತೆ: ರಿಪೇರಿಗೆ ಆಗ್ರಹಿಸಿ ರೋಡ್‌ನಲ್ಲಿ ಗಿಡನೆಟ್ಟು ಮಹಿಳೆಯರ ಪ್ರತಿಭಟನೆ

By Girish Goudar  |  First Published Sep 10, 2022, 9:21 PM IST

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಆವತಿ ಗ್ರಾಮದಲ್ಲಿ ನಡೆದ ಘಟನೆ 


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಸೆ.10): ರಸ್ತೆ ತಡೆ ನಡೆಸಿ ಗುಂಡಿಗಳಲ್ಲಿ ಕಾಫಿ ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸಿದ ಮಹಿಳೆಯರು ಗಂಟೆಗಟ್ಟಲೇ ವಾಹನಗಳನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಆವತಿ ಗ್ರಾಮದಲ್ಲಿ ನಡೆದಿದೆ.  ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಆವತಿ ಸಮೀಪದ ಹತ್ತಾರು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದ್ದರೂ ದಶಕಗಳಿಂದ ರಸ್ತೆ ದುರಸ್ತಿ ಕಂಡಿಲ್ಲ ಎಂದು ಗ್ರಾಮದ ಜನರು ಪ್ರತಿಭಟನೆ ನಡೆಸಿದರು. ನಿತ್ಯ ಸರ್ಕಾರಿ ಬಸ್ಸು ಖಾಸಗಿ ಬಸ್ಸುಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತವೆ ಆದರೆ ನಿರಂತರ ಮಳೆಯಿಂದಾಗಿ ರಸ್ತೆ ತೀವ್ರ ಹದಗೆಟ್ಟಿದೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು. 

Latest Videos

undefined

ಪ್ರತಿಭಟನೆ ಹಿನ್ನೆಲೆಯಲ್ಲಿ ಆವತಿ ಗ್ರಾಮದಲ್ಲಿ ಇಂದು ನಡೆಬೇಕಿದ್ದ ವಾರದ ಸಂತೆ ಸಹಾ ರದ್ದು ಮಾಡಲಾಗಿತ್ತು ಅಲ್ಲದೇ ಗ್ರಾಮದ ಪ್ರಮುಖ ರಸ್ತೆಯ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು, ಗ್ರಾಮದ ಮಹಿಳೆಯರೇ ಸೇರಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಸ್ಥಳೀಯ ಎಲ್ಲಾ ಗ್ರಾಮಸ್ಥರು ಬೆಂಬಲ ನೀಡಿದ್ದರು. ಅಲ್ಲದೇ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳ ಮುಖಂಡರು ಸಹಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

ಚಿಕ್ಕಮಗಳೂರು: ಕಾಫಿನಾಡಲ್ಲಿ ಎಂ.ಬಿ.ಪಾಟೀಲ್ ಟೆಂಪಲ್ ರನ್

ಚುನಾವಣಾ ಬಹಿಷ್ಕಾರದ ಎಚ್ಚರಿಕೆ 

ಆವತಿಯಲ್ಲಿ ಕಳೆದ ಒಂದು ದಶಕದಿಂದ ರಸ್ತೆಯಲ್ಲಿ ಯಾವುದೇ ಕಾಂಕ್ರೀಕರಣಗೊಂಡಿಲ್ಲ. ಈ ಬಗ್ಗೆ ಹಲವಾರು ಬಾರಿ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜೆಡಿಎಸ್ ಮುಖಂಡ ಹೊಲದಗದ್ದೆ ಗಿರೀಶ್ ಆರೋಪಿಸಿದರು .ಅಲ್ಲದೆ ಮುಂದಿನ ದಿನಗಳಲ್ಲಿ ರಸ್ತೆ ದುರಸ್ಥಿಪಡಿಸದಿದ್ದಲ್ಲಿ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು.ರಸ್ತೆಯು ತೀವ್ರ ಮಟ್ಟದಲ್ಲಿ ಹದಗೆಟ್ಟಿರುವ ಪರಿಣಾಮ ಕೆಲವು ಮಂದಿ ಅಪಘಾತಕ್ಕೊಳಗಾಗಿ ಗಾಯಗಳಾಗಿರುವುದು ಉಂಟು. ಇದೇ ಮಾರ್ಗದಲ್ಲಿ ಸರ್ಕಾರಿ ಬಸ್ಸುಗಳು ಸೇರಿದಂತೆ ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ತುರ್ತು ಸಂದರ್ಭದಲ್ಲಿ ಗ್ರಾಮದ ನಿವಾಸಿಗಳು ನಗರಕ್ಕೆ ತೆರಳಲು ಪ್ರಯತ್ನಿಸಿದರೆ ಸ್ಥಳದಲ್ಲೇ ಏನಾಗಬಹುದೆಂಬ ಆತಂಕ ಕಾಡುತ್ತದೆ ಎಂದರು.ರಸ್ತೆ ಕಾಮಗಾರಿಗೆ ಸುಮಾರು 70 ಲಕ್ಷ ರೂ. ಹಣ ಬಿಡುಗಡೆಯಾಗಿದೆ ಎನ್ನುತ್ತಾರೆ. ಆದರೆ ಇದುವರೆಗೂ ಯಾವುದೇ ಕಾಮಗಾರಿ ನಡೆಸಿರುವುದು ಕಂಡುಬಂದಿಲ್ಲ. ಕೇವಲ ರಸ್ತೆಗಳನ್ನು ತೇಪೆಹಾಕುವ ಕೆಲಸ ಮಾಡುತ್ತಿದ್ದಾರೆಯೇ ಹೊರತು ಶಾಶ್ವತವಾಗಿ ರಸ್ತೆಯನ್ನು ನಿರ್ಮಿಸಲು ಮುಂದಾಗುತ್ತಿಲ್ಲ. ಆವತಿಯಲ್ಲಿ ನಾಡಕಚೇರಿ, ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಂಘ, ಪ್ರೌಢಶಾಲೆಯನ್ನು ಹೊಂದಿರುವ ದೊಡ್ಡ ಹೋಬಳಿ. ಈ ಮಾರ್ಗವಾಗಿ ಸುಮಾರು ಹತ್ತಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಸಂಚರಿಸುತ್ತಿದ್ದು ಬಹುತೇಕ ಹದಗೆಟ್ಟಿರುವ ರಸ್ತೆಯಿಂದ ಪ್ರಾಣಭಯದಿಂದ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.ಜಕ್ಕನಹಳ್ಳಿಯಿಂದ ಆವತಿ ಮಾರ್ಗವಾಗಿ ತೆರಳುವ ರಸ್ತೆಯು ಹದಗೆಟ್ಟಿರುವುದು ಗ್ರಾಮಸ್ಥರ ದೊಡ್ಡ ಸಮಸ್ಯೆಯಾಗಿದೆ. 

ಈ ಭಾಗದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಡಾಂಬರೀಕರಣಗೊಳಿಸಿದರೆ ಕೆಲ ವರ್ಷಗಳಲ್ಲಿ ರಸ್ತೆ ಹಾಳಾಗುವ ಸಂಭವವಿರು ವುದರಿಂದ ಉತ್ತಮ ಗುಣಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಿಸಿದರೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲ ವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಸುಚೇತನ, ದೀಪ್ತಿ, ಸುನೀತಾ, ಸಂಗೀತ, ಪೂರ್ಣೀಮಾ, ರೇಖಾ, ಸುಶೀಲಾ,.ಶ್ರೀಧರ್ಗೌಡ ಮತ್ತಿತರರು ಹಾಜರಿದ್ದರು.
 

click me!